More

    ಸೋರುತ್ತಿವೆ ಸರ್ಕಾರಿ ವಸತಿಗೃಹ

    ಹರೀಶ್ ಮೋಟುಕಾನ ಮಂಗಳೂರು
    ಹೇಳಿಕೊಳ್ಳಲು ಸರ್ಕಾರಿ ನೌಕರರು. ಆದರೆ ವಾಸ ಟರ್ಪಾಲು ಅಳವಡಿಸಿದ ಮನೆಯಲ್ಲಿ. ಸರ್ಕಾರ ಒದಗಿಸಿದ ವಸತಿಗೃಹಗಳು ಶಿಥಿಲಾವಸ್ಥೆಗೆ ತಲುಪಿದ್ದು, ಮಳೆಗಾಲದಲ್ಲಿ ಸೋರುತ್ತಿವೆ.

    ಮಂಗಳೂರಿನ ಬೋಂದೆಲ್ ಬಳಿ ಇರುವ ಬಹುತೇಕ ಸರ್ಕಾರಿ ವಸತಿಗೃಹಗಳು ಶಿಥಿಲಾವಸ್ಥೆಯಲ್ಲಿವೆ. ಮಳೆ ಬರುವಾಗ ನೀರು ಸೋರುವುದನ್ನು ತಪ್ಪಿಸಲು ಇದರಲ್ಲಿ ವಾಸ ಇರುವವರೇ ಟರ್ಪಾಲು ಅಳವಡಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗಾಳಿ ಬರುವಾಗ ಟರ್ಪಾಲು ಹಾರಿ ಹೋಗುವುದರಿಂದ ನೀರು ಮನೆಯೊಳಗೇ ಬೀಳುತ್ತಿದೆ.

    ಕಂದಾಯ, ನ್ಯಾಯಾಲಯ, ಅಬಕಾರಿ, ಶಿಕ್ಷಣ ಮೊದಲಾದ ಇಲಾಖೆಗಳ ನೌಕರರು ಬೋಂದೆಲ್ ಬಳಿಯ ವಸತಿಗೃಹಗಳಲ್ಲಿ ಇದ್ದಾರೆ. ಲಾಲ್‌ಭಾಗ್ ಬಳಿ ಇರುವ ವಸತಿಗೃಹಗಳೂ ಶಿಥಿಲಾವಸ್ಥೆಯಲ್ಲಿವೆ. ಕೆಲವು ವಸತಿಗೃಹಗಳ ಪಕ್ಕಾಸು ಮುರಿದು ಹೆಂಚು ಬೀಳಲಾರಂಭಿಸಿದ ಕಾರಣ ಅದರಲ್ಲಿ ವಾಸ ಇದ್ದವರು ಬಾಡಿಗೆ ಮನೆಗಳಿಗೆ ತೆರಳಿದ್ದಾರೆ. ಮುರಿದು ಬೀಳಲು ಸಿದ್ಧವಾಗಿರುವ ಮನೆಗಳಲ್ಲಿ ವಾಸಿಸುವುದು ಅಪಾಯಕಾರಿ.

    ನಿರ್ವಹಣೆ ಕೊರತೆ: ಸರ್ಕಾರಿ ವಸತಿಗೃಹಗಳ ನಿರ್ವಹಣೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದು. ಆದರೆ ಇಲಾಖೆಯಿಂದ ದುರಸ್ತಿ ಕೆಲಸಗಳು ನಡೆಯುವುದಿಲ್ಲ. ಇದರಿಂದ ಪ್ರತಿವರ್ಷ ಸರ್ಕಾರಿ ವಸತಿಗೃಹಗಳು ನೆಲಸಮವಾಗುತ್ತಿವೆ. ಲಾಲ್‌ಭಾಗ್‌ನಲ್ಲಿರುವ 15ಕ್ಕೂ ಅಧಿಕ ವಸತಿಗೃಹಗಳು ನೆಲಸಮವಾಗಿವೆ. ಇನ್ನು ಕೆಲವು ಕುಸಿದು ಬೀಳುವ ಸ್ಥಿತಿಯಲ್ಲಿವೆ.

    ಹಿರಿಯ ಶ್ರೇಣಿ ಅಧಿಕಾರಿಗಳ ಮನೆ ಸುಸಜ್ಜಿತ: ಸರ್ಕಾರಿ ಇಲಾಖೆಯಲ್ಲಿ ಡಿ ವರ್ಗದ ಹಾಗೂ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಇಂಥ ಸರ್ಕಾರಿ ವಸತಿಗೃಹಗಳಲ್ಲಿ ವಾಸವಿದ್ದಾರೆ. ಅವರು ಬಾಡಿಗೆ ಮನೆಯಲ್ಲಿ ವಾಸ ಮಾಡುವಷ್ಟು ಸಮರ್ಥರಿರುವುದಿಲ್ಲ. ಹಾಗಾಗಿ ಅನಿವಾರ್ಯವಾಗಿ ಸರ್ಕಾರಿ ವಸತಿಗೃಹಗಳಲ್ಲಿ ವಾಸವಿದ್ದಾರೆ. ಸರ್ಕಾರ ಈ ವಿಷಯದಲ್ಲಿ ತಕ್ಷಣ ಸ್ಪಂದಿಸಿ, ಮನೆಗಳನ್ನು ದುರಸ್ತಿ ಮಾಡಿಕೊಡಬೇಕಾಗಿದೆ. ಹಿರಿಯ ಶ್ರೇಣಿಯ ಅಧಿಕಾರಿಗಳು ವಾಸ ಮಾಡುವ ವಸತಿಗೃಹಗಳು ಸುಸಜ್ಜಿತವಾಗಿದ್ದು, ಅದರ ನಿರ್ವಹಣೆಯೂ ವ್ಯವಸ್ಥಿತವಾಗಿದೆ.

    ವೇತನದಲ್ಲಿ ಮನೆ ಬಾಡಿಗೆ ಕಡಿತ: ಸರ್ಕಾರ ಈ ವಸತಿಗೃಹಗಳನ್ನು ಉಚಿತವಾಗಿ ನೀಡುತ್ತಿಲ್ಲ. ವೇತನದಲ್ಲಿ ಮನೆ ಬಾಡಿಗೆ ಕಡಿತ ಮಾಡುತ್ತಾರೆ. ಸಮಸ್ಯೆ ಬಗ್ಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ದುರಸ್ತಿ ಮಾಡಲು ಆಸಕ್ತರಾಗುತ್ತಿಲ್ಲ. ತಾತ್ಕಾಲಿಕವಾಗಿ ನಾವೇ ಟರ್ಪಾಲು ಖರೀದಿಸಿ ತಂದು ಹಾಕಿದ್ದೇವೆ. ಗಾಳಿಗೆ ಹಾರದಂತೆ ಬಾಳೆದಿಂಡು ಕಡಿದು ಹಾಕಿದ್ದೇವೆ. ಆದರೂ ಜೋರು ಮಳೆಯಾಗುವಾಗ ಮನೆಯೊಳಗೆ ನೀರು ಬೀಳುತ್ತದೆ. ನೀರು ಬೀಳದಂತೆ ಪಾತ್ರೆ ಇಡುತ್ತಿದ್ದೇವೆ ಎಂದು ಇಲ್ಲಿ ವಾಸ ಮಾಡುತ್ತಿರುವ ಶಿಕ್ಷಣ ಇಲಾಖೆಯ ನೌಕರರೊಬ್ಬರು ತಿಳಿಸಿದ್ದಾರೆ.

    ಸರ್ಕಾರಿ ನೌಕರರ ವಸತಿಗೃಹ ಶಿಥಿಲಾವಸ್ಥೆಯಲ್ಲಿರುವುದು ಗಮನಕ್ಕೆ ಬಂದಿದೆ. ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಇಂಥ 450 ವಸತಿಗೃಹಗಳಿವೆ. ಸರ್ಕಾರದಿಂದ ಅಷ್ಟೊಂದು ಹಣ ಬರದೇ ಇರುವುದರಿಂದ ಹಂತಹಂತವಾಗಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.
    ಯಶವಂತ್ ಇಂಜಿನಿಯರ್ ಪಿಡಬ್ಲುೃಡಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts