More

    ಬಡತನ ಗೊತ್ತಿಲ್ಲದವರಿಂದ ಗ್ಯಾರಂಟಿ ಟೀಕೆ

    ರಿಪ್ಪನ್‌ಪೇಟೆ: ರಾಜ್ಯ ಸರ್ಕಾರವು ಚುನಾವಣಾ ಪೂರ್ವ ಜನರಿಗೆ ನೀಡಿದ ಭರವಸೆಯಂತೆ ಐದೂ ಗ್ಯಾರಂಟಿಗಳನ್ನು ಈಡೇರಿಸಲಾಗಿದೆ. ಆದರೆ ಬಡತನದ ಕಷ್ಟವೇ ಗೊತ್ತಿಲ್ಲದವರು ಇಂದು ಗ್ಯಾರಂಟಿ ಯೋಜನೆಗಳನ್ನು ಟೀಕೆಮಾಡುತ್ತಿದ್ದಾರೆ ಎಂದು ಶಾಸಕ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಬೇಸರ ವ್ಯಕ್ತಪಡಿಸಿದರು.
    ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ಎನ್‌ಆರ್‌ಎಲ್‌ಎಂ ಕಟ್ಟಡ, ವಡ್ಡಿನಗದ್ದೆ, ಮಸರೂರು ಅಂಗನವಾಡಿ ಕೇಂದ್ರ ಕಟ್ಟಡ, ಮಸರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಚ್ಚುವರಿ ಕೊಠಡಿ, ಆಲುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ ಹಾಗೂ ಮಾರಿಕಾಂಬಾ ದೇವಸ್ಥಾನದ ಸಮುದಾಯ ಭವನ ಮತ್ತು ಜೆಜೆಎಂ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭ ನೆರವೇರಿಸಿ ಮಾತನಾಡಿದರು.
    ಈ ಎಲ್ಲ ಗ್ಯಾರಂಟಿಗಳು ಸಮಾಜದಲ್ಲಿನ ಬಡವರು ಮತ್ತು ಮಹಿಳೆಯರ ಅಭ್ಯುದಯದ ದೃಷ್ಟಿಯಿಂದ ಯೋಜಿಸಿರುವಂತವುಗಳು. ಹಸಿವು ನೀಗಿಸಲು ಅನ್ನ ಯೋಜನೆ, ನಿರುದ್ಯೋಗ ನೀಗಿಸಲು ಯುವನಿಧಿ, ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಲು ಶಕ್ತಿ ಮತ್ತು ಉಚಿತ ವಿದ್ಯುತ್, ಮಹಿಳೆಯರ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲು ಗೃಹಲಕ್ಷ್ಮಿ ಯೋಜನೆ ನೀಡಿರುವುದರಿಂದ ಜನಸಾಮಾನ್ಯ ವರ್ಗ ರಾಜ್ಯದಲ್ಲಿ ಸಂತೋಷದಿಂದಿದ್ದಾರೆ. ಜನಪರ ಅಭಿವೃದ್ಧಿಯಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ಅನಗತ್ಯ ಟೀಕೆಯನ್ನು ಬಿಟ್ಟುಬಿಡಿ, ಜನ ನಿಮ್ಮನ್ನು ನಂಬುವುದಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿನಡೆಸಿದರು.
    ರಾಜ್ಯ ಸರ್ಕಾರವು ಜನರ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧವಾಗಿದ್ದು ನಾವು ಇನ್ನೂ ಹಿಂದುಳಿದಿದ್ದೇವೆ ಎಂಬ ಮನೋಭಾವ ನಿಮಗೆ ಇನ್ನೆಂದಿಗೂ ಬರದಂತೆ ಗ್ರಾಮಗಳ ಅಭಿವೃದ್ಧಿ ಮಾಡುತ್ತೇನೆ. ನೀವು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ. ಈಗ ಜನಪರವಾದ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಎಲ್ಲ ಜಾತಿ, ಧರ್ಮಗಳ ಜನರನ್ನು ಸಮಾನವಾಗಿ ಕಾಣುವುದೇ ನಮ್ಮ ಉದ್ದೇಶವಾಗಿದೆ. ಮಾರಿಕಾಂಬಾ ದೇವಸ್ಥಾನದ ನೂತನ ಕಟ್ಟಡಕ್ಕೆ ಅಂದು ಶಾಸಕನಾಗಿದ್ದಾಗ ಅನುದಾನವನ್ನು ಮಂಜೂರು ಮಾಡಿಸಿದ್ದೆ. ಈಗ ಅದು ಪೂರ್ಣಗೊಂಡು ಲೋಕಾರ್ಪಣೆಗೊಂಡಿದೆ. ಇಲ್ಲಿಗೆ ಬರುವ ಭಕ್ತಾದಿಗಳ ಮದುವೆ, ಸಭೆ, ಸಮಾರಂಭಗಳಿಗೆ ಅನುಕೂಲವಾಗುವಂತೆ ಸಮುದಾಯ ಭವನ ಅಗತ್ಯವಿರುವುದರಿಂದ ಈಗಾಗಲೇ 25 ಲಕ್ಷ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ನೀವು ಕೆಲಸವನ್ನು ಪ್ರಾರಂಭಿಸಿ, ಕಟ್ಟಡಕ್ಕೆ ಬೇಕಾದ ಇನ್ನಷ್ಟು ಅನುದಾನವನ್ನು ನಾನು ಕೊಡುತ್ತೇನೆ. ಅಧಿಕಾರ ಇರಲಿ ಇಲ್ಲದಿರಲಿ ನೀವು ನನ್ನನ್ನು ಹರಸಿದ್ದೀರಿ. ಆದ್ದರಿಂದ ನನ್ನ ನಡವಳಿಕೆಯಲ್ಲಿ ಯಾವಾಗಲೂ ವ್ಯತ್ಯಾಸವಾಗಿಲ್ಲ. ನಿಮ್ಮೂರಿನ ಕೆರೆ, ಕಟ್ಟೆ, ರಸ್ತೆ, ಶಾಲೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಇನ್ನೈದು ವರ್ಷಗಳಲ್ಲಿ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಸುಂದರಗೊಳಿಸುತ್ತೇನೆ ಎಂದು ಹೇಳಿದರು.
    ನಿವೃತ್ತ ಸರ್ಕಾರಿ ನೌಕರರು, ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ಉತ್ತಮ ಕೃಷಿಕರು, ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಸನ್ಮಾನಿಸಲಾಯಿತು.
    ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್, ಉಪಾಧ್ಯಕ್ಷೆ ರಮ್ಯಾ, ಸದಸ್ಯರಾದ ಮಹಮ್ಮದ್ ಷರೀಫ್, ಕೃಷ್ಣೋಜಿ ರಾವ್, ಪರಮೇಶ್ವರಪ್ಪ, ಪುಟ್ಟಮ್ಮ, ಹೂವಮ್ಮ, ಗೌರಮ್ಮ, ಲಕ್ಷ್ಮಮ್ಮ, ತಾಪಂ ಇಒ ನರೇಂದ್ರಕುಮಾರ್, ಬಿಇಒ ಕೃಷ್ಣಮೂರ್ತಿ, ಪಿಡಿಒ ರವಿಕುಮಾರ್, ಅಧಿಕಾರಿಗಳಾದ ಸುರೇಶ್, ಸಂದೀಪ್, ಮಾರಿಕಾಂಬಾ ಸಮಿತಿ ಅಧ್ಯಕ್ಷ ಬಸವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts