More

    ಒಂದು ವೃಕ್ಷವನ್ನು ಬೆಳೆಸುವುದು ಹತ್ತು ಸುಪುತ್ರರನ್ನು ಪಡೆಯುವುದಕ್ಕೆ ಸಮಾನ

    | ಕಿರಣ್ ಪೈ ಮಂಗಳೂರು

    ನಮ್ಮಲ್ಲಿ ಸಾಮಾನ್ಯವಾಗಿ ಜೂನ್- ಆಗಸ್ಟ್ ಮಾನ್ಸೂನ್ ನಲ್ಲಿ ವನಮಹೋತ್ಸವ/ ಪರಿಸರ ದಿನ ಆಯೋಜನೆ ಮಾಡಲಾಗುತ್ತದೆ. ಪ್ರಕೃತಿಯ ಸಂರಕ್ಷಣೆ, ಜನರನ್ನು ಒಗ್ಗೂಡಿಸಿ ಪರಿಸರ, ಭೂಮಿ, ಜಲದ ಬಗ್ಗೆ ಜಾಗೃತಿಯ ಅಭಿಯಾನ.ಧರ್ಮ, ನಂಬಿಕೆ, ವಯಸ್ಸು ಇನ್ನಿತರ ವ್ಯತ್ಯಾಸಗಳನ್ನು ಬದಿಗಿಟ್ಟು ಕೇವಲ ಪರಿಸರಕ್ಕಾಗಿ ಒಂದು ದಿನ ಮೀಸಲಿಡುವುದು ಇದರ ಉದ್ದೇಶ. ಯಾಕೆ? ಏನು? ಹೇಗೆ? ಪರಿಸರದಿಂದ ಲಾಭ? ಇತರ ಪ್ರಶ್ನೆಗಳಿಗೆ ಉತ್ತರ ಪ್ರತಿಯೊಬ್ಬರಿಗೂ ಬಾಲ್ಯದಿಂದಲೇ ತಿಳಿದಿದೆ. ಹಸಿರು ರಹಿತ ಬದುಕು ಏನು ಎಂಬ ಅರಿವು ಎಲ್ಲರಿಗೂ ಇದೆ. ಅಸಡ್ಡೆ ಮಾಡೋ ಸಮಯ ಯಾವತ್ತೋ ಹೊರಟೋಯ್ತು.’ಸೇವ್ ನೇಚರ್, ಸೇವ್ ಲೈಫ್’ ವರ್ತಮಾನ ಹಾಗೂ ಭವಿಷ್ಯಕ್ಕೆ ಅನಿವಾರ್ಯ. ಆಧುನಿಕತೆ,ತಂತ್ರಜ್ಞಾನ, ವಿಜ್ಞಾನದ ಪ್ರಗತಿಯ ಜೊತೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ಹೊಣೆ ಹತ್ತು ಪಟ್ಟು ಹೆಚ್ಚಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಚವಾಗಿ ಮತ್ತು ಆರೋಗ್ಯವಾಗಿಡಲು ಪ್ರಯತ್ನಿಸಬೇಕು, ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕು ಮತ್ತು ಅವುಗಳನ್ನು ಸಮರ್ಥವಾಗಿ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು.

    ಕೇವಲ ಪರಿಸರವಾದಿಗಳು, ಅರಣ್ಯ ಇಲಾಖೆ, ಸರಕಾರ, ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು ತಲೆಕೆಡಿಸಿಕೊಳ್ಳುವುದರಿಂದ ಪರಿಸರ ಉಳಿಯುವುದೇ? ಪರಿಸರದ ಬಗ್ಗೆ ವಯಕ್ತಿಕ ಕರ್ತವ್ಯ (Individual Responsibilities) ಏನೆಂದು ಅರಿತರೆ ಸಂರಕ್ಷಣೆ ಸಾಧ್ಯ.ಗಿಡ, ಮರ, ಕಾಡು,ಪ್ರಕೃತಿ ಒಂದೆಡೆ… ಕೊನೆ ಪಕ್ಷ ಬಳಕೆ ಮಾಡಿದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮಾಡುವುದನ್ನು ಕಲಿತರೆ ಅದೇ ಒಂದು ದೊಡ್ಡ ಪ್ರಕೃತಿ ಸೇವೆ.

    ವರ್ಷಗಳು 16 ಉರುಳಿದವು,ಎನ್.ಸಿ.ಸಿ ಯ ದಿನಗಳು. ಶಿಸ್ತು,ಸಂಯಮ, ದೈಹಿಕ ಕಸರತ್ತು, ಸೈನ್ಯ ಬಿಟ್ಟು ಬೇರೆ ವಿಷಯಗಳಲ್ಲಿ ಚರ್ಚೆ ಇಲ್ಲ. ಮಂಗಳವಾರ ಮತ್ತು ಗುರುವಾರ ವಾರಕ್ಕೆ ಎರಡು ದಿನ ಒಂದು ರೀತಿಯ ಮಿಲಿಟರಿ ತರಬೇತಿ. ಕೆನರಾ ಶಾಲೆಯ ದಿ. ಲಸ್ರಾದೊ ಮಾಷ್ಟ್ರು.. ಅವರ ಗಟ್ಟಿ ಧ್ವನಿ, ಸದೃಢ ಶರೀರ, ಖಡಕ್ ಟ್ರೈನಿಂಗ್… ಇವತ್ತಿಗೂ ಮರೆಯಲು ಅಸಾಧ್ಯ. ಎನ್.ಸಿ.ಸಿಯಲ್ಲಿ ಇರೋ ಕಾರಣ ವನಮಹೋತ್ಸವ ಸಂದರ್ಭ ಪ್ರಾಂಶುಪಾಲ ಆದೇಶದಂತೆ ನಮಗೆ ಕನಿಷ್ಟ 10-15 ಕಡೆ ಗುಂಡಿ ತೆಗೆಯೋ ಕೆಲಸ.ಲಸ್ರಾದೊ ಸರ್ ಸಿಡಿಮಿಡಿ, ಕೋಪಗೊಂಡಂತೆ ಕಾಣುತ್ತಿದ್ರು ಕಾರ್ಯಕ್ರಮದಲ್ಲೂ ಅಷ್ಟೊಂದು ಆಸಕ್ತಿ ಇಲ್ಲ, ಶಿಷ್ಟಾಚಾರಕ್ಕಾಗಿ ಭಾಗವಹಿಸುತ್ತಾರೆ. ‘ಎಂಥ ಮಾರಾಯ ಸರ್ ಗೆ ಖುಷಿನೇ ಇಲ್ಲ ಯಾವಾಗ್ಲೂ ಕೋಪ ಇವರಿಗೆ ನೇಚರ್ ಬಗ್ಗೆ ಇಂಟರೆಸ್ಟ್ ಇಲ್ಲ್ವೆನೋ’ ಎಂಬ ಭಾವನೆ ನಮ್ಮಲ್ಲಿ.

    ನಮ್ಮ ಸೆಂಡ್ ಆಫ್ ದಿನ ಎಲ್ಲಾ ಅಧ್ಯಾಪಕರನ್ನು ಭೇಟಿಯಾದ ಸಮಯ. ಕುಶಲೋಪರಿ,ಆಟೋಗ್ರಾಫ್ ಪಡೆದು ನಾಲ್ಕೈದು ಗೆಳೆಯರು ಲಸ್ರಾದೊ ಸರ್ ಕಡೆ ಬಂದು ಅಂಜಿಕೆ ಭರಿತ ಜಿಜ್ಞಾಸೆಯಲ್ಲಿ ಕೇಳಿಯೇ ಬಿಟ್ಟೆವು, ಸರ್.. ಎಲ್ಲಾ ಕಾರ್ಯಕ್ರಮಗಳಲ್ಲಿ ಇರೋ ಉತ್ಸಾಹ ಆಸಕ್ತಿ ವನಮಹೋತ್ಸವ ಆಚರಣೆಯಲ್ಲಿ ಕಡಿಮೆ ಯಾಕೆ?…. ಒಂದು ನಿಮಿಷ ಮೌನ… ತಮ್ಮ ಗಟ್ಟಿ ಧ್ವನಿಯಲ್ಲಿ Nothing Boys, Move On With Your Work.ನಾವು ಮತ್ತೆ ಮತ್ತೆ ರಿಕ್ವೆಸ್ಟ್ ಮಾಡಿದಾಗ ” Guys,I am not interested…in such Stuffs,Planting in Same Pond Every Year, Does it Make Any Sense?? ” ಆವಾಗ ಏನು ಅರ್ಥ ಆಗಲಿಲ್ಲ. ಸರಿ ಸರ್ ಎಂದು ತಲೆ ಆಡಿಸಿದೆವು. ಈಗ ಅವರ ಮಾತಿನ ಸೂಕ್ಷ್ಮ ಸಂಪೂರ್ಣ ಸ್ವಷ್ಟ. ಅವಸರ,ಕಾಟಾಚಾರಕ್ಕೆ ಮಾಡುವ ವನಮಹೋತ್ಸವ ವ್ಯರ್ಥ ಎಂಬ ಮಾತಿನ ತಿರುಳು.

    ಅವರ ಒಂದು ಚಾರಣ ಸಂಸ್ಥೆ ಇತ್ತು. ರಜಾದಿನಗಳಲ್ಲಿ ಮಕ್ಕಳು, ಯುವಕ,ಹಿರಿಯರ ತಂಡ ರಚಿಸಿ ಕಾಡಿಗೆ, ಜಲಪಾತವನ್ನು ನೋಡಿದ ನೆನಪು ಇಂದಿಗೂ ಇದೆ. ಅದೇ ಕಾರಣವೆನೋ, ಕಾಡು,ಚಾರಣ, ಪ್ರಕೃತಿ ಬಗ್ಗೆ ವಿಶೇಷ ಪ್ರಬುದ್ಧತೆ ಬಂದಿದೆ. ಅಂದಿನ ಅವರ ಮಾತು ಸತ್ಯ… ಕೇವಲ ಫೋಟೋ, ವಿಡಿಯೋ ಪ್ರಚಾರಕ್ಕೆ ಮಾಡುವ ವನಮಹೋತ್ಸವ ಹಾಸ್ಯಾಸ್ಪದ. ಪ್ರತಿವರ್ಷ ಒಂದೇ ಗುಂಡಿಯಲ್ಲಿ ಗಿಡ ನೆಡುವುದು ಪ್ರಕೃತಿ ಸಂರಕ್ಷಣೆಯೇ? ಗಿಡ ಬೆಳೆಸುವುದು ಎಷ್ಟು ಮುಖ್ಯವೋ ಆರೈಕೆ ಅದಕ್ಕಿಂತ ಹತ್ತು ಪಟ್ಟು ಬಹುಮುಖ್ಯ.

    ಯಾವ ಗಿಡಗಳನ್ನು ಬೆಳೆಸಲಿ? ಎಲ್ಲಿಂದ ಪಡೆಯಲಿ?; ನಗರಗಳಲ್ಲಿ ಸ್ಥಳದ ಅಭಾವ,ಆಧುನಿಕ ವಿನ್ಯಾಸದ ಕಟ್ಟಡಗಳು, ಸ್ವಂತ ಮನೆ ಇದೆ ಆದ್ರೆ ಬೆಲೆ ಬಾಳುವ ಕಾರು ಬೈಕ್ ಗಳು ಖಾಲಿ ಜಾಗವನ್ನು ಆಕ್ರಮಿಸಿಕೊಂಡಿವೆ.ಈ ಸ್ಥಿತಿಯಲ್ಲಿ ಯಾವ ಗಿಡ-ಮರ ಬೆಳೆಸಲಿ, ಎಲ್ಲಿ ಬೆಳೆಸಲಿ? ಎಂಬ ಯಕ್ಷ ಪ್ರಶ್ನೆ…ಸ್ವಾಮಿ ಮನಸ್ಸಿದ್ದರೆ ಮಾರ್ಗ…ಪ್ರಶ್ನೆಗಳಿಗೆ ಪೂರಕವಾದ ಪರಿಹಾರ ನಾವೇ ಕಂಡುಕೊಳ್ಳಬೇಕು. ಮನೆಯ ಖಾಲಿ ಇರುವ ತಾರಸಿ ಮೇಲೆ ಉಪಯುಕ್ತ ನೈಸರ್ಗಿಕ ಹೂದೋಟ, ತರಕಾರಿ ಬೆಳೆಸಬಹುದು. ತೋಟಗಾರಿಕಾ ಇಲಾಖೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ. ಮರಗಳನ್ನು ಬೆಳೆಸುವ ಆಸಕ್ತಿ ಇದ್ದಲ್ಲಿ ತಮ್ಮ ವಲಯದ ಅರಣ್ಯ ಇಲಾಖೆ ಸಂಪರ್ಕಿಸಿ ಕನಿಷ್ಟ ಬೆಲೆಯಲ್ಲಿ ಉಪಯುಕ್ತ ಗಿಡಗಳನ್ನು ಪಡಕೊಳ್ಳಬಹುದು.ನಗರಗಳಲ್ಲಿ ಹೂವಿನ, ತರಕಾರಿ ಗಿಡಗಳನ್ನು ಹಾಕುವುದು ಉತ್ತಮ,ಮತ್ತು ಸುಲಭ ಹತ್ತು ತುಳಸಿ ಗಿಡ ಹಾಕಿ ಅದು ಬೆಸ್ಟ್. ಸ್ವಲ್ಪ ಸ್ಥಳಾವಕಾಶ ಇದೆ ಹಾಗಾದರೆ ಮಾವು, ತೆಂಗು,ಅಡಿಕೆ, ಹಲಸು,ಗೇರು,ಚಿಕ್ಕು( ಸಪೋಟ) ಬೇವು, ಹಿಪ್ಪುನೇರಳೆ,ಪೇರಳೆ ಇತ್ಯಾದಿ ಬೆಸ್ಟ್ ಆಪ್ಶನ್.ನೀನು ನನ್ನನ್ನು ರಕ್ಷಿಸು,ನಿನ್ನ ಸಂಪೂರ್ಣ ಪೀಳಿಗೆಯ ರಕ್ಷಣೆ ನನ್ನದು ಎಂದು ಪರಿಸರ ಸಾರಿ ಸಾರಿ ಹೇಳಿದರೂ, ಮನುಷ್ಯ ಮಾತ್ರ ಎಡವಿರುವುದು ಸತ್ಯ.

    2017ರಿಂದ ಮಾಧ್ಯಮ ಸ್ನೇಹಿತರ ಬಳಗದ ನೇತೃತ್ವ, ಅರಣ್ಯ ಇಲಾಖೆ ಸಹಯೋಗದಲ್ಲಿ,ಹಾಗೂ ಸಾರ್ವಜನಿಕರ ಒಳಗೊಂಡ ಟೀಂ ಮೂಲಕ ನಾನು ಗಿಡ ನೆಡುವ ಅಭಿಯಾನದಲ್ಲಿ ಭಾಗಿಯಾದೆ.ನೆಟ್ಟ 80% ಅಧಿಕ ಗಿಡಗಳು ಆರೋಗ್ಯವಾಗಿದೆ. ಜನ ವಸತಿ ಕಾಲನಿ,ಸರಕಾರಿ ಶಾಲೆ ,ಕಾಲೇಜು, ಗೋ ಶಾಲೆ,ಆಶ್ರಯ ತಾಣಗಳು, ದೈವಸ್ಥಾನ, ಸ್ಮಶಾನಗಳು (ಎಲ್ಲಾ ವರ್ಗದ) ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಯಶಸ್ವಿ ಅಭಿಯಾನ. ಆದರೆ ದುರದೃಷ್ಟ ಎರಡು ವರ್ಷಗಳಿಂದ ಕರೋನಾ ಕಾರಣ ದೊಡ್ಡ ಮಟ್ಟದ ಅಭಿಯಾನ ಮಾಡಲಾಗಲಿಲ್ಲ.

    ಯಾವುದೇ ಸಮಸ್ಯೆ ಇರಲಿ… ಅದು ಕಷ್ಟಕರ ಸಮಸ್ಯೆ ಎಂದೆನಿಸುವುದು ಅದಕ್ಕೆ ಪರಿಹಾರ/ಪರ್ಯಾಯ ಕಂಡುಕೊಳ್ಳದಿದ್ದರೆ.ಗ್ಲೋಬಲ್ ವಾರ್ಮಿಂಗ್ ಗೆ ನ್ಯಾಚುರಲ್ ಗ್ಲೋಬಲ್ ಕೂಲಿಂಗ್ ಒಂದೇ ಪರಿಹಾರ. ಆ ನಿಟ್ಟಿನಲ್ಲಿ ಕೆಲಸವಾಗಬೇಕಿದೆ. ವಿಡಂಬನೆ ನೋಡಿ,ಮಳೆ ಬಾರದೆ ಬರಗಾಲ ಉಂಟಾದರೆ ಪ್ಲಾಸ್ಟಿಕ್ ನಿಷೇಧ ಅಭಿಯಾನ, ಪ್ರವಾಹ ಬಂದ ಒಂದು ವಾರದೊಳಗೆ ಕಾಂಡ್ಲಾವನ,ಸಸ್ಯ ಸಂಪತ್ತು ಕಾಪಾಡಲೇ ಬೇಕೆಂಬ ಬಿಗ್ ಡಿಬೇಟ್, ಕರೋನಾ ಬಂದಾಗ ಆಕ್ಸಿಜನ್ ನೀಡುವ ಮರ ಬೆಳೆಸಿ ಎಂದು ಗಲಾಟೆ, ಮಾಲಿನ್ಯ ತಡೆಯದೇ, ಗಂಗಾ ಶುದ್ದೀಕರಣ.ಸಮಸ್ಯೆ ಉಲ್ಬಣಿಸಿದಾಗ ಪರಿಹಾರದ ಬಗ್ಗೆ ಯೋಚಿಸೋ ಮನಃಸ್ಥಿತಿ. ಇದೇ ಮುಂದುವರೆದರೆ ಪರಿಸರ ಸಮಸ್ಯೆಗಳು ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆ ಇದಕ್ಕಿಂತ ಜಟಿಲವಾಗುವುದಂತೂ ಖಂಡಿತ.

    ಮಾನವನಿಂದ ಪರಿಸರಕ್ಕಾದ ಹಾನಿಯ ದುರಸ್ತಿ ಕಾರ್ಯ ಮಾನವನಿಂದ, ಸರ್ಕಾರದ ಸಹಕಾರದಿಂದ ಆಗಬೇಕಿದೆ.ಆವಾಗ ಮಾತ್ರ “ಸೇವ್ ವಾಟರ್, ಸೇವ್ ನೇಚರ್, ಸೇವ್ ಲೈಫ್” ಕಾನ್ಸೆಪ್ಟ್ ಸಕಾರಾತ್ಮಕ ರೀತಿಯಲ್ಲಿ ಸಾಕಾರಗೊಳ್ಳುವುದು.

    ಮತ್ಸ್ಯ ಪುರಾಣದಲ್ಲಿ ಹೇಳಲಾಗಿದೆ.
    ಶ್ರೀ ವೃಕ್ಷ ರಾಜಾಯತೇ ನಮಃ||
    ದಶಕೂಪ ಸಮೋವಾಪಿ, ದಶವಾಪೀ ಸಮೋಹ್ರದಃ| ದಶ ಹ್ರದಸ್ಸಮಃ ಪುತ್ರೋ, ದಶಪುತ್ರಃ ಸಮೋದ್ರುಮಃ||

    “ಒಂದು ಕೆರೆ ಹತ್ತು ಬಾವಿಗಳಿಗಿಂತ ಉತ್ತಮ, ಒಂದು ಸರೋವರ ಹತ್ತು ಕೆರೆಗಳಿಗಿಂತ ಉತ್ತಮ, ಹತ್ತು ಸರೋವರಗಳಿಗಿಂತ ಒಬ್ಬ ಸುಪುತ್ರನನ್ನು ಪಡೆಯುವುದು ಉತ್ತಮ, ಇದೆಲ್ಲಕ್ಕಿಂತಲೂ, ಒಂದು ವೃಕ್ಷವನ್ನು ಬೆಳೆಸುವುದು ಹತ್ತು ಸುಪುತ್ರರನ್ನು ಪಡೆಯುವುದುಕ್ಕಿಂತ ಉತ್ತಮ”. ಮನುಷ್ಯನ ಬದುಕು ನಿರ್ಬರವಾಗಿರುವುದು ಪ್ರಕೃತಿಯ ಮೇಲೆ. ಪರಿಸರ ತನ್ನೆಲ್ಲಾ ಕೊಡುಗೆಗಳನ್ನು ಕೊಟ್ಟು ನಮ್ಮನ್ನು ಬೆಳೆಸುತ್ತದೆ. ಪರಿಸರ ಎಂದಾಗ ಕೇವಲ ವೃಕ್ಷ ಸಂಪತ್ತು ಮಾತ್ರವಲ್ಲ, ಆದರೆ ಉಳಿದ ಎಲ್ಲಾ ಸಂಪತ್ತಿಗೂ ವೃಕ್ಷಸಂಪತ್ತೇ ಆದಾರವಾಗಿರುವುದರಿಂದ ಪರಿಸರವೆಂದಾಕ್ಷಣ ವೃಕ್ಷದ ಕಲ್ಪನೆ ಮೂಡುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಪರಿಸರಕ್ಕೆ ಮೊದಲ ಪ್ರಾಧಾನ್ಯತೆಯನ್ನು ನೀಡಲಾಗಿದೆ.

    ಅಥರ್ವವೇದದಲ್ಲೂ ಉಲ್ಲೇಖವಿದೆ.
    “ಪ್ರಕೃತಿ ನನ್ನ ತಾಯಿ, ನಾನು ಅವಳ ಪುತ್ರ”…

    !! माता भूमिः पुत्रोऽहं पृथिव्याः।!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts