ಭೋಪಾಲ್ : ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡು ಮಂಟಪಕ್ಕೆ ಹೋದಾಗ ವಧುವೇ ಇಲ್ಲದಿದ್ದರೆ ? ಇದು ಸಿನಿಮಾ ಕಥೆಯಲ್ಲ ! ಈ ರೀತಿಯ ಪ್ರಸಂಗ ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯಿಂದ ವರದಿಯಾಗಿದೆ. ಒಬ್ಬ ಮಹಿಳೆ ಮತ್ತು ಇಬ್ಬರು ಪುರುಷರನ್ನೊಳಗೊಂಡ ಗ್ಯಾಂಗ್ ಮೋಸದ ಮದುವೆಯಾಟ ಆಡುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಳೆದ ವಾರ ಹಾರ್ದ ಜಿಲ್ಲೆಯ ನಿವಾಸಿ ವರನಾಗಿ ಅಲಂಕೃತನಾಗಿ ತನ್ನ ಬಳಗವನ್ನು ಕಟ್ಟಿಕೊಂಡು ಭೋಪಾಲದ ಮದುವೆ ಮಂಟಪಕ್ಕೆ ಹೋದ. ಆದರೆ ಅಲ್ಲಿ ವಧು ಮತ್ತು ಆಕೆಯ ಕುಟುಂಬವೇ ಇರಲಿಲ್ಲ. ಅಷ್ಟೇ ಅಲ್ಲ, ಮದುವೆಗೆಂದು ನಿಗದಿಯಾಗಿದ್ದ ಮಂಟಪಕ್ಕೆ ಬೀಗ ಹಾಕಿತ್ತು. ವಧು ಮತ್ತು ಆಕೆಯ ಕುಟುಂಬಸ್ಥರಿಗೆ ಕರೆ ಮಾಡಿದರೆ ಅವರ ಮೊಬೈಲ್ ಫೋನ್ಗಳು ಸ್ವಿಚ್ ಆಫ್ ಆಗಿದ್ದವು.
ಇದನ್ನೂ ಓದಿ: ಐಷಾರಾಮಿ ಕಾರಿನ ಒಡೆಯನಾದ ಪ್ರಭಾಸ್: ಇದರ ಬೆಲೆ ಕೇಳಿದ್ರೆ ಹುಬ್ಬೇರುವುದು ಖಚಿತ!
ಈ ಆಘಾತದಿಂದ ಸಾವರಿಸಿಕೊಂಡು ಕೋಲಾರ್ ರೋಡ್ ಪೊಲೀಸ್ ಠಾಣೆ ತಲುಪಿದ ವರನಿಗೆ ಮತ್ತೊಂದು ಆಘಾತ ಕಾದಿತ್ತು. ಅದಾಗಲೇ ನಾಲ್ಕು ಇತರ ವರರು ಇದೇ ರೀತಿಯ ದೂರು ಹಿಡಿದು ಬಂದಿದ್ದರು. ತನ್ನ ಬಳಿ ಇದ್ದ ಮೊಬೈಲ್ ನಂಬರುಗಳನ್ನು ಪೊಲೀಸರಿಗೆ ನೀಡಿದಾಗ ಅವರು ಟ್ರೇಸ್ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಿದರು. ಈ ರೀತಿಯಾಗಿ ಐವರು ವರರಿಗೆ ವಂಚಿಸಿ ಕಾಣೆಯಾಗಿದ್ದ ‘ವಧು’ ಮತ್ತು ಆಕೆಯ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದರು.
ಮದುವೆಯಾಗಲು ಕಷ್ಟ ಪಡುತ್ತಿರುವವರನ್ನು ಹುಡುಕಿ ಅವರಿಗೆ ಆರೋಪಿ ಮಹಿಳೆಯನ್ನು ವಧುವಾಗಿ ಪರಿಚಯಿಸುತ್ತಿದ್ದರು. ಮದುವೆಗೆ ಒಪ್ಪಿದಲ್ಲಿ 20,000 ರೂಪಾಯಿ ಪಡೆದು ಮದುವೆಯನ್ನು ನಿಗದಿ ಮಾಡಿ, ನಂತರ ದುಡ್ಡಿನೊಂದಿಗೆ ಮಾಯವಾಗುತ್ತಿದ್ದರು ಎಂದು ಎಸ್ಪಿ ಭೂಪೇಂದ್ರ ಸಿಂಗ್ ತಿಳಿಸಿದ್ದಾರೆ. ಐಪಿಸಿ 420 ರ ಅಡಿ ವಂಚನೆಯ ಕೇಸು ದಾಖಲಿಸಲಾಗಿದೆ. (ಏಜೆನ್ಸೀಸ್)
ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !
‘ಸುಳ್ಳು ಸುದ್ದಿ’ ಎಂದು ಹೌಹಾರಿದ ಕಾಂಗ್ರೆಸ್ ನಾಯಕ… ಮತ್ತೆ ‘ಸಾರಿ’ ಕೇಳಿದ್ದೇಕೆ ?!