More

    ಮಾಚಿದೇವರ ತತ್ವ ಸಂದೇಶ ಸಾರ್ವಕಾಲೀಕ

    ಸೊರಬ: 12ನೇ ಶತಮಾನದಲ್ಲಿ ವಚನಕಾರ ಬಸವಣ್ಣ ಅವರ ಸಮಕಾಲೀನರಾದ ಮಡಿವಾಳ ಮಾಚಿದೇವರು ನೀಡಿದ ತತ್ವ ಸಂದೇಶಗಳನ್ನು ಯುವ ಪೀಳಿಗೆ ಅರ್ಥ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಹೇಳಿದರು.

    ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಮಡಿವಾಳ ಮಾಚಿದೇವ ಸಂಘ ಮತ್ತು ತಾಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ಮಾತನಾಡಿ, ವಚನಕಾರ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರೆ, ಅವರ ಸಮಕಾಲೀನರಾದ ಮಡಿವಾಳ ಮಾಚಿದೇವರು ಸಮಾಜದಲ್ಲಿನ ಮೌಢ್ಯತೆ ಹೋಗಲಾಡಿಸಿ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದರು ಎಂದರು.

    ಸಮಾಜದ ಒಳಿತಿಗೆ ಜಾತಿ, ಮತ ಬೇಧವಿಲ್ಲದೇ ಇತರರಿಗೆ ದುಡಿಯುವವರೇ ಶ್ರೇಷ್ಠ ವ್ಯಕ್ತಿಗಳ ಸಾಲಿಗೆ ಸೇರುತ್ತಾರೆ ಎಂಬುದನ್ನು ಇಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಳ್ಳಬೇಕಿದೆ. ವೃತ್ತಿಯಲ್ಲಿ ಶ್ರೇಷ್ಟ ಮತ್ತು ಕನಿಷ್ಟ ಎಂಬುದಿಲ್ಲ. ಯುವಜನತೆ ಕೀಳರಿಮೆಯಿಂದ ಹೊರಬಂದು ಯಾವುದೇ ವೃತ್ತಿ ಇರಲಿ, ಪ್ರಾಮಾಣಿಕವಾಗಿ ತಲ್ಲೀನರಾದಾಗ ಬದುಕನ್ನು ರೂಪಿಸಿಕೊಳ್ಳುವ ಜತೆಗೆ ಸನ್ಮಾರ್ಗದತ್ತ ನಡೆಯಬಹುದು ಎಂದು ಹೇಳಿದರು.

    ರಾಜ್ಯ ಮಡಿವಾಳ ಅಭಿವೃದ್ಧಿ ನಿಗಮದ ನಿರ್ದೇಶಕ ಅರುಣ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಮಡಿವಾಳ ಸಮಾಜ ಅತ್ಯಂತ ಹಿಂದುಳಿದಿದ್ದು, ಶೇ.70 ಮಂದಿ ಬಡತನದಲ್ಲಿಯೇ ಜೀವಿಸುತ್ತಿದ್ದಾರೆ. ಈ ಬಾರಿ ಸಮಾಜದ ಅಭಿವೃದ್ಧಿಗೆ 200 ಕೋಟಿ ರೂ., ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಸಮಾಜದವರನ್ನು ಮೇಲೆತ್ತಲು ಪಕ್ಷಾತೀತವಾಗಿ ಒಗ್ಗಟ್ಟಾಗಬೇಕು ಎಂದು ತಿಳಿಸಿದರು.

    ಮಡಿವಾಳ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗ್ರಾಪಂ ಚುನಾವಣೆಯಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ನಡೆಸಲಾಯಿತು.

    ಮಾಚಿದೇವ ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ಗುಡ್ಡಪ್ಪ ಕೆ.ಪಿ.ತುಮರಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯರಾದ ನಾಗರಾಜ ಚಂದ್ರಗುತ್ತಿ, ಪುರುಷೋತ್ತಮ ಕುಪ್ಪಗಡ್ಡೆ, ಜ್ಯೋತಿ ನಾರಾಯಣಪ್ಪ, ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕೃತ ಕಿರಿಯ ಶುಶ್ರೂಷಾಧಿಕಾರಿ ರತ್ನಾ ಗಣಪತಿ, ಎನ್.ಗಣಪತಿ, ಲಕ್ಷ್ಮಣ ಸಾಗರ್, ದದ್ದಪ್ಪ, ಉಮೇಶ ವಕೀಲ, ತುಳಜಪ್ಪ, ಈಶ್ವರಪ್ಪ ಚನ್ನಪಟ್ಟಣ, ಬಿ. ನಾಗರಾಜ ಕುಪ್ಪಗಡ್ಡೆ, ಬಂಗಾರಪ್ಪ ತಲ್ಲೂರು, ಮಲ್ಲೇಶಪ್ಪ ದಮ್ಮಳ್ಳಿ, ಚಂದ್ರಪ್ಪ ಕಕ್ಕರಸಿ, ರಾಜು ನಡಹಳ್ಳಿ, ರಾಮಮೂರ್ತಿ, ಬಂಗಾರಪ್ಪ ಕಾಗೆಹಳ್ಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts