More

    ಅಜ್ಜಯ್ಯ-ಚೌಡಮ್ಮ ಮಹಿಮೆ ಅಪಾರ

    ಹುಣಸೂರು: ಆದಿವಾಸಿಗಳನ್ನು ಈ ನೆಲದ ಮೂಲನಿವಾಸಿಗಳೆಂದೇ ಗುರುತಿಸಲ್ಪಟ್ಟಿದ್ದು, ಅವರು ಪೂಜಿಸುವ ಹಾಗೂ ಆರಾಧಿಸುವ ದೇವರನ್ನು ಆದಿವಾಸಿಗಳಲ್ಲದವರೂ ನಂಬುತ್ತಾರೆ. ಶಕ್ತಿದೇವತೆಯ ಆರಾಧನೆಯನ್ನು ಶ್ರದ್ಧಾಭಕ್ತಿಯಿಂದ ಮಾಡುವ ಮತ್ತು ಆಡಂಬರವಿಲ್ಲದ ಆದಿವಾಸಿಗಳ ಧಾರ್ಮಿಕ ಆಚರಣೆ ಅತ್ಯಂತ ಅಪರೂಪದ್ದಾಗಿದೆ.

    ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಚುವಿನಹಳ್ಳಿ ಅರಣ್ಯ ಪ್ರದೇಶದಲ್ಲಿರುವ ಹಂದಿಗೆರೆ ಅಜ್ಜಯ್ಯ ಮತ್ತು ಚೌಡಮ್ಮ ದೇವರು ಕಾಡಂಚಿನ ಸಮೀಪದ ಬಿಲ್ಲೇನಹೊಸಳ್ಳಿ ಹಾಡಿಯ ಗಿರಿಜನರ ಆರಾಧ್ಯದೈವವಾಗಿದೆ. 300ಕ್ಕೂ ಹೆಚ್ಚು ವರ್ಷಗಳಿಂದ ಈ ದೇವರನ್ನು ಗಿರಿಜನರು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಿರುವುದು ಒಂದೆಡೆಯಾದರೆ, ದೇವರ ಮಹಿಮೆಯ ಪ್ರಭಾವ ಎಷ್ಟಿದೆ ಎಂದರೆ ಗಿರಿಜನರಲ್ಲದವರೂ ಈ ದೇವರ ದಿವ್ಯಶಕ್ತಿಗೆ ಶರಣಾಗಿದ್ದಾರೆ.

    ಬಯಲು ಆಲಯ: ಉದ್ಯಾನದ ಪ್ರಕೃತಿ ಸೊಬಗಿನ ನಡುವೆ ಬೃಹದಾಕಾರದ ಎರಡು ಆಲದ ಮರಗಳ ಬುಡದಲ್ಲಿ ಆದಿವಾಸಿಗಳ ಆರಾಧ್ಯದೈವ ಅಜ್ಜಯ್ಯ ಮತ್ತು ಚೌಡಮ್ಮರ ಆಲಯವಿದೆ. ಆಲಯವೆಂದರೆ ಗುಡಿಗೋಪುರ ಹೊಂದಿರುವ ಆಲಯವಲ್ಲ. ಬದಲಾಗಿ ಬಯಲೇ ಇವರ ಆಲಯ. ಆಕಾಶವೇ ಹೊದಿಕೆ, ಭೂಮಿಯೇ ನೆಲಹಾಸು, ಮರದ ಬುಡವೇ ಗರ್ಭಗುಡಿ. ಮರದ ಬುಡದಲ್ಲಿ ಚಳಿ, ಗಾಳಿ, ಮಳೆ ಬಿಸಿಲನ್ನು ಲೆಕ್ಕಿಸದೇ ಉದ್ಭವ ಮೂರ್ತಿಯಂತೆ ಇರುವ ಲಿಂಗಾಕಾರದ ಕಲ್ಲುಗಳೇ ಗಿರಿಜನರ ಆರಾಧ್ಯಮೂರ್ತಿ. ಒಂದು ಮರದಡಿ ಅಜ್ಜಯ್ಯ ದೇವರು ಪ್ರತಿಷ್ಠಾಪನೆಗೊಂಡಿದ್ದರೆ ಸಮೀಪದ ಮತ್ತೊಂದು ಮರದ ಬುಡದಲ್ಲಿ ಶಕ್ತಿದೇವತೆ ಚೌಡಮ್ಮ ಪ್ರತಿಷ್ಠಾಪನೆಗೊಂಡಿದ್ದಾಳೆ. ದೇವರ ಪೂಜೆ ಮಾಡಲು ಅರಣ್ಯ ಇಲಾಖೆ ಆದಿವಾಸಿಗಳಿಗೆ ಅನುಮತಿ ನೀಡಿದೆ.

    ಮೈಸೂರು ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಹರಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಗಿರಿಜನರು ಪೂಜಿಸುವ ದೇವಸ್ಥಾನಗಳು ಸಾಕಷ್ಟು ಕಾಣಸಿಗುತ್ತದೆ. ಅಯ್ಯನಕೆರೆ ಹಾಡಿಯ ಗಾಡಿಗರ ಅಜ್ಜಯ್ಯ, ಕೊಳವಿಗೆ ಹಾಡಿಯ ಚಾಮಲ್ಲಿ ಒಡೆಯ, ವೀರನಹೊಸಳ್ಳಿಯ ಮಂಡಳ್ಳಿ ಬಸಪ್ಪ, ಕಾಕನಕೋಟೆಯ ಆನೆಮಾಳದ ಒಡೆಯ…ಹೀಗೆ ಹಲವು ದೇವರ ಹೆಸರುಗಳು ಚಾಲ್ತಿಯಲ್ಲಿವೆ. ಈ ಎಲ್ಲ ದೇಗುಲಗಳು ಕಾಡಿನ ಮಧ್ಯದಲ್ಲಿದ್ದು, ಒಂದು ಕಾಲದಲ್ಲಿ ಕಾಡಿನಲ್ಲೇ ವಾಸಿಸುತ್ತಿದ್ದ ಆದಿವಾಸಿಗಳು ಇದೀಗ ಸರ್ಕಾರದ ನಿರ್ದೇಶನದಂತೆ ಕಾಡನ್ನು ಬಿಟ್ಟು ನಾಡಿಗೆ ಬಂದಿದ್ದಾರೆ. ಆದರೆ ಅವರ ದೇವರು, ಸ್ಮಶಾನ ಎಲ್ಲವೂ ಕಾಡಿನಲ್ಲೇ ಇದೆ.

    ಸಿಹಿಯೂಟ ಬಯಸುವ ಅಜ್ಜಯ್ಯ: ಅಜ್ಜಯ್ಯ ಸಿಹಿಯೂಟ ಬಯಸುವ ದೇವರು. ಅಂದರೆ ಪೂಜೆ-ಪುನಸ್ಕಾರದ ವೇಳೆ ಅಜ್ಜಯ್ಯನಿಗೆ ಸಿಹಿತಿಂಡಿಗಳು, ಸಸ್ಯಹಾರದ ಪದಾರ್ಥಗಳನ್ನು ಮಾತ್ರ ಅರ್ಪಿಸಬೇಕು. ಆದರೆ ಶಕ್ತಿದೇವತೆ ಚೌಡಮ್ಮತಾಯಿ ಮಾಂಸಾಹಾರ ಪ್ರಿಯೆ. ಆದಿವಾಸಿಗಳಲ್ಲಿ ದೇವಿಗೆ ಪ್ರಾಣಬಲಿ ನೀಡುವ ಪದ್ಧತಿ ಈ ಹಿಂದೆ ಇತ್ತು. ಇದೀಗ ಅರಣ್ಯದೊಳಗೆ ಪ್ರಾಣಿಬಲಿ ನಿಷಿದ್ಧವಾಗಿರುವುದರಿಂದ ಆ ಪದ್ಧತಿಯನ್ನು ಅನುಸರಿಸುತ್ತಿಲ್ಲ. ಆದರೆ ಮಾಂಸಾಹಾರದ ಊಟವನ್ನೇ ದೇವಿಗೆ ನೈವೇದ್ಯವಾಗಿ ಅರ್ಪಿಸುವುದು ವಾಡಿಕೆ.

    ಇಷ್ಟಾರ್ಥ ಸಿದ್ಧಿಸುವ ದೇವರುಗಳಿವರು: ಬಿಲ್ಲೇನಹೊಸಳ್ಳಿಯ ಹಾಡಿಯ ಗಿರಿಜನರು ಯುಗಾದಿ ಸಮಯದಲ್ಲಿ ಕೋಲಾಟದ ಮೂಲಕ ವಿವಿಧ ಹಾಡಿಗಳನ್ನು ಸುತ್ತಿ ಅದರಿಂದ ಬಂದ ಪಡಿತರಗಳನ್ನು ಬಳಸಿ ಭರ್ಜರಿ ಅಡುಗೆ ಮಾಡಿ ಊಟ ಮಾಡುತ್ತಾರೆ. ದೀಪಾವಳಿ ವೇಳೆ 21 ದಿನ ಹಾಡಿಯಲ್ಲಿ ಕೊಂತಿಪೂಜೆ ಮಾಡಿ ಸಂಭ್ರಮಿಸುತ್ತಾರೆ. ಹಾಡಿಯಲ್ಲಿನ ಕಷ್ಟ-ಸುಖಗಳ ಪರಿಹಾರಕ್ಕಾಗಿ ತಮ್ಮ ಆರಾಧ್ಯದೇವರಲ್ಲಿ ಪ್ರಾರ್ಥಿಸಿ ಕಷ್ಟಗಳನ್ನು ಪರಿಹರಿಸಲು ಕೋರುತ್ತಾರೆ.

    ಗಂಟೆಯ ಹರಕೆ ಪ್ರಸಿದ್ಧ: ಆದಿವಾಸಿಗಳಲ್ಲದವರು ಈ ದೇವಸ್ಥಾನಕ್ಕೆ ಬಂದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಹರಕೆ ಈಡೇರಿದ ನಂತರ ಗಂಟೆಗಳನ್ನು ದೇವರಿಗೆ ಒಪ್ಪಿಸುವುದು ನಡೆದು ಬಂದಿದೆ. ಅಜ್ಜಯ್ಯ, ಚೌಡಮ್ಮ ದೇವಾಲಯದ ಅರ್ಚಕ(ದೇವರಗುಡ್ಡ) ಹಾಗೂ ಬಿಲ್ಲೇನಹೊಸಳ್ಳಿ ಹಾಡಿಯ ಯಜಮಾನ ರಮೇಶ್ ತಲೆತಲಾಂತರದಿಂದ ತಮ್ಮ ಕುಟುಂಬದವರೇ ಆಗಿದ್ದಾರೆಂದು ತಿಳಿಸುತ್ತಾರೆ. ಬೆಂಗಳೂರು, ಮೈಸೂರು, ಕೊಡಗು ಮುಂತಾದ ಕಡೆಗಳಿಂದ ಭಕ್ತರು ಈ ದೇವಾಲಯಕ್ಕೆ ಹರಕೆ ಹೊತ್ತು ಬರುತ್ತಾರೆ. ಅದರಲ್ಲೂ ಗ್ರಾ.ಪಂ.ಗೆ ಸ್ಪರ್ಧಿಸುವ ರಾಜಕಾರಣಿಯಿಂದ ಆರಂಭಗೊಂಡು ಎಂಎಲ್‌ಎ, ಸಚಿವರು, ಸಂಸದರೂ ಇಲ್ಲಗೆ ಬಂದು ತಮ್ಮ ರಾಜಕೀಯ ಏಳಿಗೆಗಾಗಿ ದೇವರ ಮೊರೆ ಹೋಗುತ್ತಾರೆ.

    ಬಾಡೂಟದಂತಹ ಕಾರ್ಯಕ್ರಮಗಳನ್ನು ಕಾಡಿನಿಂದ ಹೊರಗೆ ಆಯೋಜಿಸುತ್ತಾರೆ. ಅಲ್ಲದೆ ಉದ್ಯಮಿಗಳು, ಲಗ್ನವಾಗದಿರುವವರು, ಸಂತಾನಾಭಿವೃದ್ಧಿ, ಜಮೀನು ವ್ಯಾಜ್ಯ, ಜೈಲಿನಿಂದ ಬಿಡುಗಡೆಗಾಗಿ… ಹೀಗೆ ತರಹೇವಾರಿ ಜನರು ಬಂದು ತಮ್ಮ ಹರಕೆಯನ್ನು ದೇವರಲ್ಲಿ ತಿಳಿಸಿ ದೇವರ ಕೃಪಾಶೀರ್ವಾದದೊಂದಿಗೆ ಸಂತಸದಿಂದ ತೆರಳುತ್ತಾರೆ. ಕಷ್ಟ ಪರಿಹಾರ ಕಂಡ ಬಹುತೇಕರು ಈ ದೇವರಿಗೆ ಪಂಚಲೋಹದ ಗಂಟೆಯನ್ನು ನೀಡಿ ಕೃತಾರ್ಥತೆ ಹೊಂದುತ್ತಾರೆ. ಇದಲ್ಲದೆ ಹುಲಿ ಮುಖವಾಡ, ಆನೆ ಮುಖವಾಡ, ಕುದುರೆ ಮುಖವಾಡಗಳನ್ನು ಹರಕೆಯಾಗಿ ತೀರಿಸುತ್ತಾರೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮಾತ್ರ ದೇವಾಲಯದಲ್ಲಿ ಸೇವಾ ಕಾರ್ಯ ನಡೆಸಲಾಗುತ್ತದೆ ಎಂದು ಅರ್ಚಕ ರಮೇಶ್ ತಿಳಿಸಿದರು.

    ಜಾತ್ರೆ ಪದ್ಧತಿಯಿಲ್ಲ: ಆದಿವಾಸಿಗಳು ತಮ್ಮದೆ ಆದ ಧಾರ್ಮಿಕ ಪದ್ಧತಿಯೊಂದಿಗೆ ದೇವರನ್ನು ಪೂಜಿಸುತ್ತಾರೆ. ಅರ್ಚಕನಾದವರು ಮದ್ಯಪಾನ, ಧೂಮಪಾನದಿಂದ ದೂರವಿರಬೇಕು. ಊರಿನ ಕಷ್ಟದ ಪರಿಹಾರಕ್ಕಾಗಿ ದೇವಾಲಯಕ್ಕೆ ಜನರನ್ನು ಸೇರಿಸಲು ಕೋಲಕಾರ(ಸಂದೇಶವಾಹಕ) ತಿಳಿಸುತ್ತಾನೆ. ಆದಿವಾಸಿಗಳು ದೇವಾಲಯದಲ್ಲಿ ವಿಶೇಷ ಜಾತ್ರೆ ಆಚರಿಸುವ ಪದ್ಧತಿ ಹೊಂದಿಲ್ಲ. ಆದರೆ ಎಚ್.ಡಿ.ಕೋಟೆ ತಾಲೂಕಿನ ಭೀಮನಕೊಲ್ಲಿ ಜಾತ್ರೆ, ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಆಂಜನೇಯಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವ, ಹರಳಹಳ್ಳಿ ಸಮೀಪದ ಕಲ್ಲೂರಪ್ಪನ ಬೆಟ್ಟದ ಈಶ್ವರ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಆದಿವಾಸಿಗಳು ಬಹುಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಕುಂಡೆ ಹಬ್ಬದಂತಹ ಅಚರಣೆಗಳನ್ನೂ ಕೊಡಗಿನ ಭಾಗದ ಅದಿವಾಸಿಗಳು ಅನುಸರಿಸುತ್ತಾರೆ.

    ನನ್ನ ತಾತ ಮುತ್ತಾಂದಿರಾದ ಕಟ್ಟೆ, ಮೆಣಸಯ್ಯ, ಕೆಂಚಯ್ಯರಾದಿಯಾಗಿ ನನ್ನ ತಂದೆಯೂ ಈ ದೇವಾಲಯದ ಅರ್ಚಕರಾಗಿದ್ದರು. ನಮ್ಮ ನಂಬಿಕೆ, ಭಕ್ತಿಗೆ ಈ ದೇವರು ಒಲಿದು ಆಶೀರ್ವಾದ ಮಾಡುತ್ತಾನೆ. ಹೊರಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪೂಜಿಸುವುದು ನಮಗೂ ಹೆಮ್ಮೆ ತಂದಿದೆ. ನಂಬಿದ ಭಕ್ತರ ಆಶ್ರಯದಾತರಾಗಿ ಅಜ್ಜಯ್ಯ ಮತ್ತು ಚೌಡಮ್ಮದೇವಿ ನಮ್ಮನ್ನು ಕಾಪಾಡಿ ನಿಂತಿದ್ದಾರೆ.
    ರಮೇಶ್, ಅರ್ಚಕ, ಬಿಲ್ಲೇನಹೊಸಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts