More

    ಬೆಳೆಗಳಿಗೆ ಮಿಡತೆ ಮಾರಕ ಅಲ್ಲ ;  ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ

    ತುಮಕೂರು: ಕರೊನಾ ಆರ್ಭಟದ ನಡುವೆ ಹಳಿ ತಪ್ಪಿರುವ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಲು ಶನಿವಾರ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ 4ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

    ಜಿಲ್ಲೆಯಲ್ಲಿ ಮಿಡತೆ ಹಾವಳಿ ಬಗ್ಗೆ ವರದಿ ಬಂದಿದ್ದು, ವಿಜ್ಞಾನಿಗಳು ಈ ಮಿಡತೆಗಳ ಪರಿವೀಕ್ಷಣೆ ನಡೆಸಿದ್ದಾರೆ. ಇವು ರೈತರ ಬೆಳೆಗಳಿಗೆ ಮಾರಕ ಅಲ್ಲವೆಂದು ವರದಿ ನೀಡಿರುವುದರಿಂದ ರೈತರು ಆತಂಕಪಡುವ ಅವಶ್ಯಕತೆ ಇಲ್ಲ. ಕೊಂಡ್ಲಿ ಹುಳು ಅಥವಾ ಲದ್ದಿಹುಳು ಬಾಧೆ ನಿಯಂತ್ರಿಸಲು ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ತೋಟಗಾರಿಕೆ ಹಾಗೂ ಕೃಷಿ ಇಲಾಖೆ ನೀಡುವ ಜಿಲ್ಲೆಯ ಸಾಗುವಳಿ ಭೂಹಿ ಡುವಳಿಯಲ್ಲಿ 25ಸಾವಿರ ಹೆಕ್ಟೇರ್ ವ್ಯತ್ಯಾಸ ಕಂಡುಬರುತ್ತಿದ್ದು, ನಿಖರ ವರದಿಯನ್ನು ನೀಡುವಂತೆ ಸಲಹೆ ಮಾಡಿದ ಸಚಿವರು, ಜಿಲ್ಲೆಯಲ್ಲಿ ಬೆಳೆದ ಯಾವುದೇ ಹಣ್ಣುಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲದಿರುವ ಬಗ್ಗೆ ಪ್ರಸ್ತಾಪಿಸಿ ತೋಟಗಾರಿಕೆ ಇಲಾಖೆ ವತಿಯಿಂದ ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದರು.

    ಕಾಲಮಿತಿಯಲ್ಲಿ ಪೂರ್ಣಗೊಳಿಸಿ: ಜಿಲ್ಲೆಯಲ್ಲಿ ವಿವಿಧ ಇಲಾಖೆಯಲ್ಲಿ ವಿವಿಧ ಯೋಜನೆಗಳನ್ನು ಕಾಲಬದ್ಧ ಮಿತಿಯಲ್ಲಿ ಪೂರ್ಣಗೊಳಿಸುವುದರ ಜತೆಗೆ ಅರ್ಹರಿಗೆ ಸರ್ಕಾರದ ಯೋಜನೆಗಳ ಲಾಭ ತಲುಪಿಸುವ ಕೆಲಸವಾಗಬೇಕು. ಸಕಾಲದಲ್ಲಿ ಎಲ್ಲ ಕಾಮಗಾರಿಗಳನ್ನು ಮುಗಿಸಿ ಎಂದು ಮಾಧುಸ್ವಾಮಿ ಅಧಿಕಾರಿಗಳಿಗೆ ಛಾಟಿ ಬೀಸಿದರು. ಉದ್ದು, ಹೆಸರು ಮತ್ತು ಅಲಸಂದೆ ಬೆಳೆ ಸುಮಾರು 10472 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಜಿಲ್ಲೆಯಲ್ಲಿ ಇಲ್ಲವೆಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ ಸಭೆಗೆ ಮಾಹಿತಿ ನೀಡಿದರು.

    ಜಿಲ್ಲೆಯಲ್ಲಿ ಮೇವಿನ ಕೊರತೆ ಬಾರದ ಹಾಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ಪ್ರಕೃತಿ ವಿಕೋಪದಿಂದ ಕುರಿ, ಜಾನುವಾರು ಸತ್ತರೆ ಅವುಗಳಿಗೆ ವಿಮೆ ಮಾಡಿಸುವ ಮತ್ತು ಪರಿಹಾರ ನೀಡುವ ಕೆಲಸ ಇಲಾಖೆಯಿಂದಾಗಬೇಕು ಎಂದು ಸಚಿವರು ಸೂಚಿಸಿದರು. ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ತಗ್ಗಿಸುವುದರ ಜತೆಗೆ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಕನಿಷ್ಠ ಶೇ.60 ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್. ನಟರಾಜು ಅವರಿಗೆ ಮಾಧುಸ್ವಾಮಿ ಸೂಚಿಸಿದರು. ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಬಡವರ ಏಳ್ಗೆಗಾಗಿ ಗಂಗಾ ಕಲ್ಯಾಣ ಯೋಜನೆ ಸರ್ಕಾರ ಜಾರಿಗೆ ತಂದಿದ್ದು, 2018-19ನೇ ಸಾಲಿನ ಕೊಳವೆ ಬಾವಿಗಳನ್ನು ಕೊರೆಸದೆ ಇರುವ ಬಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ನಿಗಮದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

    ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಲತಾ, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸತ್ಯನಾರಾಯಣ್, ಎಂ.ವಿ.ವೀರಭದ್ರಯ್ಯ, ಮಸಾಲೆ ಜಯರಾಂ, ಡಾ.ಎಚ್. ಡಿ.ರಂಗನಾಥ್, ಬೆಮೆಲ್ ಕಾಂತರಾಜು, ತಿಪ್ಪೇಸ್ವಾಮಿ ಹಾಗೂ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ, ಸಿಇಒ ಶುಭಾಕಲ್ಯಾಣ್, ಎಎಸ್ಪಿ ಟಿ.ಜೆ.ಉದೇಶ್ ಇದ್ದರು.

    ತಾಲೂಕುಗಳಲ್ಲೂ ಕರೊನಾ ಚಿಕಿತ್ಸೆ: ಜಿಲ್ಲಾ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ 200 ಬೆಡ್ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ನೂತನವಾಗಿ ಮಾಡಿರುವ ಲ್ಯಾಬ್‌ನಲ್ಲಿ ವೈರಸ್‌ಗೆ ಸಂಬಂಧಿಸಿದ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನಡೆಯುವಂತೆ ಕ್ರಮ ಜರುಗಿಸಬೇಕು. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ 20 ಬೆಡ್‌ಗಳ ಕೋವಿಡ್ ಆಸ್ಪತ್ರೆಗಳನ್ನು ಸಜ್ಜು ಮಾಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು. ತಾಲೂಕು ಮಟ್ಟದಲ್ಲಿಯೂ ಕ್ವಾರಂಟೈನ್‌ನಲ್ಲಿಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲೆಗೆ ಹೆಚ್ಚುವರಿಯಾಗಿ ಸರ್ಕಾರ 5ಕೋಟಿ ರೂ. ಅನುದಾನ ನೀಡಿದ್ದು, ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬರುವ ಎಲ್ಲರನ್ನೂ ತಪಾಸಣೆಗೊಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸಭೆಗೆ ಮಾಹಿತಿ ನೀಡಿದರು.

    ಕರೊನಾದಿಂದ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಆದರೆ, ಇದನ್ನು ನೆಪ ಮಾಡಿಕೊಂಡು ಅನುದಾನ ವಾಪಸ್ ಆದರೆ ನಾನು ಸಹಿಸುವುದಿಲ್ಲ. ಇಂತಹ ಕಷ್ಟದ ಸಮಯದಲ್ಲಿಯೂ ಜಿಲ್ಲೆಗೆ ವಿವಿಧ ಮೂಲಗಳಿಂದ ಹಣ ತಂದಿದ್ದು ಅದನ್ನು ಸಂಪೂರ್ಣ ಬಳಸುವ ಹೊಣೆ ಅಧಿಕಾರಿಗಳ ಮೇಲಿದೆ.
    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts