More

    ಗ್ರಾಪಂ ಮತದಾನ ಪ್ರಮಾಣ ಹೆಚ್ಚಿಸಿದ ಸ್ವೀಪ್

    ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಜಿದ್ದಿಗೆ ಬಿದ್ದು ಓಡಾಡಿದ ಹಾಗೂ ಓಡಾಡುತ್ತಿರುವ ಅಭ್ಯರ್ಥಿಗಳಿಗೆ ಸಿಸ್ಟಿಮೆಟಿಕ್ ವೋಟರ್ಸ್ ಎಜುಕೇಶನ್ ಆ್ಯಂಡ್ ಇಲೆಕ್ಟೋರಲ್ ಪಾರ್ಟಿಸಿಪೇಶನ (ಸ್ವೀಪ್) ಮತದಾನ ಜಾಗೃತಿ ಅಭಿಯಾನ ವರದಾನವಾಗುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ ಮತದಾನದ ಪ್ರಮಾಣ ಹೆಚ್ಚಳವಾಗಿದ್ದು, ಎರಡನೇ ಹಂತದಲ್ಲೂ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ.

    ಶೇ.82ರಷ್ಟು ಮತದಾನ: ಮತದಾನ ಪ್ರಮಾಣ ಹೆಚ್ಚಿಸಲು, ಮತದಾನದ ಕುರಿತು ಮನೆ ಮನೆಗೆ ತೆರಳಿ ಜನರಿಗೆ ಅರಿವು ಮೂಡಿಸುತ್ತಿರುವ ಸ್ವೀಪ್ ಸಮಿತಿ ಮತದಾನ ಜಾಗೃತಿ ಅಭಿಯಾನ ಮೂಡಿಸುತ್ತಿದೆ. ಪರಿಣಾಮ ಅನಕ್ಷರಸ್ಥ ಮತದಾರರಿಗೆ ಸುಲಭ, ಸರಳ ಮಾಹಿತಿ ಲಭ್ಯವಾಗುತ್ತಿರುವುದರಿಂದ ಮತದಾನ ಪ್ರಮಾಣ ಹೆಚ್ಚಾಗುತ್ತಿದೆ. ಅಲ್ಲದೆ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈಗಾಗಲೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾನ ಜಾಗೃತಿ ಮೂಡಿಸುತ್ತಿರುವ ಪರಿಣಾಮ 259 ಗ್ರಾಪಂಗಳಿಗೆ ಜರುಗಿದ ಮೊದಲ ಹಂತದ ಚುನಾವಣೆಯಲ್ಲಿ ಶೇ.82.70 ಮತದಾನವಾಗಿದೆ.

    ಡಿ.27ರಂದು ಎರಡನೇ ಹಂತದಲ್ಲಿ 218 ಗ್ರಾಪಂಗಳ 3,779 ಸದಸ್ಯ ಸ್ಥಾನಗಳಿಗೆ ಜರುಗಲಿರುವ ಚುನಾವಣೆಯಲ್ಲಿ ಶೇ.100 ಮತದಾನ ಮಾಡುವ ಉದ್ದೇಶದೊಂದಿಗೆ ಸ್ವೀಪ್ ಸಮಿತಿ ಹಳ್ಳಿಗಳಲ್ಲಿ ಬೀದಿ ನಾಟಕ, ವಾಹನಗಳ ಮೂಲಕ ಪ್ರಚಾರ ನಡೆಸಿ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದೆ. ಜಿಲ್ಲೆಯಲ್ಲಿ 2010 ಮತ್ತು 2015ರ ಗ್ರಾಪಂ ಚುನಾವಣೆಯಲ್ಲಿ ಶೇ. 35ಕ್ಕಿಂತ ಕಡಿಮೆ ಮತದಾನವಾಗಿರುವ 540ಕ್ಕೂ ಅಧಿಕ ವಾರ್ಡ್ ಗುರುತಿಸಿ ಹೆಚ್ಚಿನ ಪ್ರಚಾರ ಕೈಗೊಳ್ಳಲಾಗುತ್ತಿದೆ.

    ಅಲ್ಲದೆ 2018ರ ವಿಧಾನಸಭೆ ಮತ್ತು 2019 ಲೋಕಸಭೆ ಚುನಾವಣೆಗಳಲ್ಲಿ ಶೇ.40ಕ್ಕಿಂತ ಕಡಿಮೆ ಮತದಾನವಾಗಿರುವ ಹಳ್ಳಿಗಳಲ್ಲಿ ವಿಶೇಷ ತಂಡ ರಚನೆ ಮಾಡಿ ಪ್ರಚಾರ ನಡೆಸಲಾಗುತ್ತಿದೆ. ಅಗತ್ಯವಿರುವ ಕಡೆ ಯುವಕರನ್ನು ಬಳಸಿಕೊಂಡು ಮತದಾನ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗುತ್ತಿದೆ.

    ವಾರ್ಡ್‌ಗಳೇ ಟಾರ್ಗೆಟ್: ಎರಡನೇ ಹಂತದಲ್ಲಿ 218 ಗ್ರಾಪಂಗಳ 3,779 ಸದಸ್ಯ ಸ್ಥಾನಗಳಿಗೆ ಜರುಗಲಿರುವ ಚುನಾವಣೆಯಲ್ಲಿ 200ಕ್ಕಿಂತ ಕಡಿಮೆ ಮತ್ತು 500ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ವಾರ್ಡ್‌ಗಳಲ್ಲಿನ ಹೆಚ್ಚಿನ ಮತ ಜಾಗೃತಿ ಮಾಡಲಾಗುತ್ತಿದೆ. ಅಲ್ಲದೆ ಮತದಾನಕ್ಕೆ
    ಮುನ್ನ ಪ್ರತಿ ಕುಟುಂಬದ ಮತದಾರರಿಗೆ ಚುನಾವಣೆ ದಿನಾಂಕ, ಸಂಖ್ಯೆ, ಮತಗಟ್ಟೆಗಳ ಮಾಹಿತಿ ನೀಡಲಾಗುತ್ತಿದೆ ಎಂದು ಸ್ವೀಪ್ ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ.

    ಸ್ವೀಪ್ ಸಮಿತಿಯ ನಿರಂತರ ಜಾಗೃತಿಯಿಂದಾಗಿ ಪ್ರತಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಾಗುತ್ತಿದೆ. ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಾಗಿರುವುದು ಅದಕ್ಕೆ ಸಾಕ್ಷಿ. ಜಾಗೃತಿ ಮೂಡಿಸಿದಷ್ಟು ಮತದಾನದ ಮಹತ್ವ ತಿಳಿಸಲು ಸಾಧ್ಯವಾಗುತ್ತದೆ.
    | ದರ್ಶನ ಎಚ್.ವಿ. ಜಿಪಂ ಸಿಇಒ, ಸ್ವೀಪ್ ಸಮಿತಿ ಅಧ್ಯಕ್ಷ

    ಗ್ರಾಪಂ ಚುನಾವಣೆ ಯಲ್ಲಿ ಸ್ವೀಪ್ ಸಮಿತಿ ಜಾಗೃತಿ ಅಭಿಯಾನದಿಂದ ಮತದಾನ ಪ್ರಮಾಣ ಹೆಚ್ಚಾಗಿದೆ. ಪ್ರತಿಯೊಂದು ಚುನಾವಣೆಯಲ್ಲಿ ಸ್ವೀಪ್ ಸಮಿತಿ ಪ್ರಮುಖ ಪಾತ್ರ ವಹಿಸುತ್ತಿದೆ.
    | ಎಂ.ಜಿ.ಹಿರೇಮಠ ಜಿಲ್ಲಾ ಚುನಾವಣಾಧಿಕಾರಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts