More

    ಗ್ರಾಪಂ ಚುನಾವಣೆ ಅಧಿಸೂಚನೆ ಪ್ರಕಟಣೆ ನಾಳೆ

    ಧಾರವಾಡ: ಜಿಲ್ಲೆಯ 136 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆಯನ್ನು ಡಿ. 22 ಹಾಗೂ 2ನೇ ಹಂತದ ಚುನಾವಣೆಯನ್ನು ಡಿ. 27ರಂದು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 7 ತಾಲೂಕುಗಳ ಒಟ್ಟು 144 ಗ್ರಾಪಂಗಳ ಪೈಕಿ 8 ಗ್ರಾಪಂಗಳ ಅವಧಿ ಡಿಸೆಂಬರ್ ನಂತರ ಮುಗಿಯುವ ಹಿನ್ನೆಲೆಯಲ್ಲಿ 136 ಗ್ರಾಪಂಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಡಿ. 7ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದರು.

    ಮೊದಲ ಹಂತದಲ್ಲಿ ಧಾರವಾಡದ 34, ಅಳ್ನಾವರ 4 ಹಾಗೂ ಕಲಘಟಗಿಯ 27 ಸೇರಿ ಒಟ್ಟು 65 ಗ್ರಾಪಂಗಳಿಗೆ ಹಾಗೂ 2ನೇ ಹಂತದಲ್ಲಿ ಹುಬ್ಬಳ್ಳಿಯ 26, ಕುಂದಗೋಳ 23, ನವಲಗುಂದ 14, ಅಣ್ಣಿಗೇರಿ 8 ಸೇರಿ 71 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಎರಡೂ ಹಂತದ ಮತದಾನ ಸೇರಿ ಒಟ್ಟು 888 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.

    ಮೊದಲ ಹಂತದ ಚುನಾವಣೆ ನಾಮಪತ್ರ ಸಲ್ಲಿಸಲು ಡಿ. 11 ಕೊನೆ ದಿನ. ನಾಮಪತ್ರ ಪರಿಶೀಲನೆ ಕಾರ್ಯ ಡಿ. 12ರಂದು ನಡೆಯಲಿದ್ದು, ಡಿ. 14ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಡಿ. 22ರಂದು ಮತದಾನ ನಡೆಯಲಿದೆ. 2ನೇ ಹಂತದಲ್ಲಿ ನಾಮಪತ್ರ ಸಲ್ಲಿಸಲು ಡಿ. 16 ಕೊನೆ ದಿನ. ನಾಮಪತ್ರ ಪರಿಶೀಲನೆ ಕಾರ್ಯ ಡಿ. 17ರಂದು ನಡೆಯಲಿದ್ದು, ಡಿ. 19ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಡಿ. 27ರಂದು ಮತದಾನ ನಡೆಯಲಿದೆ. ಡಿ. 30ರಂದು ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.

    136 ಗ್ರಾಪಂಗಳಲ್ಲಿ ಒಟ್ಟು 3,09,735 ಪುರುಷರು, 2,93,844 ಮಹಿಳೆಯರು ಸೇರಿ ಒಟ್ಟು 6,03,592 ಮತದಾರರಿದ್ದಾರೆ. ಮಾದರಿ ನೀತಿ ಸಂಹಿತೆ ಡಿ. 31ರವರೆಗೆ ಜಾರಿಯಲ್ಲಿರಲಿದ್ದು, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿ ಅವರನ್ನು ಜಿಲ್ಲಾ ನೋಡಲ್ ಅಧಿಕಾರಿಯಾಗಿ, ತಾಲೂಕು ಮಟ್ಟದಲ್ಲಿ ತಾಪಂ ಇಒ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಸಾರ್ವಜನಿಕರು ಚುನಾವಣೆ ಅಕ್ರಮ ಕುರಿತು ಇವರನ್ನು ಸಂಪರ್ಕಿಸಬಹುದು ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಮಾತನಾಡಿ, ಚುನಾವಣೆಗೆ ಅಗತ್ಯ ಸಿಬ್ಬಂದಿ ನೇಮಿಸಿ ಬಂದೋಬಸ್ತ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಬಂದೋಬಸ್ತ್ ಮಾಡಲಾಗುವುದು. ನಗರದಿಂದ ಮದ್ಯಪಾನ ಸರಬರಾಜು, ನಿಯಮ ಮತ್ತು ಸಮಯ ಮೀರಿ ಕಾರ್ಯನಿರ್ವಹಿಸುವ ಢಾಬಾ, ಮದ್ಯ ಸರಬರಾಜು ಅಂಗಡಿಗಳ ಕುರಿತು ದೂರು ಬಂದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

    ಜಿಪಂ ಸಿಇಒ ಡಾ. ಸುಶೀಲಾ.ಬಿ., ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಇತರರು ಇದ್ದರು.

    ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ

    ನೆರೆ ಪರಿಹಾರ ಸೇರಿ ಯಾವುದೇ ಪರಿಹಾರಗಳನ್ನು ಫಲಾನುಭವಿಗಳಿಗೆ ನೀಡಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಮಳೆ, ನೆರೆಯಿಂದ ಹಾನಿಗೀಡಾದ ಮನೆಗಳ ಹಂಚಿಕೆ ವಿಚಾರದಲ್ಲಿ 2 ಗ್ರಾಮಗಳಲ್ಲಿ ಕೆಟಗರಿ ಆಯ್ಕೆ ಸರಿಯಾಗಿ ನಡೆದಿಲ್ಲ ಎಂದು ದೂರು ಬಂದಿದೆ. ಹೀಗಾಗಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ. ಅವರು ವರದಿ ನೀಡಿದ ಬಳಿಕ ಅಧಿಕಾರಿಗಳು ತಪ್ಪು ಮಾಡಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಂಡು ಅರ್ಹ ಫಲಾನುಭವಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಾಗುವುದು. ಜಿಲ್ಲೆಗೆ ಬೆಳೆ ಪರಿಹಾರಕ್ಕೆ 48 ಕೋಟಿ ರೂ. ಹಾಗೂ ಮನೆಗಳಿಗೆ 6 ಕೋಟಿ ಸೇರಿ ಒಟ್ಟು 54 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದೆ ಎಂದು ನಿತೇಶ ಪಾಟೀಲ ತಿಳಿಸಿದರು.

    ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಶೌಚಗೃಹ ಹೊಂದಿರುವ ಕುರಿತು ಪ್ರಮಾಣ ಪತ್ರ ಅಥವಾ ಮುಂದಿನ ಒಂದು ವರ್ಷದಲ್ಲಿ ಶೌಚಗೃಹ ಹೊಂದುವ ಕುರಿತು ಮುಚ್ಚಳಿಕೆ ಪತ್ರ ನೀಡುವುದು ಕಡ್ಡಾಯ.

    ನಿತೇಶ ಪಾಟೀಲ, ಜಿಲ್ಲಾಧಿಕಾರಿ

    ನಕಲಿ ಮದ್ಯ ತಯಾರಿಕೆ, ದೂರು ನೀಡಲು ಕೋರಿಕೆ

    ಧಾರವಾಡ: ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲಿ ಸಮಾಜಘಾತಕ ಶಕ್ತಿಗಳು ಅಕ್ರಮ ಮದ್ಯ ಹಾಗೂ ಕಳ್ಳಬಟ್ಟಿ ಸಾರಾಯಿ ತಯಾರಿಸುವುದು, ಸಾಗಣೆ, ಸಂಗ್ರಹಿಸುವ, ಮಾರಾಟ ಮಾಡುವ ಸಾಧ್ಯತೆಗಳಿವೆ. ಇಂತಹ ಅಕ್ರಮಗಳು ಕಂಡ ಬಂದಲ್ಲಿ ದೂರು ನೀಡುವಂತೆ ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ರಚಿಸಿರುವ ಕಂಟ್ರೋಲ್ ರೂಂ ದೂ. 0836-2322066, ಟೋಲ್ ಫ್ರೀ ಸಂಖ್ಯೆ 18004250742ಗೆ ಸಂರ್ಪಸಬಹುದು. ಅಲ್ಲದೆ ತಾಲೂಕು ಮಟ್ಟದ ಅಬಕಾರಿ ನಿರೀಕ್ಷಕರಾದ ಚಿದಾನಂದ ಮೊದಗೇಕರ ಮೊ. 99720 44752, ಸಂಜೀವರಡ್ಡಿ ಬಳುಲದ (96113 22327), ಅಮೀತ ಬೆಳ್ಳುಬಿ (98457 80173), ಪ್ರೇಮಸಿಂಗ್ ಲಮಾಣಿ (99026 63478), ಜಿ.ಟಿ. ಗುಂಜೀಕರ (87225 73613), ಅಬಕಾರಿ ಉಪ ಅಧೀಕ್ಷಕರಾದ ಆತ್ಮಲಿಂಗಯ್ಯ ಮಠಪತಿ (94495 97086), ಅಮೃತ ಗುಡಿ (94495 97088), ಅಬಕಾರಿ ನಿರೀಕ್ಷಕರಾದ ರಾಜೇಂದ್ರ ಮುರನಾಳ (94495 97085) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts