More

    ಮಾಯಸಂದ್ರದಲ್ಲಿ ಗ್ರಾಮವಾಸ್ತವ್ಯದ ಬೆಳಕು; ಕಂದಾಯ ಸಚಿವ ಆರ್.ಅಶೋಕ್ ಮಿಂಚಿನ ಸಂಚಾರ

    ತುರುವೇಕೆರೆ(ತುಮಕೂರು): ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಶನಿವಾರ ನಡೆಸಿದ ಗ್ರಾಮವಾಸ್ತವ್ಯ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಗ್ರಾಮೀಣ ಜನರ ಬಹುದಿನಗಳ ಸಮಸ್ಯೆಗಳಿಗೆ ಪರಿಹಾರ ಸಿಗುವ ಬಹುದೊಡ್ಡ ಭರವಸೆ ಮೂಡಿಸಿತು.

    ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಕಂದಾಯ ಇಲಾಖೆಯಿಂದ ಆಗಬೇಕಿರುವ ಕೆಲಸ ಹಾಗೂ ಸಮಸ್ಯೆ ಕೇಳಿದ್ದು ಜನರಿಗೆ ಸರ್ಕಾರದ ಮೇಲಿನ ವಿಶ್ವಾಸ ಬಲಗೊಳಿಸಿತು. ಮಂಡ್ಯ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮಾಯಸಂದ್ರದಲ್ಲಿ ಇಡೀ ಜಿಲ್ಲಾಡಳಿತವೇ ಮೊಕ್ಕಾಂ ಹೂಡಿದ್ದು, ನೂರಾರು ಜನರು ದೂರದ ಜಿಲ್ಲಾಕೇಂದ್ರಕ್ಕೆ ಅಲೆಯುವುದು ತಪ್ಪಿತು. ಕಾರ್ಯಕ್ರಮದ ಮೂಲಕ ತಾಲೂಕಿನ 5,333 ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸೌಲಭ್ಯವು ಲಂಚದ ಕಾಟವಿಲ್ಲದೇ ಮನೆಗೆ ಬಂದು ತಲುಪಿದಂತಾಯಿತು. ಶನಿವಾರ ಬೆಳಗ್ಗೆ 11ಕ್ಕೆ ಆಗಮಿಸಿದ ಸಚಿವ ಅಶೋಕ್ ದಿನವಿಡೀ ಗ್ರಾಮದಲ್ಲಿ ಸುತ್ತಾಡಿ ಜನರ ಅಹವಾಲು ಆಲಿಸಿದರು. ಎಲ್ಲಿಯೂ ಮುಖ ಗಂಟಿಕ್ಕಿಕೊಳ್ಳದೆ ನಗುಮೊಗದಿಂದಲೇ ಜನರ ಸಮಸ್ಯೆಗಳಿಗೆ ಕಿವಿಗೊಟ್ಟರು. ಅಲ್ಲದೆ, ಸ್ಥಳದಲ್ಲೇ ಕೆಲವು ಸಮಸ್ಯೆಗೆ ಪರಿಹಾರ ಕೊಟ್ಟರಲ್ಲದೆ, ಉಳಿದವಕ್ಕೆ ಪರಿಹರಿಸುವ ಭರವಸೆ ಕೊಟ್ಟಿದ್ದು ವಿಶೇಷವಾಗಿತ್ತು.

    ಅದ್ದೂರಿ ಸ್ವಾಗತ: ನೂತನ ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಹುಟ್ಟೂರಿಗೆ ಗ್ರಾಮವಾಸ್ತವ್ಯಕ್ಕೆ ಆಗಮಿಸಿದ ಸಚಿವ ಅಶೋಕ್ ಅವರನ್ನು ಗ್ರಾಮದ ಹೆಣ್ಣುಮಕ್ಕಳು ಆರತಿ ಎತ್ತಿ, ಪೂರ್ಣಕುಂಭದೊಂದಿಗೆ ಸ್ವಾಗತ ಮಾಡಿಕೊಂಡರು. ಟ್ರ್ಯಾಕ್ಟರ್ ಏರಿ ಮೆರವಣಿಗೆಯಲ್ಲಿ ವೇದಿಕೆಗೆ ಆಗಮಿಸಿದ ಅಶೋಕ್ ಅವರಿಗೆ ಶಾಸಕ ಮಸಾಲಾ ಜಯರಾಂ, ಸಂಸದ ಜಿ.ಎಸ್.ಬಸವರಾಜು, ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳಾ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಾಥ್ ನೀಡಿದರು. ಪಿಂಚಣಿ, ಸುಕನ್ಯಾ, ಪಡಿತರಚೀಟಿ ಸೇರಿ ವಿವಿಧ ಯೋಜನೆಗಳ 5333 ಫಲಾನುಭವಿಗಳಿಗೆ ಮಂಜೂರಾತಿ ಪ್ರಮಾಣಪತ್ರ ವಿತರಿಸಿದರು. ವೇದಿಕೆ ಅಕ್ಕಪಕ್ಕದಲ್ಲಿ ಹಾಕಿದ್ದ 30 ವಿವಿಧ ಇಲಾಖೆ ಮಳಿಗೆಗಳಿಗೂ ತೆರಳಿ ವೀಕ್ಷಿಸಿದರು.

    ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆ ಕಾರ್ಯಕ್ರಮದಿಂದ ಗ್ರಾಮೀಣರ ಮನೆ ಬಾಗಿಲಿಗೆ ಸರ್ಕಾರ ಹೋಗುತ್ತಿದೆ. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಸ್ಮಶಾನಕ್ಕೆ ಭೂಮಿ ಮಂಜೂರು ಸೇರಿ ನಾನಾ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡುತ್ತಿರುವುದಾಗಿ ಅಶೋಕ್ ಆಡಿದ ಭರವಸೆಯ ಮಾತುಗಳು ಗ್ರಾಮಸ್ಥರ ಕಣ್ಣುಗಳಲ್ಲಿ ಬೆಳಕು ಮೂಡಿಸಿತು.

    ಮಧ್ಯಾಹ್ನ ಜೈನ ಸಮುದಾಯ ಭವನದಲ್ಲಿ ಊಟ ಸೇವಿಸಿದ ಸಚಿವರು ಮಾಧ್ಯಮ ಪ್ರತಿನಿಧಿಗಳ ಜತೆ ಕಂದಾಯ ಇಲಾಖೆಯಲ್ಲಿರುವ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ರಾತ್ರಿ ಆದಿಚುಂಚನಗಿರಿ ಶಾಖಾ ಮಠದ ಕಲ್ಪತರು ಆಶ್ರಮದ ಆಶ್ರಮ ಶಾಲೆಯಲ್ಲಿಯೇ ವಾಸ್ತವ್ಯ ಮಾಡಿದ್ದು, ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾಂಸ್ಕೃತಿಕ ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ರಿಲ್ಯಾಕ್ಸ್ ಆದರು.

    ಸಚಿವರು ದಿನವಿಡೀ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಸಾರ್ವಜನಿಕರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹರಿಸುವ ಪ್ರಯತ್ನ ಮಾಡಿದರು. ಕಾಲಮಿತಿಯೊಳಗೆ ಮನವಿ ಇತ್ಯರ್ಥಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸ್ಥಳೀಯರ ಜತೆ ಬೆರೆತು ಕೆಲಕಾಲ ಮಂತ್ರಿ ಎಂಬುದನ್ನೇ ಮರೆತು ಗ್ರಾಮೀಣ ಭಾಷೆಯಲ್ಲಿಯೇ ಎಲ್ಲರೊಂದಿಗೆ ಸಂವಹನ ನಡೆಸಿದ್ದು, ಜನರಲ್ಲಿ ಭರವಸೆ ಮೂಡಿಸಿತು. ಸಚಿವರ ಸರಳತೆ, ಪ್ರೀತಿ, ಆತ್ಮೀಯ ಒಡನಾಟ, ಜನಪರ ಕಾಳಜಿಯ ಸ್ವಭಾವ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು.

    ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಾ.ಸಿ.ಎಂ.ರಾಜೇಶ್​ಗೌಡ, ಜಿಪಂ ಸಿಇಒ ಡಾ.ವಿದ್ಯಾಕುಮಾರಿ, ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಶಹಾಪೂರವಾಡ್, ಎಡಿಸಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ.ಅಜಯ್ ಮತ್ತಿತರರು ಇದ್ದರು.

    ಮಾಯಸಂದ್ರ ಪ್ರಗತಿಗೆ 1 ಕೋಟಿ ರೂ.: ಸಚಿವ ಅಶೋಕ್ ವಾಸ್ತವ್ಯ ಹೂಡುವ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಪರಿಪಾಠ ಇಲ್ಲಿಯೂ ಮುಂದುವರಿಯಿತು. ಮಾಯಸಂದ್ರದಲ್ಲಿಯೂ ಕಾರ್ಯಕ್ರಮದ ನೆನಪಿಗೆ ಊರಿನ ಪ್ರಗತಿಗೆ ಒಂದು ಕೋಟಿ ರೂ. ವಿಶೇಷ ಅನುದಾನ ನೀಡುವುದಾಗಿ ಘೊಷಿಸಿದರು.

    ಮೆರವಣಿಗೆಗೆ ಕಲಾ ತಂಡಗಳ ಮೆರುಗು: ಸಚಿವ ಆರ್.ಅಶೋಕ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಗ್ರಾಮದ ಸಂತೇಬೀದಿಯಲ್ಲಿ ಸಾಗಿದ ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಏಕಲವ್ಯನ ಗಾಂಭೀರ್ಯ ಹೆಜ್ಜೆಗಳು, ಮಹಿಳೆಯರ ಪೂರ್ಣಕುಂಭಗಳು ಮೆರುಗು ತಂದಿತ್ತು.

    ಜಗ್ಗೇಶ್ ಪತ್ನಿಗೂ ವೇದಿಕೆಯಲ್ಲಿ ಸ್ಥಾನ!: ವಿವಿಧ ಇಲಾಖೆ ಫಲಾನುಭವಿಗೆ ಸೌಲಭ್ಯ ವಿತರಣೆ ನಂತರ ಮಾಯಸಂದ್ರ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಜತೆಯಲ್ಲಿ ಅವರ ಪತ್ನಿ ಪರಿಮಳಾ ಕೂಡ ಆಸೀನರಾಗಿದ್ದರು. ಶಾಸಕ ಮಸಾಲಾ ಜಯರಾಂ ತಮಗೆ ಮೀಸಲಾಗಿಟ್ಟಿದ್ದ ಆಸನವನ್ನು ಜಗ್ಗೇಶ್​ಗೆ ಬಿಟ್ಟುಕೊಟ್ಟು ದೂರದಲ್ಲಿ ಕುಳಿತರು. ಕಂದಾಯ ಸಚಿವರನ್ನು ಮೆರವಣಿಗೆಯಲ್ಲಿ ಕರೆತರುವಾಗಲೂ ಪರಿಮಳಾ ಸೇರಿ ಜಗ್ಗೇಶ್ ಕುಟುಂಬದ ಸದಸ್ಯರು ಇದ್ದರು.

    ಮಾಯಸಂದ್ರದಲ್ಲಿ ಗ್ರಾಮವಾಸ್ತವ್ಯದ ಬೆಳಕು; ಕಂದಾಯ ಸಚಿವ ಆರ್.ಅಶೋಕ್ ಮಿಂಚಿನ ಸಂಚಾರ
    ತಲೆಗೆ ಹಸಿರುಟವೆಲ್ ಸುತ್ತಿ ಟ್ರ್ಯಾಕ್ಟರ್ ಓಡಿಸಿದ ಸಚಿವ ಅಶೋಕ್.

    ಗ್ರಾಮವಾಸ್ತವ್ಯ ನನ್ನ ಕನಸು, ನನ್ನ ಶಾಲೆ: ಗ್ರಾಮ ವಾಸ್ತವ್ಯ ನನ್ನ ಕನಸು, ಈ ಕನಸು ಪಾಠಶಾಲೆಯಾಗಿದ್ದು, ಕಲಿಕೆಗೆ ಪೂರಕವಾಗಿದೆ ಎಂದು ಅಶೋಕ್ ಹೇಳಿದರು. ಡಿಸಿ, ಎಸಿ, ತಹಸೀಲ್ದಾರ್ ಕಚೇರಿಯಿಂದ ಹೊರಬರದೆ ಕುಳಿತಿದ್ದರು. ಅವರನ್ನು ಜನರ ಮನೆ ಬಾಗಿಲಿಗೆ ಕಳುಹಿಸುವ ಕೆಲಸವನ್ನು ಈ ಕಾರ್ಯಕ್ರಮ ಮಾಡಿದೆ. ಬ್ರಿಟೀಷರ ಕಾಲದಲ್ಲಿ ಅಮಲ್ದಾರರೇ ಹಳ್ಳಿಗೆ ಬರುತ್ತಿದ್ದರು. ಈಗ ತಾಲೂಕು ಕಚೇರಿ ಬಳಿಯಿರುವ ಮಧ್ಯವರ್ತಿಗಳನ್ನು ದಾಟಿ ಅಧಿಕಾರಿಯನ್ನು ಭೇಟಿಯಾಗುವ ಸ್ಥಿತಿಯಿದ್ದು ಇದು ಬದಲಾಗಬೇಕಿದೆ ಎಂದರು. ಮಂತ್ರಿಯಾದರೇನು, ಅಧಿಕಾರಿಯಾದರೇನು ಜನರ ಮನೆ ಬಾಗಿಲಿಗೆ ಬರಬೇಕು. 5,333 ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ನೀಡಲಾಗುತ್ತಿದೆ. ನಾನು ಬರದಿದ್ದರೆ ಇವರೆಲ್ಲ ಸರ್ಕಾರಿ ಕಚೇರಿಗೆ ಅಲೆಯಬೇಕಿತ್ತು. ರಾಜ್ಯದ 31 ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮ ನಡೆಯುತ್ತಿದ್ದು ಜನರಿಗೆ ಎಷ್ಟು ಉಪಯೋಗವಾಗಬಹುದು ಎಂಬುದನ್ನು ಊಹಿಸಿಕೊಳ್ಳಿ. ಈವರೆಗೆ 50 ಸಾವಿರ ಫಲಾನುಭವಿಗಳಿಗೆ ಗ್ರಾಮವಾಸ್ತವ್ಯದಲ್ಲಿ ಅನುಕೂಲವಾಗಿದೆ. ಈ ಹಿಂದೆ ಹೊಡೆದಾಟ ನಡೆದಾಗ ಊರಿಗೆ ಡಿಸಿ ಬರುತ್ತಿದ್ದರು. ಈಗ ಕಂದಾಯ ಇಲಾಖೆಯಲ್ಲಿ ಪರಿವರ್ತನೆ ತಂದಿದ್ದೇನೆ. ಅಧಿಕಾರಿಗಳು ಜನರ ಮನೆಯ ಬಾಗಿಲಿಗೆ ಬರುವುದು ಕ್ರಾಂತಿಕಾರಕ ಬೆಳವಣಿಗೆ. ಅರ್ಜಿಯನ್ನು ನಾನೇ ವಿಲೇವಾರಿ ಮಾಡಿಸುತ್ತೇನೆ. ಹತ್ತೇ ನಿಮಿಷದಲ್ಲಿ ಹಕ್ಕುಪತ್ರ ನೀಡುವ ಕೆಲಸವಾಗುತ್ತಿದೆ ಎಂದು ಅಶೋಕ್ ತಿಳಿಸಿದರು.

    ಹಳ್ಳಿ ಹೈದ- ದಿಲ್ಲಿಗೆ ಹೊರಟ!: ರಾಜ್ಯಸಭಾ ಜಗ್ಗೇಶ್ ಕೇಂದ್ರಿತವಾಗಿದ್ದ ಕಾರ್ಯಕ್ರಮದಲ್ಲಿ ಅವರಿಗೆ ಶುಭಾಶಯ ಕೋರಿದ ಫೆಕ್ಸ್ ಗಳು ಗ್ರಾಮದುದ್ದಕ್ಕೂ ಗಮನ ಸೆಳೆದವು. ಜಗ್ಗೇಶ್ ಒಡೆತನದ ಕಲ್ಯಾಣ ಮಂಟಪದ ಮುಂದೆ ಊರಿನ ಅಭಿಮಾನಿಗಳು ‘ಹಳ್ಳಿ ಹೈದ-ದಿಲ್ಲಿಗೆ ಹೊರಟ-ವ ಾಯಸಂದ್ರಕ್ಕೆ ಕೀರ್ತಿ ತಂದ’ ಎಂಬ ಫ್ಲೆಕ್ಸ್ ದೊಡ್ಡದಾಗಿ ಹಾಕಿದ್ದರು. ಸಂಸದರ ಆದರ್ಶ ಗ್ರಾಮವಾಗಿ ಮಾಯಸಂದ್ರವನ್ನು ಆಯ್ಕೆಮಾಡಿಕೊಂಡಿ ರುವುದರಿಂದ ಸ್ಥಳೀಯರು ಅಭಿವೃದ್ಧಿಯ ಕನಸುಕಟ್ಟಿಕೊಂಡಿದ್ದಾರೆ.

    ಮಳೆ ಅಡ್ಡಿ!: ರಾಜ್ಯಸಭಾ ಸದಸ್ಯ ಜಗ್ಗೇಶ್ ಹುಟ್ಟೂರು ಆನಡುಗು ಗ್ರಾಮದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಗ್ರಾಮಸಭೆ ಮಳೆಯ ಕಾರಣಕ್ಕೆ ಮೊಟಕಾಯಿತು. ರಾತ್ರಿ 7ಕ್ಕೆ ಆರಂಭವಾದ ಸಭೆ ಕೆಲವೇ ಕ್ಷಣದಲ್ಲಿ ಸಂಪನ್ನವಾಯಿತು. ಈ ಸಂದರ್ಭದಲ್ಲಿ ಸಚಿವರು ಕೊಡೆ ಹಿಡಿದು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ್ದು ಗಮನಸೆಳೆಯಿತು. ಕಂದಾಯ ಇಲಾಖೆ ಕೆಲಸಗಳಿಗೆ ಜನರು ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸುವಲ್ಲಿ ಜಿಲ್ಲಾಧಿಕಾರಿ ನಡೆ, ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

    ಮಾಂಸದಂಗಡಿ ತೆರವುಗೊಳಿಸಿ ಬೋರ್ಡ್: ಮಾಯಸಂದ್ರದ ಸಂತೆ ಬೀದಿಯಲ್ಲಿ 8 ಮಾಂಸದಂಗಡಿಗಳಿದ್ದು ತೆರವುಗೊಳಿಸಬೇಕು ಎಂದು ಸ್ಥಳೀಯರಾದ ಮಹಾವೀರಬಾಬು, ಉಮಾಶಂಕರ್, ರಾಮಚಂದ್ರ ಮತ್ತಿತರರು ಪ್ರತಿಭಟನೆ ನಡೆಸಿದರಲ್ಲದೆ ವಿನೂತನ ರೀತಿಯಲ್ಲಿ ಸಚಿವರ ಗಮನಸೆಳೆದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಜಗ್ಗೇಶ್ ಜೀ, ಅಶೋಶ್ ಜೀ ಮಾಂಸ, ಕೋಳಿ ಅಂಗಡಿ ತೆರವುಗೊಳಿಸಿ ಎಂಬ ಬೋರ್ಡ್​ಗಳನ್ನು ಬೃಹತ್ ಮರಗಳಿಗೆ ಹಾಕುವ ಮೂಲಕ ಸಚಿವರ ಗಮನಸೆಳೆದರು.

    10 ಕೋಟಿ ರೂ. ವಿಶೇಷ ಕೊಡುಗೆ: ಮಾಯಸಂದ್ರ, ಶಿರಾ ತಾಲೂಕು ಗೌಡಗೆರೆ, ತಿಪಟೂರಿನ ನೊಣವಿನಕೆರೆಯಲ್ಲಿ ನಾಡಕಚೇರಿ ಕಟ್ಟಡ, ಗುಬ್ಬಿ ತಾಲೂಕಿನಲ್ಲಿ ಉಪನೋಂದಣಾಧಿಕಾರಿ ಕಚೇರಿ ಹಾಗೂ ತುರುವೇಕೆರೆಯಲ್ಲಿ ಮಿನಿವಿಧಾನಸೌಧಕ್ಕೆ 10ಕೋಟಿ ರೂ., ನೀಡುವುದಾಗಿ ಆರ್.ಅಶೋಕ್ ಘೊಷಿಸಿದರು. ಗ್ರಾಮ ವಾಸ್ತವ್ಯದ ಸವಿನೆನಪಿಗಾಗಿ ಕಂದಾಯ ಇಲಾಖೆ ವತಿಯಿಂದ 1ಕೋಟಿ ರೂ. ಕೊಡುಗೆಯಾಗಿ ಕೂಡಲೇ ಬಿಡುಗಡೆ ಮಾಡುತ್ತಿದ್ದೇನೆ. ತುಮಕೂರು ಜಿಲ್ಲೆಯಲ್ಲಿ ಮೀಸಲು ಅರಣ್ಯ 34 ಸಾವಿರ ಹೆಕ್ಟೇರ್, 20 ಸಾವಿರ ಹೆಕ್ಟೇರ್ ಭೂಮಿಯನ್ನು ಪುನಃ ಕಂದಾಯ ಇಲಾಖೆಗೆ ಪಡೆದು ಉಳುಮೆ ಮಾಡುತ್ತಿರುವ ರೈತರಿಗೆ ನೀಡುವ ಕೆಲಸ ಮಾಡಲಾಗುವುದು ಎಂದು ಭರವಸೆ ಕೊಟ್ಟರು.

    29 ವರ್ಷಗಳ ಬಳಿಕ ಪಿಯು ಪರೀಕ್ಷೆ ಬರೆದ ಶಾಸಕರ ಪತ್ನಿ ಫಸ್ಟ್​ ಕ್ಲಾಸ್​ನಲ್ಲಿ ಪಾಸ್

    ಪತಿಗೆ ‘ಬ್ಯಾಡ್​ ನ್ಯೂಸ್​’ ಕೊಟ್ಟ ಪತ್ನಿ ; ಒಂದೂವರೆ ತಿಂಗಳ ನವವಿವಾಹಿತೆ 4 ತಿಂಗಳ ಗರ್ಭಿಣಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts