More

    ಮೊದಲ ಹಂತದ ಮತದಾನ ಮುಕ್ತಾಯ ; ಗ್ರಾಪಂ ಚುನಾವಣೆಯಲ್ಲಿ ಕಾಣದ ಕರೊನಾತಂಕ

    ತುಮಕೂರು : ಜಿಲ್ಲೆಯ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜನರು ಅತ್ಯುತ್ಸಾಹದಿಂದ ಪಾಲ್ಗೊಂಡರು. ಕರೊನಾ ಆತಂಕದ ನಡುವೆಯೂ ಬೆಳಗಿನಿಂದಲೇ ಮತದಾರರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಜವಾಬ್ದಾರಿ ಮೆರೆದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಯನ್ನು ರಾಜಕೀಯ ಪಕ್ಷಗಳ ಕಾರ್ಯಕರ್ತರು, ಯುವ ಮತದಾರರು ಹಬ್ಬದಂತೆ ಆಚರಿಸಿದ್ದು ವಿಶೇಷವಾಗಿತ್ತು.

    ಕುಣಿಗಲ್ ತಾಲೂಕಿನ ಜಿನ್ನಾಗರ ಗ್ರಾಪಂ ಹೊಸಕೆರೆ ಮತಗಟ್ಟೆ ಕೇಂದ್ರದ ಬಳಿ ಅಭ್ಯರ್ಥಿಗಳ ನಡುವೆ ಹೊಡೆದಾಟದ ಪ್ರಕರಣ ಹೊರತುಪಡಿಸಿ ಜಿಲ್ಲೆಯಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು. ಕರೊನಾ ಮಾರ್ಗಸೂಚಿಗಳನ್ನು ಮತದಾರರು ಅನುಸರಿಸಿದರಾದರೂ ಸಣ್ಣಮಕ್ಕಳ ಜತೆ ಮತಗಟ್ಟೆಗಳಲ್ಲಿ ಕರೊನಾ ಭೀತಿಯಿಲ್ಲದೆ ಕಾಣಿಸಿಕೊಂಡರು. ಕುಡುಕರು ಮದ್ಯದ ಅಮಲಿನಲ್ಲಿ ತೇಲುತ್ತಿದ್ದರೆ, ಕೊನೇಘಳಿಗೆಯಲ್ಲೂ ಮತಖರೀದಿ ಬೇಟೆ ಜೋರಾಗಿತ್ತು. ಗುಬ್ಬಿ ತಾಲೂಕು ದೊಡ್ಡಗುಣಿ ಮತಗಟ್ಟೆಯಲ್ಲಿ ಬ್ಯಾಲೆಟ್ ಪೇಪರ್ ಅನ್ನು ಮತದಾರನೊಬ್ಬ ಹರಿದುಹಾಕಿದ ಘಟನೆ ನಡೆದಿದೆ ಎನ್ನಲಾಗಿದೆ.

    ತುಮಕೂರು, ಕುಣಿಗಲ್, ಗುಬ್ಬಿ, ಕೊರಟಗೆರೆ ಹಾಗೂ ಪಾವಗಡ ತಾಲೂಕುಗಳ ಒಟ್ಟು 168 ಗ್ರಾಪಂಗಳ 2594 ಸ್ಥಾನಗಳಿಗೆ ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಶಾಂತಿಯುತ ಮತದಾನ ನಡೆಯಿತು. 156 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಅಂತಿಮ ಕಣದಲ್ಲಿದ್ದ 7142 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ.

    ಚುನಾವಣೆಯಲ್ಲಿ ಇವಿಎಂ ಮತಯಂತ್ರಗಳನ್ನು ಬಳಸದಿದ್ದ ಕಾರಣದಿಂದ ದೋಷಗಳು ಎಲ್ಲಿಯೂ ಕಾಣಿಸಲಿಲ್ಲ. ಮತಪಟ್ಟಿಯಲ್ಲಿ ಗಂಭೀರ ಸಮಸ್ಯೆಗಳು ಎಲ್ಲಿಯೂ ವರದಿಯಾಗದೆ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಯಿತು. ಗ್ರಾಮೀಣ ಭಾಗದಲ್ಲಿ ಜನರು ಬೆಳಗ್ಗೆ ಕೊರೆಯುವ ಚಳಿಯಲ್ಲೇ ಸರದಿಯಲ್ಲಿ ನಿಂತು ಮತದಾನ ಮಾಡಲು ಉತ್ಸಾಹ ತೋರಿದರು. ಮತಗಟ್ಟೆಗಳಲ್ಲಿ ಉದ್ದುದ್ದ ಸಾಲುಗಳು ಕಂಡಬಂದವು. ಬೆಳಗ್ಗೆ 11 ಆಗುತ್ತಿದ್ದಂತೆ ಚುರುಕೆನ್ನುವ ಬಿಸಿಲನ್ನೂ ಲೆಕ್ಕಿಸದೆ ಬೆಳಗ್ಗೆಯಿಂದಲೇ ಜನರು ಮತಗಟ್ಟೆ ಬಳಿ ಕಾಣಿಸಿದರು. ಬಹುತೇಕ ಗ್ರಾಪಂಗಳಲ್ಲಿ ಮಧ್ಯಾಹ್ನದ 1ರ ಹೊತ್ತಿಗೆ ಶೇ.48-50 ಮತದಾನ ನಡೆದಿತ್ತು. ಮಧ್ಯಾಹ್ನದ ನಂತರವೂ ಮತದಾನ ಬಿರುಸುಗೊಂಡಿತು. ಕರೊನಾ ಸೋಂಕಿತರಿಗೆ 1 ಗಂಟೆ ಅವಕಾಶ ಕಲ್ಪಿಸಲಾಗಿತ್ತು. ಚುನಾವಣೆಯಲ್ಲಿ ಇದೇ ಮೊದಲ ಬಾರಿ ಮತಚಲಾಯಿಸಿದ ಯುವ ಮತದಾರರಲ್ಲಿ ಸಂಭ್ರಮ ಕಂಡುಬಂತು.

    57 ಸೋಂಕಿತರ ಹಕ್ಕು ಚಲಾವಣೆ : ಮತದಾನದ ಕೊನೆಯ ಅವಧಿಯ ಸಂಜೆ 4ರಿಂದ 5 ಗಂಟೆಯವರೆಗೂ ಕರೊನಾ ಸೋಂಕಿತರು, ಶಂಕಿತರ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಅದರಂತೆ ತುಮಕೂರು ತಾಲೂಕಿನ 30, ಕುಣಿಗಲ್-4, ಗುಬ್ಬಿ-9, ಕೊರಟಗೆರೆ-8, ಪಾವಗಡ-6 ಸೇರಿ ಒಟ್ಟು 57 ಮಂದಿ ಸೋಂಕಿತರು ತಮ್ಮ ಹಕ್ಕು ಚಲಾಯಿಸಲು ಇಚ್ಛೆ ವ್ಯಕ್ತಪಡಿಸಿದ್ದರು. ಆರೋಗ್ಯ ಇಲಾಖೆಯು ಈ ಮತದಾರರಿಗೆ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಿತ್ತು. ಪಿಪಿಇ ಕಿಟ್ ಧರಿಸಿ ಸೋಂಕಿತರು ಮತದಾನ ಮಾಡಿದರು.

    ಗ್ರಾಪಂ ಚುನಾವಣೆ ಬೇರುಮಟ್ಟದಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ವ್ಯವಸ್ಥೆ. ಸಂವಿಧಾನ ಹಕ್ಕು ಮತ್ತು ಕರ್ತವ್ಯ ಕೊಟ್ಟಿದ್ದು ಪ್ರತಿಯೊಬ್ಬರೂ ಸಂವಿಧಾನದ ಆಶಯಗಳಿಗೆ ತಕ್ಕಂತೆ ಬದುಕಬೇಕು. ಮತದಾನ ಪ್ರತಿಯೊಬ್ಬರ ಕರ್ತವ್ಯ. ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಕೊಟ್ಟಿರುವ ಸರ್ವಾಧಿಕಾರ ಈ ಮತದಾನ. ಎಲ್ಲರೂ ಈ ಮತದಾನದಲ್ಲಿ ಪಾಲ್ಗೊಂಡು ಮಹತ್ವ ಹಾಗೂ ಪಾವಿತ್ರೃ ಹೆಚ್ಚಿಸಬೇಕು.
    ಸಿದ್ದಲಿಂಗ ಶ್ರೀಗಳು, ಸಿದ್ಧಗಂಗಾ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts