More

    ಶೇ 10ರಷ್ಟು ಹೆಚ್ಚುವರಿ ಮತ ಗಳಿಕೆಗೆ ಬಿಜೆಪಿಯಿಂದ ‘ಗ್ರಾಮ ಚಲೋ’

    ಗಜೇಂದ್ರಗಡ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆ.9ರಿಂದ ಮೂರು ದಿನ ರಾಜ್ಯಾದ್ಯಂತ ಮೊದಲ ಹಂತದ ‘ಗ್ರಾಮ ಚಲೋ’ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 40 ಸಾವಿರ ಕಾರ್ಯಕರ್ತರನ್ನು ಇದಕ್ಕಾಗಿ ನಿಯೋಜಿಸಲಾಗಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ತಿಳಿಸಿದರು.
    ಪಟ್ಟಣದಲ್ಲಿ ಶನಿವಾರ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, 2019ರ ಲೋಕಸಭೆ ಚುನಾವಣೆಯಲ್ಲಿ ಬೂತ್‌ಗಳಲ್ಲಿ ಗಳಿಸಿದ್ದ ಮತಗಳಿಗಿಂತ ಈ ಬಾರಿ ಶೇ.10ರಷ್ಟು ಹೆಚ್ಚುವರಿ ಮತ ಗಳಿಸಿಕೊಳ್ಳುವ ಗುರಿ ಹೊಂದಲಾಗಿದೆ. ಅಭಿಯಾನದಲ್ಲಿ ತೊಡಗಿಕೊಳ್ಳುವ ಪ್ರತಿ ಕಾರ್ಯಕರ್ತರಿಗೂ ಸೂಕ್ತ ತರಬೇತಿ ನೀಡಲಾಗಿದೆ ಎಂದರು.
    ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಕೇಂದ್ರದ ಜನಪರ ಕಾರ್ಯಕ್ರಮಗಳನ್ನು ತಿಳಿಸುತ್ತೇವೆ. ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆಯೂ ಅರಿವು ಮೂಡಿಸುತ್ತೇವೆ. ಚುನಾವಣೆ ಹಿನ್ನೆಲೆಯಲ್ಲಿ ಇದೊಂದು ಬೃಹತ್ ಸಂಘಟನಾತ್ಮಕ ಕಾರ್ಯತಂತ್ರವಾಗಿದೆ. ತಳಮಟ್ಟದಲ್ಲಿ ಪ್ರತಿಯೊಬ್ಬರನ್ನೂ ಈ ಅಭಿಯಾನದ ಮೂಲಕ ತಲುಪುತ್ತೇವೆ ಎಂದು ವಿವರಿಸಿದರು.
    ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಮಾತನಾಡಿ, ರಾಜ್ಯದ 28 ಸಾವಿರ ಕಂದಾಯ ಗ್ರಾಮಗಳು ಹಾಗೂ 19 ಸಾವಿರ ಬೂತ್‌ಗಳನ್ನು ಅಭಿಯಾನದ ಮೂಲಕ ತಲುಪುತ್ತೇವೆ. 40 ಸಾವಿರ ಕಾರ್ಯಕರ್ತರು ಆಯಾ ಗ್ರಾಮಗಳಿಗೆ ಏಪ್ರಿಲ್ ವರೆಗೆ 6 ಬಾರಿ ಭೇಟಿ ನೀಡಿ ಚುನಾವಣೆಯ ಸಿದ್ಧತಾ ಸಭೆ ಮಾಡಬೇಕಾಗುತ್ತದೆ. ತಾಲೂಕು ಮಟ್ಟದಲ್ಲಿ 350 ಕಾರ್ಯಾಗಾರ ನಡೆಯಲಿದ್ದು, ನಿಯುಕ್ತಿಗೊಂಡಿರುವ ಕಾರ್ಯಕರ್ತರು ಕೇಂದ್ರ ಸರ್ಕಾರದ ಪ್ರಮುಖ ಯೋಜನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆಶಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
    ಸರ್ಕಾರದ ಸಾಧನೆಗಳ ಪ್ರಚಾರ, ಮೋದಿ ಗ್ಯಾರಂಟಿಯ ಫಲಾನುಭವಿಗಳನ್ನು ತಲುಪುವ ಅಭಿಯಾನ, ಬೂತ್ ಸಶಕ್ತೀಕರಣದ ಜತೆಗೆ ಕಾರ್ಯಕರ್ತರಿಗೆ ಬಲ ತುಂಬುವ ಕಾರ್ಯವಾಗಲಿದೆ. ಕಾಂಗ್ರೆಸ್ ದುರಾಡಳಿತದ ವಿರುದ್ಧವೂ ಅರಿವು ಮೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಕನಕಪ್ಪ ಅರಳಿಗಿಡದ, ಬಿ.ಎಂ. ಸಜ್ಜನರ, ಭಾಸ್ಕರ ರಾಯಬಾಗಿ, ಉಮೇಶ ಮಲ್ಲಾಪುರ, ಮುತ್ತು ಕಡಗದ, ದಾನು ರಾಠೋಡ, ಬಾಳು ಗೌಡ್ರ, ಸುಗುರೇಶ ಚೋಳಿನ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts