More

    ಸ್ವಚ್ಛ ಭಾರತ ಕಾಮಗಾರಿ ಪೂರ್ಣಗೊಳಿಸಿ

    ಅಫಜಲಪುರ: ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಆಸಕ್ತಿವಹಿಸಿ ಕಸ ವಿಲೇವಾರಿ ಘಟಕ, ವೈಯುಕ್ತಿಕ ಶೌಚಗೃಹ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಬಿಲ್​ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭನ್ವರ್‌ಸಿಂಗ್ ಮೀನಾ ತಾಕೀತು ಮಾಡಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪೂರ್ಣಗೊಂಡ ಕಸ ವಿಲೇವಾರಿ ಘಟಕ ಜ.೨೬ರಂದು ಉದ್ಘಾಟಿಸಬೇಕು. ಇನ್ನುಳಿದ ಗ್ರಾಪಂಗಳಲ್ಲಿ ಅಪೂರ್ಣವಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

    ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ವೈಯಕ್ತಿಕ ಶೌಚಗೃಹ ನಿರ್ಮಾಣ ಮಾಡುವಾಗ ಬೋಗಸ್ ಬಿಲ್ ಆಗದಿರಲಿ. ಯಾರಿಗೆ ಆಸಕ್ತಿಯಿದೆ ಅಂತಹ ಫಲಾನುಭವಿಗಳನ್ನು ಗುರುತಿಸಬೇಕು. ಈಗಾಗಲೇ ಕಂಪ್ಯೂಟರ್‌ನಲ್ಲಿ ನಕಲಾಗಿ ದಾಖಲಿಸಿರುವ ಫಲಾನುಭವಿಗಳ ಹೆಸರನ್ನು ರದ್ದುಪಡಿಸಿ, ಎಲ್ಲ ಗ್ರಾಪಂಗಳಲ್ಲಿ ತಿಂಗಳಿಗೆ ೫೦ರಂತೆ ಹೊಸದಾಗಿ ಶೌಚಗೃಹ ನಿರ್ಮಿಸಬೇಕು ಎಂದು ಸೂಚನೆ ನೀಡಿದರು.

    ಬರಗಾಲ ಇರುವುದರಿಂದ ಕೃಷಿ ಕೆಲಸಗಳು ಮುಗಿಯುವ ಹಂತದಲ್ಲಿವೆ. ಕೃಷಿ ಹಾಗೂ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ನರೇಗಾ ಯೋಜನೆಯಡಿ ಬರ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಸರ್ಕಾರ ನಿಗದಿ ಪಡಿಸಿದ ಆಹಾರ ಪದ್ಧತಿಯ ಪ್ರಕಾರ ಉಪಾಹಾರ ನೀಡಬೇಕು ಎಂದು ಹೇಳಿದರು.

    ೧೫ನೇ ಹಣಕಾಸಿನಲ್ಲಿನ ಅನುದಾನ ಕುಡಿವ ನೀರಿಗೆ ಬಳಸಿಕೊಳ್ಳಿ, ನರೇಗಾದಡಿ ಮಾಶಾಳ, ಭೈರಾಮಡಗಿ, ದೇವಲ ಗಾಣಗಾಪುರದಲ್ಲಿನ ಕಲ್ಯಾಣಿ ಹಾಗೂ ಬಾವಿಗಳನ್ನು ಅಭಿವೃದ್ಧಿ ಪಡಿಸಿ. ತಾಲೂಕಿನಲ್ಲಿ ಕೇವಲ ೭ ಗ್ರಾಪಂಗಳಲ್ಲಿ ಗ್ರಂಥಾಲಯ ಕಟ್ಟಡಗಳಿದ್ದು, ಇನ್ನುಳಿದ ಕಡೆ ನಿರ್ಮಾಣ ಮಾಡಬೇಕು. ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದು ಸೂಚನೆ ನೀಡಿದರು.

    ತಾಪಂ ಇಒ ಬಾಬುರಾವ ಜ್ಯೋತಿ, ನರೇಗಾ ಸಹಾಯಕ ನಿರ್ದೇಶಕ ರಮೇಶ ಪಾಟೀಲ್ಲ, ಪಿಡಿಒಗಳಾದ ಶಂಕರ ದ್ಯಾಮಣ್ಣ, ಮಹಾಂತೇಶ ಯಾಡಗಿ, ಭೌರಮ್ಮ ಕುಂಬಾರ, ಚಿದಾನಂದ ಆಲೆಗಾಂವ್, ಕರೆಪ್ಪ ಪೂಜಾರಿ, ಮಹಾಂತೇಶ ಸಾಲಿಮಠ, ಕರೆಪ್ಪ ಪೂಜಾರಿ ಇತರರಿದ್ದರು.

    ಅಧಿಕಾರಿಗಳಿಗೆ ಶಿಸ್ತಿನ ಪಾಠ: ಸಭೆಗೆ ಸಮಗ್ರ ಮಾಹಿತಿಯ ಜತೆಗೆ ಶಿಸ್ತಿನಿಂದ ಬರಬೇಕು. ಇದು ಅಧಿಕಾರಿಗಳ ಮೀಟಿಂಗ್ ಆಗಿದ್ದು, ನಿಮ್ಮಷ್ಟದಂತೆ ವರ್ತಿಸಿದರೆ ಸರಿಯಲ್ಲ. ನೀಟಾಗಿ ಶರ್ಟ್ ಧರಿಸಬೇಕು. ಅಂಗಿಗಳ ಬಟನ್ ಹಾಕಿಕೊಳ್ಳಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಜಿಪಂ ಸಿಇಒ ಮೀನಾ ಶಿಸ್ತಿನ ಪಾಠ ಹೇಳಿದರು.

    ಪಿಡಿಒಗಳು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಅಧಿಕಾರ ನೀಡಬೇಡಿ. ಅವರ ಮೇಲೆ ಶಿಸ್ತು ಕ್ರಮ ಜರುಗಿಸುವ ಅಧಿಕಾರ ನಿಮಗಿದೆ. ನೀವು ಅವರಿಗೆ ಅಧಿಕಾರ ನೀಡಿದರೆ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ.
    | ಭನ್ವರ್‌ಸಿಂಗ್ ಮೀನಾ, ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts