More

    ಗೌರಿ, ಗಣೇಶ ಹಬ್ಬಕ್ಕೆ ಸಿದ್ಧತೆ ; ಅಗತ್ಯವಸ್ತುಗಳ ಬೆಲೆ ಏರಿಕೆ

    ತುಮಕೂರು: ಕರೊನಾ ಆತಂಕ, ಅಗತ್ಯವಸ್ತುಗಳ ಬೆಲೆ ಏರಿಕೆ ನಡುವೆಯೂ ಗೌರಿ, ಗಣೇಶ ಹಬ್ಬದ ಸಂಭ್ರಮಕ್ಕೆ ಜನರು ಸಜ್ಜಾಗಿದ್ದಾರೆ. ಹಬ್ಬ ಆಚರಣೆಗೆ ಮುನ್ನಾ ದಿನವಾದ ಗುರುವಾರ ಮಾರುಕಟ್ಟೆಯಲ್ಲಿ ಜನಸಂದಣಿ. ಎತ್ತಣಿಂದೆತ್ತ ನೋಡಿದರೂ ಹಣ್ಣು, ಹೂ, ಬಾಳೆ ಕಂದು, ಗೌರಿ, ಗಣೇಶಮೂರ್ತಿ ಖರೀದಿಯಲ್ಲಿ ಚೌಕಾಸಿಯ ದೃಶ್ಯ ಸಾಮಾನ್ಯವಾಗಿತ್ತು.

    ನಗರದ ಪ್ರಮುಖ ವ್ಯಾಪಾರ ತಾಣಗಳಾದ ಅಂತರಸನಹಳ್ಳಿ ಮಾರುಕಟ್ಟೆ, ಬಿ.ಎಚ್.ರಸ್ತೆ, ಅಶೋಕ ರಸ್ತೆ, ಜೆ.ಸಿ.ರಸ್ತೆ, ಎಸ್‌ಎಸ್ ಪುರಂ, ಬಟವಾಡಿ, ಮಂಡಿಪೇಟೆ ಸೇರಿ ವಿವಿಧ ಭಾಗಗಳಲ್ಲಿ ವ್ಯಾಪಾರ ವಹಿವಾಟು ಬಿರುಸಿನಿಂದ ಸಾಗಿತ್ತು. ಬೆಲೆ ಏರಿಕೆಯ ನಡುವೆಯೂ ಕೊಳ್ಳುವ ಗ್ರಾಹಕರಿಗೇನು ಕೊರತೆ ಇರಲಿಲ್ಲ.

    ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಬಗೆ ಬಗೆಯ ಗೌರಿ, ಗಣೇಶ ಮೂರ್ತಿಗಳು ಮಕ್ಕಳನ್ನು ಆಕರ್ಷಿಸುತ್ತಿದ್ದು ತಮ್ಮ ಮನೆಗಳಿಗೆ ಗೌರಿ, ಗಣೇಶ ಮೂರ್ತಿಗಳನ್ನು ಕೊಂಡೊಯ್ಯುತ್ತಿದ್ದ ಕಂಡುಬಂತು. ವಿಶೇಷವಾಗಿ ಸಿದ್ಧಪಡಿಸಿದ ಗಣೇಶಮೂರ್ತಿಗಳ ಕನಿಷ್ಠ ಬೆಲೆ 50ರೂ. ನಿಂದ ಆರಂಭವಾಗಿ ಗರಿಷ್ಠ 50 ಸಾವಿರ ಬೆಲೆಯ ಗಣೇಶನ ಬೃಹತ್ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

    ಆಧುನಿಕತೆ, ಜನರ ಬೇಡಿಕೆಗೆ ತಕ್ಕಂತೆ ವಿಶೇಷ ರೀತಿಯ ಗಣೇಶ ವಿಗ್ರಹಗಳನ್ನು ತಯಾರಿಸಲಾಗಿದ್ದು, ಇದಕ್ಕೆ ಹೆಚ್ಚಿನ ಬೇಡಿಕೆ ಇಲ್ಲ ಎನ್ನುತ್ತಾರೆ ವ್ಯಾಪಾರಿ ಶಂಕರ್. ನಗರದ ಬೀದಿಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಜಿಲ್ಲಾಡಳಿತದ ಅನುಮತಿ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಮನೆಗಳಿಗೆ ಹಬ್ಬಿ ಸೀಮಿತವಾಗಿದೆ. ಬೀದಿಗಳಲ್ಲಿ ಗಣೇಶನನ್ನು ಕೂರಿಸುವ ಸಾಧ್ಯತೆ ತೀರ ಕಡಿಮೆಯಿದೆ.

    ಗೌರಿ ಬಾಗಿನ: ಗೌರಿ ಹಬ್ಬಕ್ಕೆ ಬಾಗಿನ ಕೊಡುವುದು ಸರ್ವೇ ಸಾಮಾನ್ಯ. ಹೆಣ್ಣುಮಕ್ಕಳು ಬಾಗಿನ ಸಾಮಗ್ರಿಗಳನ್ನು ಕೊಂಡುಕೊಳ್ಳುವಲ್ಲಿ ನಿರತರಾಗಿದ್ದರು. ಉತ್ತಮ ಮಳೆ ಬಂದು ಬರದ ಬವಣೆ ನೀಗಿಸೋ ಎಂದು ವಿಘ್ನ ನಿವಾರಕನಿಗೆ ಜನರು ಮೊರೆ ಇಡಲು ಸಿದ್ಧರಾಗಿದ್ದಾರೆ.
    ನಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದು, ಜನರು ಸಂಭ್ರಮದಿಂದ ಗಣೇಶ ಮೂರ್ತಿಗಳನ್ನು ಕೊಂಡುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts