More

    ಜೇನು ಸಾಕಣೆಗೆ ಪ್ರೋತ್ಸಾಹ

    ಅವಿನ್ ಶೆಟ್ಟಿ ಉಡುಪಿ

    ಸರ್ಕಾರ ಜೇನು ಸಾಕಣೆಗೆ ಉತ್ತೇಜನ ಸಲುವಾಗಿ ರೈತರಿಗೆ ಪೆಟ್ಟಿಗೆ ಹಾಗೂ ಜೇನು ಕುಟುಂಬ ಖರೀದಿಗೆ ತೋಟಗಾರಿಕೆ ಇಲಾಖೆಯಿಂದ ಶೇ.೭೫ ಸಬ್ಸಿಡಿ ನೀಡಲಾಗುತ್ತಿದೆ. ರೈತರಲ್ಲದ ಆರ್‌ಟಿಸಿ ಇಲ್ಲದವರಿಗೂ ಶೇ.೫೦ ಸಬ್ಸಿಡಿ ನೀಡುತ್ತಿದೆ. ಕೌಶಲ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಜೇನು ಕೃಷಿ ಮಾಡುವ ಸಂಖ್ಯೆ ವಿರಳವಾಗಿದೆ.
    ಅತಿ ಕಡಿಮೆ ಬಂಡವಾಳದೊಂದಿಗೆ ಕೃಷಿಯೊಂದಿಗೆ ಉಪಕಸುಬಾಗಿ ಮಾಡುವ ಜೇನಿಗೆ ಬಹುಬೇಡಿಕೆ. ಮನೆ ಬಾಗಿಲಗೆ ಆಗಮಿಸಿ ಕೊಂಡುಕೊಳ್ಳುವ ಮಟ್ಟಿಗೆ ಶುದ್ಧ ಜೇನು ತುಪ್ಪಕ್ಕೆ ಬೇಡಿಕೆ ಇದೆ. ಆದರೆ ನಿರ್ವಹಣೆ, ಕೌಶಲ, ಇಳುವರಿಗೆ ಗಮನ ಕೊಡದ ಪರಿಣಾಮ ಜೇನು ಕೃಷಿ ಜಿಲ್ಲೆಯಲ್ಲಿ ಪ್ರಗತಿಯಾಗಿಲ್ಲ. ಜಿಲ್ಲೆಯಲ್ಲಿ ಕಾರ್ಕಳ, ಕುಂದಾಪುರ ಭಾಗದಲ್ಲಿ ತೋಟಗಾರಿಕೆ ಇಲಾಖೆ ಅಂದಾಜು ಪ್ರಕಾರ ೨೦೦೦-೨೫೦೦ ಕೃಷಿಕರು ಜೇನು ಸಾಕಾಣಿಗೆ ಮಾಡುತಿದ್ದು ೨೫ ಪೆಟ್ಟಿಗೆಯಲ್ಲಿ ಜೇನು ಕೃಷಿ ಮಾಡಲಾಗುತ್ತಿದೆ.

    ಶೇ.೭೫ ಸಬ್ಸಿಡಿ/ಎನ್‌ಎಚ್‌ಎಂನಿಂದ ೫೦ ಪೆಟ್ಟಿಗೆ : ಜೇನು ಕೃಷಿ ಮಾಡಲು ಎಲ್ಲಾ ರೀತಿಯ ಸಹಕಾರ, ಮಾರ್ಗದರ್ಶನ ತೋಟಗಾರಿಕೆ ಇಲಾಖೆ ಸಿದ್ಧವಿದೆ ಎನ್ನುತ್ತಾರೆ ಅಧಿಕಾರಿಗಳು. ಜೇನು ಕುಟುಂಬಕ್ಕೆ ೨೦೦೦, ಪೆಟ್ಟಿಗೆಗೆ ೨೦೦೦ ರೂ, ಸ್ಟ್ಯಾಂಡ್‌ಗೆ ೫೦೦ ರೂಪಾಯಿಯಂತೆ ೪೫೦೦ ರೂ. ವೆಚ್ಚವಾಗುತ್ತದೆ. ಇದರಲ್ಲಿ ಶೇ.೭೫ರಷ್ಟು ವೆಚ್ಚವನ್ನು ಇಲಾಖೆ ನೀಡುತ್ತದೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಶೇ. ೯೫ ಸಬ್ಸಿಡಿ ಲಭ್ಯವಿದೆ. ಆರ್‌ಟಿಸಿ ಇದ್ದವರು ೪ ಪೆಟ್ಟಿಗೆ, ಆರ್‌ಟಿಸಿ ಇಲ್ಲದವರಿಗೆ ೨ ಪೆಟ್ಟಿಗೆಗೆ ಸಬ್ಸಿಡಿ ಸಿಗುತ್ತದೆ. ರಾಷ್ಟ್ರೀಯ ತೋಟಗಾರಿಕೆ ಮಿಶನ್ ಅಡಿಯಲ್ಲಿ (ಎನ್‌ಎಚ್‌ಎಂ) ೧ ಜೇನು ಕುಟುಂಬ, ಒಂದು ಪೆಟ್ಟಿಗೆಯಂತೆ ೫೦ ಪೆಟ್ಟಿಗೆಗೆ ಪಡೆಯಲು ಅವಕಾಶ ಇದ್ದು, ೧೬೦೦ ರೂ. ಸಬ್ಸಿಡಿ ದೊರೆಯಲಿದೆ. ಆದರೆ ಇದರಲ್ಲಿ ಸ್ಟಾೃಂಡ್‌ಗೆ ಸಬ್ಸಿಡಿ ವ್ಯಾಪ್ತಿಗೆ ಬರುವುದಿಲ್ಲ.

    ಕಾರ್ಕಳದಲ್ಲಿದೆ ಮಧುವನ ಕೇಂದ್ರ : ಕೃಷಿಕರು, ಸಾರ್ವಜನಿಕರು, ಶಾಲೆ, ಕಾಲೇಜು ವಿದ್ಯಾರ್ಥಿಗಳು ಜೇನು ಸಾಕಣೆ, ಜೇನು ಕೃಷಿ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸಕ್ತಿ ಇದ್ದಲ್ಲಿ ಕಾರ್ಕಳ ಕುಕ್ಕುಂದೂರು ತೋಟಗಾರಿಕೆ ಕ್ಷೇತ್ರ ಸಮೀಪದ ಮಧುವನ ಕೇಂದ್ರಕ್ಕೆ ಭೇಟಿ ಕೊಡಬಹುದು. ವಿಶಾಲ ಒಂದು ಎಕ್ರೆ ಜಾಗದಲ್ಲಿ ಮಧುವನ ಕೇಂದ್ರವಿದೆ. ಇಲ್ಲಿ ಜೇನು ಕುಟುಂಬ, ಪೆಟ್ಟಿಗೆಗಳು, ಜೇನುಗಳಿಗೆ ಪೂರಕವಾದ ಸಸ್ಯ, ಹೂ, ಗಿಡ, ಮರಗಳಿವೆ. ಜೇನು ತರಬೇತಿ ಕೇಂದ್ರದ ವತಿಯಿಂದ ತರಬೇತಿ ನೀಡಲಾಗುತ್ತದೆ. ಮಾಹಿತಿಗಾಗಿ ಕಾರ್ಕಳದ ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ ಶ್ರೀನಿವಾಸ್ ಬಿ.ವಿ ೯೪೪೯೪೪೦೮೧೨ ಅವರನ್ನು ಸಂಪರ್ಕಿಸಬಹುದು. ಅಲ್ಲದೆ ಕೊಡಗು ಬಾಗಮಂಡಲದಲ್ಲಿ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್‌ನಲ್ಲಿ ಮೂರೂವರೆ ತಿಂಗಳು ಉಚಿತ ತರಬೇತಿ ಇರುತ್ತದೆ. ಈ ಸಮಯದಲ್ಲಿ ರೈತರಿಗೆ ಶಿಷ್ಯವೇತನ, ಊಟ, ವಸತಿ ಒದಗಿಸಲಾಗುತ್ತದೆ.

    ಸಂಸ್ಕರಣೆ ಘಟಕ ನಿರ್ಮಾಣಕ್ಕೆ ಪ್ರಸ್ತಾವನೆ : ಪೆರ್ಡೂರಿನ ಅಲಂಗಾರು ಬಳಿ ೪.೧೭ ಎಕ್ರೆ ಜಾಗವನ್ನು ಮಧುವನ ಕೇಂದ್ರ ನಿರ್ಮಿಸಲು ಮೀಸಲಿಡಲಾಗಿದೆ. ಇಲ್ಲಿ ವಿಶೇಷವಾಗಿ ೫೦ ಲಕ್ಷ ರೂ. ವೆಚ್ಚದಲ್ಲಿ ಜೇನು ಸಂಸ್ಕರಣೆ ಘಟಕವನ್ನು ನಿರ್ಮಿಸುವ ಬಗ್ಗೆ ಇಲಾಖೆ ಪ್ರಸ್ತಾವನೆ ತಯಾರಿಸಿದೆ. ಸಂಸ್ಕರಣ ಘಟಕ ನಿರ್ಮಾಣವಾದಲ್ಲಿ ಜೇನಿನ ಗುಣಮಟ್ಟ, ಪರಿಶುದ್ಧತೆ ಮಾಪನ ಸಾಧ್ಯವಿದೆ. ಇದರಿಂದ ಗುಣಮಟ್ಟ ಆಧಾರದಲ್ಲಿ ಜೇನು ಕೃಷಿಕರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ದರ ನಿಗದಿ ಮಾಡಬಹುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಿಧೀಶ್ ಕೆ.ಜೆ.

    ಜೇನು ಸಾಕಣೆ ಮಾಡುವಾಗ ಪೆಟ್ಟಿಗೆಗಳು, ಕುಟುಂಬವನ್ನು ಮಳೆ, ಬಿಸಿಲಿನಿಂದ ರಕ್ಷಣೆ ಮಾಡಬೇಕು. ಇರುವೆ ಕಾಟ ಇರದಂತೆ ನೋಡಿಕೊಳ್ಳಬೇಕು. ವಾರಕ್ಕೆ ಅರ್ಧ ಗಂಟೆ ಸಮಯ ಶುಚಿತ್ವಕ್ಕೆ ಮೀಸಲಿಡಬೇಕು. ಒಂದು ಪೆಟ್ಟಿಗೆ ಜೇನು ಸಂಸಾರದಲ್ಲಿ ೨೦ರಿಂದ ೪೦ ಸಾವಿರ ಜೇನು ನೊಣಗಳಿರುತ್ತವೆ. ಒಳ್ಳೆಯ ರೀತಿಯಲ್ಲಿ ಪರಾಗ ಸ್ಪರ್ಶ ನಡೆಸಿದರೆ ಜೇನು ಅಭಿವೃದ್ಧಿಯಾಗಿ ಒಂದು ಪೆಟ್ಟಿಗೆಯಲ್ಲಿ ೧೦ ಕೆ.ಜಿ. ಜೇನು ಸಂಗ್ರಹವಾಗುತ್ತದೆ. ಜತೆಗೆ ೧ ಕೆ.ಜಿ. ಜೇನಿನ ಮೇಣ ಸಿಗುತ್ತದೆ. ಕೆ.ಜಿ. ಜೇನಿಗೆ ೪೫೦ ರೂ., ಮೇಣಕ್ಕೆ ೬೫೦ ರಿಂದ ೭೦೦ ರೂ., ದರವಿದೆ.
    |ಲಕ್ಷ್ಮಣ ನಾಯ್ಕ ನಿವೃತ್ತ ಪ್ರದರ್ಶಕ, ಜೇನು ಕೃಷಿ
    (ಮೊಬೈಲ್ ಸಂಖ್ಯೆ ೯೫೯೧೨೨೮೦೮೧)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts