More

    ಸರ್ಕಾರಿ ಶಾಲೆ ಮೇಷ್ಟ್ರಿಗೆ ಸಚಿವರ ಹೊಗಳಿಕೆ

    ಕುಂದಾಪುರ: ಈ ಸರ್ಕಾರಿ ಶಾಲೆಯ ಪ್ರಭಾರ ಹೆಡ್‌ಮೇಸ್ಟ್ರು ಎಲ್ಲರಂತಲ್ಲ. 23 ವರ್ಷಗಳಿಂದ ಕರ್ತವ್ಯದ ದಿನಗಳಲ್ಲಿ ಶಾಲೆಗೆ ರಜೆಯೇ ಮಾಡಿಲ್ಲ. ಕರೊನಾ ಲಾಕ್‌ಡೌನ್ ದಿನಗಳಲ್ಲಿಯೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗಳಿಗೇ ಹೋಗಿ ಪಾಠ ಮಾಡಿದ್ದಾರೆ! ಈ ಸಂಗತಿ ಗೊತ್ತಾದ್ದೇ ತಡ. ಉಡುಪಿಗೆ ಬಂದಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಕ್ಷಣ ಆ ಮೇಷ್ಟ್ರ ಫೋನ್ ನಂಬರ್ ಸಂಗ್ರಹಿಸಿ, ಕರೆ ಮಾಡಿ ಬೆನ್ನುತಟ್ಟಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನುಭವವನ್ನು ಹಂಚಿಕೊಂಡಿದ್ದಾರೆ.
    ಸಚಿವರ ಅಭಿನಂದನೆಗೆ ಪಾತ್ರರಾದ ಶಿಕ್ಷಕ ಹೆಸ್ಕುತ್ತೂರು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಾಬು ಶೆಟ್ಟಿ. 11 ವರ್ಷಗಳಿಂದ ತಾಲೂಕಿನ ಹೆಸ್ಕುತ್ತೂರು ಶಾಲೆಯಲ್ಲಿ ಪ್ರಭಾರ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಿರಂತರ ಶೇ.100 ಫಲಿತಾಂಶ ಪಡೆಯುತ್ತಿದೆ. ಶಿಕ್ಷಕರಾಗಿ ಇವರು 23 ವರ್ಷಗಳ ಅನುಭವಿ. ಎಲ್ಲ ಪ್ರೌಢಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲಿಸಿರುವುದು ಇವರ ಅಧ್ಯಾಪನ ವೃತ್ತಿಯ ಧನ್ಯತೆ. ಬಾಬು ಶೆಟ್ಟಿ ಗಣಿತ ಪಾಠ ಮಾಡುತ್ತಿದ್ದು, ಇದುವರೆಗೆೆ ಇವರು ಪಾಠ ಹೇಳಿದ ಮಕ್ಕಳು ಗಣಿತದಲ್ಲಿ ಫೇಲಾದ ಉದಾಹರಣೆಯೇ ಇಲ್ಲ.

     23 ವರ್ಷಗಳಿಂದ ತಮ್ಮ ತರಗತಿಯ ವಿದ್ಯಾರ್ಥಿಗಳು ನೂರಕ್ಕೆ ನೂರು ತೇರ್ಗಡೆಯಾಗುತ್ತಿರುವ ಸಂಗತಿಯನ್ನು ಅವರು ಬಹಳ ಹೆಮ್ಮೆಯಿಂದ, ವಿನೀತನಾಗಿ ಹಂಚಿಕೊಂಡರು. ಬಾಬು ಶೆಟ್ಟಿಯವರಂತಹ ಶಿಕ್ಷಕರೇ ನಮ್ಮ ಶಾಲೆಗಳ ವಿಶ್ವಾಸಾರ್ಹತೆ ಹೆಚ್ಚಿಸುತ್ತಿದ್ದಾರೆ. ಉಡುಪಿಯಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಅವಲೋಕಿಸುತ್ತಿದ್ದಾಗ ಅವರ ಮಾಹಿತಿ ಲಭಿಸಿತು. ಅವರ ಶಿಕ್ಷಣ ಪ್ರೇಮ ಅಭಿನಂದನಾರ್ಹ.
    ಸುರೇಶ್ ಕುಮಾರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

    ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಿದರೆ ಸಮಾಜ ಗುರುತಿಸುತ್ತದೆ. ಶಿಕ್ಷಣ ಸಚಿವರೇ ದೂರವಾಣಿ ಕರೆ ಮಾಡಿ ಅಭಿನಂದಿಸಿರುವುದು ಸಂತಸ ತಂದಿದೆ. ಮತ್ತಷ್ಟು ಖುಷಿಯಿಂದ ಕೆಲಸ ಮಾಡಲು ಪ್ರೇರಣೆ ನೀಡಿದೆ. ಅತ್ಯಂತ ಬಡ ಕುಟುಂಬದ ಹಿನ್ನೆಲೆಯಿಂದ ಬಂದು ಶಿಕ್ಷಕನಾದವನು ನಾನು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದು ನನ್ನ ಉದ್ದೇಶ. ಪ್ರತೀ ವರ್ಷ ಉತ್ತಮ ಶಿಕ್ಷಕ ಎನ್ನುವ ಪ್ರಶಂಸಾಪತ್ರ ನನಗೆ ಸಿಗುತ್ತದೆ. ಇದೇ ಉತ್ಸಾಹದ ಕೆಲಸದ ಹಿಂದಿರುವ ಟಾನಿಕ್.
    ಬಾಬು ಶೆಟ್ಟಿ ಪ್ರಭಾರ ಮುಖ್ಯಶಿಕ್ಷಕ, ಹೆಸ್ಕುತ್ತೂರು ಸರ್ಕಾರಿ ಪ್ರೌಢಶಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts