More

    ಗ್ರಾಮೀಣ ಸರ್ಕಾರಿ ಶಾಲೆ ಭರ್ತಿ

    ಪ್ರಕಾಶ್ ಮಂಜೇಶ್ವರ, ಮಂಗಳೂರು

    ಶಿಕ್ಷಕರು, ಕನ್ನಡ ಪರ ಸಂಘಟನೆಗಳ ವಿಶೇಷ ಪ್ರಯತ್ನ ಇಲ್ಲದೆಯೂ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ, ಸರ್ಕಾರಿ ಶಾಲೆಗಳಿಗೆ ಸೇರಿಸಿದ್ದಾರೆ. ಹೊಸದಾಗಿ ಮಕ್ಕಳನ್ನು ಸೇರಿಸುವವರೂ ಸರ್ಕಾರಿ ಶಾಲೆಗಳತ್ತ ಒಲವು ತೋರಿದ್ದಾರೆ. ಈ ವಿದ್ಯಮಾನ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿರುವುದು ಗ್ರಾಮೀಣ ಭಾಗಗಳಲ್ಲಿ.

    ದ.ಕ. ಜಿಲ್ಲೆಯ 349 ಸರ್ಕಾರಿ ಶಾಲೆಗಳಲ್ಲಿ 2,160 ಹೊಸ ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ನೆಲ್ಯಡ್ಕ ಪ್ರೌಢಶಾಲೆಯೊಂದರಲ್ಲೇ ಹೊಸ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೇ.100 ಹೆಚ್ಚಿದೆ. ದೇರ್ಲಕಟ್ಟೆ ಮುರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಹೊಸ 30 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 32ರಿಂದ 62ಕ್ಕೆ ಏರಿದೆ.

    ಮುಚ್ಚೂರು ಹಿರಿಯ ಪ್ರಾಥಮಿಕ ಶಾಲೆ(ಗಂಜಿಮಠ)ಯಲ್ಲಿ 50, ಪುದು ಹಿ.ಪ್ರಾ.ಶಾಲೆ(ತುಂಬೆ)ಯಲ್ಲಿ 41, ನಾಲ್ಯಪದವು ಮಾದರಿ ಹಿ.ಪ್ರಾ.ಶಾಲೆ(ಮಂಗಳೂರು ದಕ್ಷಿಣ)ಯಲ್ಲಿ 39, ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಪ್ರೌಢಶಾಲೆಯಲ್ಲಿ 31 ಹೊಸ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ.

    ಕರೊನಾ ಸೋಂಕು ಹರಡುವ ಭೀತಿಯಿಂದ ಹೆತ್ತವರು ಬಸ್ ಅಥವಾ ಶಾಲಾ ವಾಹನಗಳಲ್ಲಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲು ಹಿಂಜರಿದಂತೆ ಕಾಣುತ್ತಿದೆ. ರಿಸ್ಕ್ ತೆಗೆದುಕೊಂಡು ಮಕ್ಕಳನ್ನು ದೂರ ಕಳಿಸುವ ಬದಲು ಹತ್ತಿರದ ಸರ್ಕಾರಿ ಶಾಲೆಗಳಲ್ಲಿಯೇ ಸದ್ಯ ಶಿಕ್ಷಣ ಮುಂದುವರಿಸಲಿ ಎನ್ನುವುದು ಮಕ್ಕಳ ಪಾಲಕರ ಅಭಿಪ್ರಾಯ.
    ಹಾಸ್ಟೆಲ್‌ಗಳು ಪುನರಾರಂಭಗೊಂಡರೂ, ಸದ್ಯದ ಮಟ್ಟಿಗೆ ಅಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಅನುಮಾನ ಮೂಡಿರುವುದು ಒಂದು ವರ್ಗದ ಪಾಲಕರ ಮನಸ್ಥಿತಿ ಬದಲಾಗಲು ಕಾರಣ. ಲಾಕ್‌ಡೌನ್, ಉದ್ಯೋಗ, ವೇತನ ಕಡಿತ ಮುಂತಾದ ಆಕಸ್ಮಿಕ ಸ್ಥಿತ್ಯಂತರಗಳು ಕೂಡ ಜನರ ದೈನಂದಿನ ವ್ಯವಹಾರ, ಜೀವನ ನಿರ್ವಹಣೆ ವಿಧಾನಗಳನ್ನು ಬದಲಾಯಿಸಿವೆ. ಮಕ್ಕಳ ಕಲಿಕಾ ಮಾರ್ಗ ಬದಲಾಯಿಸುವಲ್ಲಿಯೂ ಕರೊನಾಘಾತ ಪ್ರಮುಖ ಪಾತ್ರ ವಹಿಸಿದೆ.

    ಉಡುಪಿಯಲ್ಲಿ ಸಾವಿರ ಮಕ್ಕಳು ಸರ್ಕಾರಿ ಶಾಲೆಗೆ
    ಈ ವರ್ಷ ಉಡುಪಿ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಮಕ್ಕಳು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆ ಸೇರಿದ್ದಾರೆ. ಕರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ದೂರದ ಶಾಲೆಗಳಿಗೆ ಕಳುಹಿಸಲು ಪಾಲಕರಲ್ಲಿ ಹಿಂಜರಿಕೆಯಿದೆ. ಶಾಲಾ ಶುಲ್ಕ ಪಾವತಿ ಸಮಸ್ಯೆ ಮುಂತಾದ ಕಾರಣದಿಂದ ಪಾಲಕರು ಮಕ್ಕಳ ಶಾಲೆ ಬದಲಾಯಿಸಿದ್ದಾರೆ ಎಂದು ಉಡುಪಿ ಡಿಡಿಪಿಐ ಶೇಷಶಯನ ತಿಳಿಸಿದ್ದಾರೆ.

    ಕರೊನಾ ಸೋಂಕು ಭೀತಿಯಿಂದ ಮಕ್ಕಳನ್ನು ದೂರದ ಶಾಲೆಗಳಿಗೆ ಕಳುಹಿಸಲು ಪಾಲಕರು ಹಿಂಜರಿಯುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಯಶಸ್ವಿಯಾಗಿ ನಡೆಯುತ್ತಿರುವ ವಿದ್ಯಾಗಮನದಂತಹ ಕಾರ್ಯಕ್ರಮಗಳು ಪಾಲಕರು ಸರ್ಕಾರಿ ಶಾಲೆಗಳತ್ತ ಒಲವು ತೋರುವಲ್ಲಿ ಪ್ರಮುಖ ಪಾತ್ರವಹಿಸಿವೆ.
    -ಮಲ್ಲೇಸ್ವಾಮಿ, ಡಿಡಿಪಿಐ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts