More

    ಸರ್ಕಾರಿ ಹಾಸ್ಟೆಲ್ ಪುನರಾರಂಭ

    |ಅವಿನ್ ಶೆಟ್ಟಿ, ಉಡುಪಿ

    ಕೋವಿಡ್ ಮೂರನೇ ಅಲೆ ಆತಂಕದ ನಡುವೆಯೂ ಪದವಿ ಕಾಲೇಜುಗಳು ಆರಂಭವಾಗಿದ್ದು, ಕಳೆದ ಎರಡು ಮೂರು ತಿಂಗಳಿನಿಂದ ಬಂದ್ ಆಗಿದ್ದ ಸರ್ಕಾರಿ ಹಾಸ್ಟೆಲ್‌ಗಳು ಇದೀಗ ಸ್ಯಾನಿಟೈಸ್, ಸ್ವಚ್ಛತಾ ಕಾರ್ಯ ಮುಗಿಸಿ ವಿದ್ಯಾರ್ಥಿಗಳಿಗೆ ಮುಕ್ತವಾಗಿವೆ. ಸದ್ಯಕ್ಕೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳನ್ನಷ್ಟೇ ತೆರೆಯಲಾಗಿದೆ. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 23, ಸಮಾಜ ಕಲ್ಯಾಣ ಇಲಾಖೆಯಡಿ 7, ಐಟಿಡಿಪಿ 5 ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳಿವೆ.
    ಪದವಿ, ನರ್ಸಿಂಗ್ ಕಾಲೇಜಿನ ಬಹುತೇಕ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಗೆ ಆಗಮಿಸಿದ್ದಾರೆ. ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ಚಿಕ್ಕಮಗಳೂರು, ಹಾಸನ, ಬೆಳಗಾವಿ, ಧಾರವಾಡ, ಬೆಳಗಾವಿ, ರಾಯಚೂರು ಭಾಗ ಸೇರಿದಂತೆ ಶೇ.70ಕ್ಕೂ ಅಧಿಕ ವಿದ್ಯಾರ್ಥಿಗಳು ಹೊರ ಜಿಲ್ಲೆಯವರು. ಜುಲೈ 26, 27ರಿಂದ ಹಾಸ್ಟೆಲ್‌ಗಳು ತೆರೆದಿದ್ದು, ಶೇ.50 ಮಕ್ಕಳು ಹಾಸ್ಟೆಲ್‌ಗೆ ಬಂದಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೂ ಮಾಹಿತಿ ನೀಡಲಾಗಿದ್ದು, ಶೀಘ್ರ ಸಂಪೂರ್ಣ ಹಾಜರಾತಿ ನಿರೀಕ್ಷೆ ಇದೆ ಎನ್ನುತ್ತಾರೆ ಅಧಿಕಾರಿಗಳು.
    ಲಸಿಕೆ ಕಡ್ಡಾಯ: ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಮತ್ತು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಹಾಸ್ಟೆಲ್ ಪ್ರವೇಶ ಮಾಡುವ ಮುನ್ನ ವಿದ್ಯಾರ್ಥಿಗಳು ಕಡ್ಡಾಯವಾಗಿ ಪ್ರಥಮ ಡೋಸ್ ಕೋವಿಡ್ ಲಸಿಕೆ ಪಡೆದ ವರದಿ ನೀಡಬೇಕು. ಹಾಸ್ಟೆಲ್ ವಾರ್ಡನ್ ಮತ್ತು ಅಡುಗೆ, ಸ್ವಚ್ಛತಾ ಸಿಬ್ಬಂದಿ ಸಹಿತ ಎಲ್ಲರಿಗೂ ವ್ಯಾಕ್ಸಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗೊಂದಲದಲ್ಲಿ ವಿದ್ಯಾರ್ಥಿಗಳು: ಹಾಸ್ಟೆಲ್ ಪುನರಾರಂಭಗೊಂಡು ಪರೀಕ್ಷೆ ಬರೆಯುವ ಉತ್ಸಾಹದಲ್ಲಿದ್ದ ವಿದ್ಯಾರ್ಥಿಗಳಿಗೆ ಇದೀಗ ಗೊಂದಲ ಉಂಟಾಗಿದೆ. ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ಶೇ.80 ವಿದ್ಯಾರ್ಥಿಗಳು ಹೊರ ಜಿಲ್ಲೆಯವರು. ಮಂಗಳೂರು ವಿವಿ ಪದವಿ, ಸ್ನಾತಕೋತ್ತರ ಪರೀಕ್ಷೆ ಮತ್ತೆ ಮುಂದೂಡಿಕೆ, ಕೋವಿಡ್ ಮೂರನೇ ಅಲೆ ಆತಂಕದಿಂದ ವಿದ್ಯಾರ್ಥಿಗಳು ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ತರಗತಿ ಬೋಧನೆ ನಡೆಯುತ್ತಿದ್ದರೆ, ಕೆಲವರಿಗೆ ಆನ್‌ಲೈನ್ ತರಗತಿ. ಪುನಃ ಊರಿಗೆ ಹೋಗುವುದೋ, ಹಾಸ್ಟೆಲ್‌ನಲ್ಲಿಯೇ ಉಳಿದುಕೊಳ್ಳುವುದೋ ಎಂಬ ಚಿಂತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

    ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳು ಆರಂಭಗೊಂಡಿವೆ. ರೆಗ್ಯುಲರ್ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಗೆ ಬರುತ್ತಿದ್ದಾರೆ. ಹಾಸ್ಟೆಲ್‌ಗಳ ಸ್ಯಾನಿಟೈಸ್ ಪ್ರಕ್ರಿಯೆ, ಸ್ವಚ್ಛತೆಗೆ ಪ್ರಾಮುಖ್ಯ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ, ಲಸಿಕೆ ಕಡ್ಡಾಯ. ಕೋವಿಡ್ ಮಾರ್ಗಸೂಚಿ ವ್ಯವಸ್ಥಿತವಾಗಿ ಪಾಲಿಸಲು ಅಧಿಕಾರಿ, ವಾರ್ಡನ್‌ಗಳಿಗೆ ಸೂಚನೆ ನೀಡಲಾಗಿದೆ.
    |ದೇವಿಂದರ್ ಎಸ್.ಬಿರಾದರ್
    ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

    ಹಾಸ್ಟೆಲ್‌ಗಳು ತೆರೆದ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೂ ಮಾಹಿತಿ ನೀಡಲಾಗಿದೆ. ಕೋವಿಡ್ ಮಾರ್ಗಸೂಚಿ ಪಾಲನೆ ಬಗ್ಗೆ ನಿರ್ದೇಶನ ನೀಡಲಾಗಿದೆ. ಸ್ಯಾನಿಟೈಸರ್, ಥರ್ಮಲ್ ಸ್ಕಾೃನರ್ ವ್ಯವಸ್ಥೆ ಮಾಡಲಾಗಿದ್ದು, ವಾರ್ಡನ್ಸ್ ಮತ್ತು ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಪೂರ್ಣಗೊಂಡಿದೆ.
    | ಅನಿತಾ ವಿ. ಮಡ್ಲೂರು
    ಉಪನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts