More

    ರೈತರಿಗೆ ಬರ ಪರಿಹಾರ ವಿತರಿಸದ ಸರ್ಕಾರಗಳು, ಕರವೇ ಗಜಪಡೆ ಆರೋಪ

    ಬ್ಯಾಡಗಿ: ಜಿಲ್ಲೆಯ ರೈತರು ಬೆಳೆಯಿಲ್ಲದೆ ಪರದಾಡುತ್ತಿದ್ದಾರೆ. ಆದರೆ, ಸರ್ಕಾರ ರೈತರ ನೆರವಿಗೆ ಧಾವಿಸುವ ಬದಲು ಭವಿಷ್ಯದ ಚುನಾವಣೆ ಸೇರಿದಂತೆ ತಮ್ಮ ಅಧಿಕಾರ ಉಳಿಸಿಕೊಳ್ಳುವತ್ತ ಗಮನಹರಿಸಿವೆ ಎಂದು ತಾಲೂಕು ಕರ್ನಾಟಕ ರಕ್ಷಣೆ ವೇದಿಕೆ ಗಜಪಡೆ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಆರೋಪಿಸಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಶಿರಸ್ತೇದಾರ್ ಎಚ್.ಬಿ. ಹತ್ತಿಮತ್ತೂರು ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

    ಕಳೆದ ಮೂರು ವರ್ಷಗಳಿಂದ ರೈತರಿಗೆ ಸಮರ್ಪಕ ಬೆಳೆ ಸಿಗದೆ ಸಾಲ ಮಾಡಿಕೊಂಡು ಸಂಕಷ್ಟದಲ್ಲಿ ಮುಳುಗಿದ್ದಾರೆ. ಪದೇಪದೆ ಅತಿವೃಷ್ಟಿ, ಅನಾವೃಷ್ಟಿಗಳು ರೈತಕುಲಕ್ಕೆ ಮಾರಕವಾಗಿವೆ. ಜಾನುವಾರುಗಳಿಗೆ ಮೇವು, ನೀರು ಇಲ್ಲದಂತಾಗಿದೆ. ಇಂತಹ ದುಸ್ಥಿತಿಯಲ್ಲಿ ರೈತರ ನೆರವಿಗೆ ಬರಬೇಕಾದ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿದರು.

    ಬ್ಯಾಡಗಿ ತಾಲೂಕು ಸೇರಿದಂತೆ ವಿವಿಧ ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೊಷಿಸಿ ಮೂರು ತಿಂಗಳು ಕಳೆದಿವೆ. ಇದಕ್ಕಾಗಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಜಂಟಿ ಅಧಿಕಾರಿಗಳ ತಂಡ ಎಲ್ಲ ಗ್ರಾಮಗಳಿಂದ ಹಾನಿಯ ಅಂದಾಜು ಪಟ್ಟಿಯನ್ನು ಸಿದ್ದಪಡಿಸಿ ವರದಿ ನೀಡಿವೆ. ಆದರೆ, ಇನ್ನೂತನಕ ರೈತರಿಗೆ ನಯಾಪೈಸೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕು ಕಾರ್ಯದರ್ಶಿ ಲೋಹಿತ್​ಕುಮಾರ ದಾಸೋಹಮಠ ಮಾತನಾಡಿ, ತಾಲೂಕಿನ ಕಾಗಿನೆಲೆ, ಬ್ಯಾಡಗಿ ಸೇರಿದಂತೆ ಎರಡು ಹೋಬಳಿಗಳಲ್ಲಿ ರೈತರಿಗೆ ಬೆಳೆ ಇಲ್ಲದಂತಾಗಿದೆ. ಅಲ್ಪಸ್ವಲ್ಪ ನೀರು ಪೂರೈಸುತ್ತಿದ್ದ ಕೊಳವೆ ಬಾವಿಗಳು ಬತ್ತಿಹೋಗುತ್ತಿವೆ. ಇದರಿಂದ ಅಳಿದುಳಿದ ಬೆಳೆಗೂ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಕೆರೆಕಟ್ಟೆಗಳು ಖಾಲಿ ಉಳಿದು ರೈತರಿಗೆ ನೀರಾವರಿ ಯೋಜನೆಗಳ ಲಾಭ ಸಿಗದಂತಾಗಿದೆ. ಕಾಲುವೆಗಳಲ್ಲಿ ಸಂಪೂರ್ಣವಾಗಿ ಗಿಡಗಂಟಿಗಳು ಬೆಳೆದು ನಿಂತಿವೆ. ಸಂಬಂಧಿಸಿದ ಇಂಜಿನಿಯರ್​ಗಳು ಜವಾಬ್ದಾರಿ ಅರಿತು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

    ಕರವೇ ಗಜಪಡೆ ತಾಲೂಕಾಧ್ಯಕ್ಷ ಪ್ರಕಾಶ ಪರಪ್ಪಗೌಡ್ರ, ಮಂಜುನಾಥ ಬಸಾಪುರ, ಮೂಕೇಶ ತಳವಾರ, ಯೂಸೂಫ್ ಕಲೆಗಾರ, ದ್ಯಾಮಣ್ಣ ಮಲ್ಲಾಡದ, ದೀಪಾವಳಿ ನಾಗರಾಜ, ಶಿವಲಿಂಗಯ್ಯ ಹಿರೇಮಠ, ಮೂಕೇಶ ಹಿರೇಹಳ್ಳಿ, ಜಗದೀಶ ಚಕ್ರಸಾಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts