More

    ಸಾರ್ವಜನಿಕರನ್ನು ಪರದಾಡಿಸಿದ ನೌಕರರ ಮುಷ್ಕರ: ಕಚೇರಿ ಆವರಣದಲ್ಲಿಯೇ ಕಾದುಕುಳಿತ ಜನರು

    ಮಂಡ್ಯ: ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಮುಷ್ಕರ ನಡೆಸಿದ ಪರಿಣಾಮ ಸಾರ್ವಜನಿಕರು ಪರದಾಡುವಂತಾಯಿತು.
    ಅಧಿಕಾರಿಗಳು ಕರ್ತವ್ಯಕ್ಕೆ ಗೈರಾಗುತ್ತಿರುವ ಮಾಹಿತಿ ತಿಳಿಯದೇ ಹಲವರು ದಿನನಿತ್ಯದ ಕೆಲಸಗಳಿಗಾಗಿ ಕಚೇರಿಗೆ ಬಂದಿದ್ದರು. ಸುಮಾರು ಹೊತ್ತು ಕಚೇರಿ ಆವರಣದಲ್ಲಿಯೇ ಕಾದುಕುಳಿತರು. ಈ ನಡುವೆಯೂ ಒಂದಷ್ಟು ನೌಕರರು ಕೆಲಸ ಮಾಡುತ್ತಿದ್ದರು. ಆದರೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಕಚೇರಿಗಳಿಗೆ ತೆರಳಿ ಅವರ ಮನವೊಲಿಸಿ ಮನೆಗೆ ಕಳುಹಿಸಿದರು. ಬಳಿಕ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಶಿಕ್ಷಕರ ಗೈರು ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಯಿತು. ಇತ್ತ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೈಗಳಿಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.
    ವರ್ಷದಿಂದ ವರ್ಷಕ್ಕೆ ಬಜೆಟ್ ಗಾತ್ರ ಹೆಚ್ಚುತ್ತಲೇ ಇದ್ದು, ಸರ್ಕಾರ ಹೊಸಹೊಸ ಕಾರ‌್ಯಕ್ರಮಗಳು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರಾಜ್ಯದಲ್ಲಿ ಶೇ.39ರಷ್ಟು ನೌಕರರ ಹುದ್ದೆಗಳ ಖಾಲಿ ಇವೆ. ಆದಾಗ್ಯೂ ಇರುವ ನೌಕರರೇ ಒತ್ತಡದ ನಡುವೆಯೂ ಎಲ್ಲ ಯೋಜನೆಗಳ ಅನುಷ್ಠಾನದ ಜವಾಬ್ದಾರಿ ಹೊರಬೇಕಿದೆ. ಹಾಗೆಯೇ ನಾವು ಎಲ್ಲ ಕೆಲಸ ಕಾರ್ಯದಲ್ಲಿ ತೊಡಗಿದ್ದೇವೆ. ಸರ್ಕಾರ ನಮ್ಮ ಸಮಸ್ಯೆಗಳು, ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ವೇತನ ಪರಿಷ್ಕರಣೆ ಸಂಬಂಧ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌ರಾವ್ ಅವರ ಅಧ್ಯಕ್ಷತೆಯ 7ನೇ ವೇತನ ಆಯೋಗ ರಚಿಸಲಾಗಿತ್ತು. ಈ ಆಯೋಗಕ್ಕೆ ಸಂಘದಿಂದ ವಿಸ್ತತ ವರದಿ ಸಲ್ಲಿಸಿತ್ತು. ಆದ್ದರಿಂದ ಆಯೋಗದಿಂದ ವರದಿ ಪಡೆದು 2022ರ ಜು.1ರಿಂದ ಜಾರಿಗೆ ಬರುವಂತೆ ಶೇ.40ರಷ್ಟು ವೇತನ ಹೆಚ್ಚಳ ಸೌಲಭ್ಯ ನೀಡಬೇಕೆಂದು ಆದೇಶಿಸಬೇಕು. ಅಂತೆಯೇ ಪಂಜಾಬ್, ರಾಜಸ್ತಾನ, ಛತ್ತೀಸ್‌ಘಡ್, ಜಾರ್ಖಂಡ್, ಹಿಮಾಚಲಪ್ರದೇಶ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಎನ್‌ಪಿಎಸ್‌ನ್ನು ರದ್ದುಗೊಳಿಸಿ ಒಪಿಎಸ್ ಅನ್ನೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
    ಕೊನೆಗೆ ಸರ್ಕಾರ ವೇತನ ಪರಿಷ್ಕರಣೆ ಮಾಡಿದ ಪರಿಣಾಮ ಮುಷ್ಕರ ವಾಪಸ್ ಪಡೆದರೂ ಬಹುತೇಕ ನೌಕರರು ಮನೆಗೆ ತೆರಳಿದ ಕಾರಣ ಜನಸಾಮಾನ್ಯರ ಕೆಲಸಗಳಾಗಲಿಲ್ಲ. ಇದರಿಂದಾಗಿ ದೂರದ ಊರುಗಳಿಂದ ಜನರು ಬೇಸರದಿಂದ ಮನೆ ಕಡೆ ಹೊರಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts