ಒಳಮೀಸಲಾತಿ ನೀಡಿ ಜನರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಬದ್ಧ; ಸಚಿವ ಎಚ್.ಕೆ.ಪಾಟೀಲ್ ಭರವಸೆ | Internal Reservation

dk-2025-03-27t194614085-67e55db770d82
Published on

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ(Internal Reservation) ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ಏಕಸದಸ್ಯ ಆಯೋಗ ನೀಡಿದ ಮಧ್ಯಂತರ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿರುವುದಾಗಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.

ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಕುರಿತು ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ಗುರುವಾರ ಮಾತನಾಡಿದರು.

ನಾಲ್ಕು ಪ್ರಮುಖ ಶಿಫಾರಸ್ಸುಗಳನ್ನು ಮಾಡಿದೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನಗಳನ್ನು ಬಳಸಿ 30 ರಿಂದ 40 ದಿವಸಗಳೊಳಗೆ ಹೊಸ ಸಮೀಕ್ಷೆಯನ್ನು ನಡೆಸಬಹುದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ ಎಂದರು.

ಹೊಸದಾದ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿಯನ್ನು ಸಿದ್ದಪಡಿಸಬೇಕು. ಯಾವ ಸಂಸ್ಥೆಯಿಂದ ಸಮೀಕ್ಷೆ ನಡೆಸಬೇಕು . ಸಮೀಕ್ಷೆಗೆ ಅಗತ್ಯವಿರುವ ತರಬೇತಿ, ಸಂಪನ್ಮೂಲ ಕ್ರೋಢೀಕರಣಗಳ ಉಸ್ತುವಾರಿಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದು ಸೂಕ್ತವೆಂದು ಆಯೋಗವು ಅಭಿಪ್ರಾಯಪಟ್ಟಿದೆ. ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಈ ವರದಿಯಲ್ಲಿ ತಿಳಿಯಪಡಿಸಿರುವ ಮಾನದಂಡಗಳಂತೆ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವರ್ಗೀಕರಣಗೊಳಿಸಿ ಲಭ್ಯವಿರುವ ಮೀಸಲಾತಿ ಪ್ರಮಾಣವನ್ನು ಆದ್ಯತೆ ಮೇಲೆ ಹಂಚಿಕೆ ಮಾಡಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿರುವ ಬಗ್ಗೆ ಸಚಿವರು ವಿವರಿಸಿದರು.

ನಾಗಮೋಹನ್ ದಾಸ್ ಆಯೋಗದವರ ಮಧ್ಯಂತರ ವರದಿಯನ್ನು ಸಚಿವ ಸಂಪುಟ ಇಂದು ಅಂಗೀಕರಿಸಿದೆ. ಒಳಮೀಸಲಾತಿ ವರ್ಗೀಕರಣವನ್ನು ಶೀಘ್ರಗತಿಯಲ್ಲಿ ಕೈಗೊಳ್ಳುವ ಸಂಬಂಧ, ಹೊಸ ಸಮೀಕ್ಷೆ ನಡೆಸುವ ಕಾರ್ಯವನ್ನು ನಾಗಮೋಹನ್ ದಾಸ್ ಸಮಿತಿಗೆ ವಹಿಸಲು ಸಚಿವ ಸಂಪುಟ ನಿರ್ಣಯಿಸಿದೆ. ಸಮೀಕ್ಷಾ ಕಾರ್ಯವನ್ನು 60 ದಿನದೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಅನುಕೂಲವಾಗುವಂತೆ ಸಮಿತಿಯ ಅವಧಿಯನ್ನು ಎರಡು ತಿಂಗಳವೆರೆಗೆ ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net