More

    31ರಂದು ಚಾಮುಂಡೇಶ್ವರಿಗೆ ಮಹಾಮಸ್ತಕಾಭಿಷೇಕ: ಗೌಡಗೆರೆಯಲ್ಲಿ ಭರದಿಂದ ಸಾಗಿದೆ ಸಿದ್ಧತೆ

    ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಅನಾವರಣಗೊಂಡಿರುವ ಅತಿ ಎತ್ತರದ ತಾಯಿ ಚಾಮುಂಡೇಶ್ವರಿ ಪಂಚಲೋಹ ವಿಗ್ರಹಕ್ಕೆ ಜು.31ರ ಭಾನುವಾರ ಮಹಾ ಮಸ್ತಕಾಭಿಷೇಕ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಈ ಮೂಲಕ ಬೊಂಬೆನಾಡು ಚನ್ನಪಟ್ಟಣ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ.


    ಕೇವಲ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಗೆ ಮಾತ್ರ ನಡೆಯುತ್ತಿದ್ದ ಮಸ್ತಕಾಭಿಷೇಕ ಇದೇ ಮೊದಲ ಬಾರಿಗೆ ಬೊಂಬೆನಾಡಿನಲ್ಲಿ ಹಿಂದು ದೇವತೆಗೆ ನಡೆಯುತ್ತಿದ್ದು, ಈ ಅಪರೂಪದ ಕಾರ್ಯಕ್ಕೆ ಸಾಕ್ಷಿಯಾಗಲು ಭಕ್ತರು ಕಾಯುತ್ತಿದ್ದಾರೆ. ಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಠಾಪನೆಗೊಂಡು ವರ್ಷ ಪೂರೈಸಿದ್ದು, ಇದೇ ಮೊದಲ ಬಾರಿಗೆ ಮಹಾಮಸ್ತಕಾಭಿಷೇಕ ಹಮ್ಮಿಕೊಂಡಿರುವುದಾಗಿ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಎಲ್ಲವೂ 1008ರಲ್ಲೇ ಬಳಕೆ: ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಈಗಾಗಲೇ ಸಕಲ ಸಿದ್ಧತೆ ನಡೆದಿದ್ದು, ಗುರುವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ದೇವಿಯ ಮಸ್ತಕಾಭಿಷೇಕಕ್ಕೆ ಚಂದನ, ಕುಂಕುಮ, ಅರಿಶಿಣ, ಗಿಡಮೂಲಿಕೆಗಳ ಜಲ, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಎಳನೀರು ಸೇರಿ 45 ಬಗೆಯ ವಸ್ತುಗಳು ಮತ್ತು ದ್ರವ್ಯಗಳನ್ನು ಬಳಸಲಾಗುತ್ತಿದೆ. ಪ್ರತಿಯೊಂದು ಪದಾರ್ಥವೂ 1008 ಲೀ ಹಾಗೂ 1008 ಕೆ.ಜಿ. ಎಂಬುದು ವಿಶೇಷ. ಇದಲ್ಲದೇ ಅಭಿಷೇಕದಲ್ಲಿ ಕೇಸರಿಯನ್ನು ಬಳಸುತ್ತಿದ್ದು, ದುಬಾರಿ ಬೆಲೆಯ 5 ಕೆ.ಜಿ. ಕಾಶ್ಮೀರದಿಂದ ತರಿಸಲಾಗಿದೆ. ಇನ್ನು ಗಂಗಾ ಕಾವೇರಿ ಸೇರಿ ಪುರಾಣಗಳಲ್ಲಿ ಉಲ್ಲೇಖವಾಗಿರುವ ಸಪ್ತನದಿಗಳ ಪವಿತ್ರ ಜಲವನ್ನು ದೇವಿಗೆ ಅಭಿಷೇಕ ಮಾಡಲಾಗುವುದು ಎಂದು ಮಲ್ಲೇಶ್ ಗುರೂಜಿ ತಿಳಿಸಿದರು.

    ಭಾನುವಾರ ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳುವ ಮಹಾಮಸ್ತಕಾಭಿಷೇಕ ಸುವಾರು 10 ತಾಸು ನಿರಂತರವಾಗಿ ನಡೆಯಲಿದೆ. ಇದುವರೆಗೆ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು ಬಾಹುಬಲಿ ವಿಗ್ರಹಗಳಿಗೆ ಮಾತ್ರ. ಇದೇ ಮೊದಲ ಬಾರಿಗೆ ಚಾಮುಂಡೇಶ್ವರಿಗೂ ಮಸ್ತಕಾಭಿಷೇಕ ಮಾಡಲಾಗುತ್ತಿದೆ ಎಂದು ಗುರೂಜಿ ಮಾಹಿತಿ ನೀಡಿದರು.

    ಗಣ್ಯಾತಿಗಣ್ಯರು ಭಾಗಿ: ಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕಕ್ಕೆ ಮುಖ್ಯಮಂತ್ರಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವೀರೇಂದ್ರ ಹೆಗ್ಗಡೆ, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಮೈಸೂರು ರಾಜವಂಶಸ್ಥ ಯದುವೀರ ಒಡೆಯರ್, ಮಾಜಿ ಸಿಎಂ ಎಚ್.ಡಿ. ಕು ಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಲಿದ್ದು, 25 ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ ಎಂದು ಮಲ್ಲೇಶ್ ಗುರೂಜಿ ತಿಳಿಸಿದರು.

    ಸಕಲ ಸೌಲಭ್ಯ: ಭಕ್ತರಿಗೆ ತೊಂದರೆಯಾಗದಂತೆ ತಾತ್ಕಾಲಿಕ ಶೌಚಗೃಹ, ದರ್ಶನಕ್ಕೆ ವ್ಯವಸ್ಥೆ, ಪ್ರಸಾದ ವಿನಿಯೋಗ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಅಂಗವಿಕಲರು ಮತ್ತು ವೃದ್ಧರಿಗೆ ದೇವಾಲಯದವರೆಗೆ ಬರಲು ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರಕ್ಕೆ ಆಗಮಿಸುವವರ ನೆರವಿಗಾಗಿ 300 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. 67 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹಕ್ಕೆ ಮೇಲ್ಭಾಗದಿಂದ ಅಭಿಷೇಕ ಮಾಡಲು ಅನುಕೂಲವಾಗುವಂತೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಅಶಕ್ತರು ಹಾಗೂ ವೃದ್ಧರಿಗಾಗಿ ತಾತ್ಕಾಲಿಕ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ. ವಿಗ್ರಹದ ಎದುರು ಬೆಟ್ಟ ಗುಡ್ಡಗಳ ಮಾದರಿ ಸಿದ್ಧಪಡಿಸಿ ಅಲಂಕರಿಸಲಾಗಿದೆ ಎಂದು ಗುರೂಜಿ ತಿಳಿಸಿದರು.


    ನಾಗಾ ಸಾಧುಗಳು ಕ್ಷೇತ್ರದಲ್ಲಿ ತಾಯಿಯ ವಿಗ್ರಹವನ್ನು ಸ್ಥಾಪಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ. ಇದೀಗ, ತಾಯಿಗೆ ಮಹಾ ಮಸ್ತಕಾಭಿಷೇಕ ಮಾಡಬೇಕು ಎಂಬ ಸಂಕಲ್ಪ ಕೈಗೊಂಡು ಈ ಕಾರ್ಯ ಕೈಗೊಳ್ಳಲಾಗಿದೆ. ಕಳೆದ ವರ್ಷಗಳಲ್ಲಿ ರಾಜ್ಯವನ್ನು ಕಾಡಿದ ಕರೊನಾ ಹಾಗೂ ಇನ್ನಿತರ ಸಮಸ್ಯೆಗಳು ಮುಂದೆ ಬರಬಾರದು ಎಂಬ ಸಂಕಲ್ಪದೊಂದಿಗೆ ಈ ಕಾರ್ಯ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳಿಂದಲೇ ಅಭಿಷೇಕ ನೆರವೇರಿಸಲಾಗುತ್ತದೆ. ಮುತ್ಸದ್ದಿ ರಾಜಕಾರಣಿಗಳಾದ ದೇವೇಗೌಡರೂ ಸೇರಿ ವಿವಿಧ ಮಠಾಧೀಶರು, ಗಣ್ಯರು ಕೈಜೋಡಿಸಲಿದ್ದಾರೆ.
    ಡಾ. ಮಲ್ಲೇಶ್ ಗುರೂಜಿ ಚಾಮುಂಡೇಶ್ವರಿ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts