More

    ಗೂಡ್ಸ್ ರೈಲು ಡಿಕ್ಕಿ 23 ಜಾನುವಾರುಗಳು ಸಾವು

    ಮಂಗಳೂರು: ನಗರದ ಹೊರ ವಲಯದ ಜೋಕಟ್ಟೆ, ಅಂಗರಗುಂಡಿ ಬಳಿ ಭಾನುವಾರ ರಾತ್ರಿ ಗೂಡ್ಸ್ ರೈಲು ಡಿಕ್ಕಿಯಾಗಿ 23 ಜಾನುವಾರುಗಳು ಮೃತಪಟ್ಟಿವೆ.


    ತಡರಾತ್ರಿ ಕಂಕನಾಡಿ ಕಡೆಯಿಂದ ಎಂಸಿಎಫ್ ಕಾರ್ಖಾನೆಗೆ ತೆರಳುತ್ತಿದ್ದ ಗೂಡ್ಸ್ ರೈಲು ಜಾನುವಾರುಗಳ ಮೇಲೆ ಚಲಿಸಿದೆ. 21 ಎಮ್ಮೆ ಹಾಗೂ 2 ಎತ್ತು ಮೃತಪಟ್ಟಿವೆ. ಎರಡು ಸಾಧಾರಣ ಗಾಯಗೊಂಡಿದ್ದು, ಎದ್ದುಕೊಂಡು ಹೋಗಿವೆ.


    ಹಳಿಯಲ್ಲಿ ಮಲಗಿದ್ದ ಜಾನುವಾರುಗಳು ರೈಲು ಬರುವಾಗ ಭಯದಿಂದ ಓಡಲು ಆರಂಭಿಸಿವೆ. ಸೇತುವೆ ಬಳಿ ರೈಲು ಡಿಕ್ಕಿ ಹೊಡೆದು 25 ಅಡಿ ಆಳಕ್ಕೆ ಎಮ್ಮೆಗಳು ಬಿದ್ದಿವೆ. ಕೆಲವು ಎಮ್ಮೆಗಳು ಹಳಿ ಬದಿಯ ಹೊಂಡಕ್ಕೆ ಬಿದ್ದು ಜೀವನ್ಮರಣ ಹೋರಾಟ ನಡೆಸಿವೆ. ಕೂಡಲೇ ರೈಲ್ವೇ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಕೋಣಗಳನ್ನು ರಕ್ಷಿಸಿದ್ದಾರೆ. ಬೆಳಗ್ಗೆ ಸ್ಥಳದಲ್ಲಿ ಕೋಣಗಳು ಕೆ, ಕಾಲು ಕಳೆದುಕೊಂಡು ನರಳುತ್ತಿರುವುದು ಕಂಡು ಬಂದಿದೆ.


    ಅಂಗರಗುಂಡಿ ಪರಿಸರದಲ್ಲಿ ನೀರು ಹಾಗೂ ಮೇಯಲು ಹುಲ್ಲು ಇರುವುದರಿಂದ ಬಿಡಾಡಿ ಜಾನುವಾರುಗಳು ರಾತ್ರಿ ವೇಳೆ ಈ ಪರಿಸರದಲ್ಲಿ ತಿರುಗಾಡಿಕೊಂಡಿದ್ದು, ರಾತ್ರಿ ವೇಳೆ ರೈಲ್ವೇ ಹಳಿಯಲ್ಲಿ ಮಲಗುತ್ತವೆ. ಇದರಿಂದ ದುರಂತ ಸಂಭವಿಸಿದೆ.
    2021 ಮಾ.31ರಂದು ರಾತ್ರಿ ಕೂಡ ತೋಕೂರು ಬಳಿ ಕೊಂಕಣ ರೈಲ್ವೆ ಹಳಿಯಲ್ಲಿ ರೈಲು ಡಿಕ್ಕಿ ಹೊಡೆದು 17 ಜಾನುವಾರುಗಳು ಮೃತಪಟ್ಟಿದ್ದವು. ಈ ಪರಿಸರದಲ್ಲಿ ಬಿಡಾಡಿ ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವುಗಳು ಹಿಂಡು ಹಿಂಡಾಗಿ ರೈಲ್ವೆ ಹಳಿಗಳ ಮೇಲೆ ಸಂಚರಿಸುವಾಗ ಅಥವಾ ಮಲಗಿಕೊಂಡಿರುವಾಗ ರೈಲುಗಳು ಬಂದರೆ ಅವುಗಳ ಅಡಿಗೆ ಬಿದ್ದು ಸಾವನ್ನಪ್ಪುತ್ತಿವೆ. ಕೆಲವು ಬಾರಿ ಒಂದೆರಡು ಜಾನುವಾರುಗಳು ಸಾವನ್ನಪ್ಪುತ್ತಿವೆ.


    ವಿಲೇವಾರಿ ಸವಾಲು: ಮೃತಪಟ್ಟ ಜಾನುವಾರುಗಳು ದಷ್ಟ ಪುಷ್ಟವಾಗಿ ಸುಮಾರು 300 ಕಿ.ಗ್ರಾಂ ಗಿಂತಲೂ ಅಧಿಕ ತೂಕವಿದ್ದು, ಅವುಗಳನ್ನು ವಿಲೇವಾರಿ ಮಾಡುವುದು ಸವಾಲಾಗಿತ್ತು. ಸಂಜೆಯ ತನಕ 6 ಜಾನುವಾರುಗಳನ್ನು ಮಣ್ಣಿನಡಿ ಹಾಕಲಾಗಿತ್ತು. ಭಾನುವಾರ ರಾತ್ರಿ ಘಟನೆ ನಡೆದಿದ್ದರಿಂದ ವಾಸನೆ ಬರಲಾರಂಭಿಸಿದ ಕಾರಣ ಸ್ಥಳೀಯರು ಜಮಾಯಿಸಿ, ರೈಲ್ವೇ ಪೊಲೀಸ್, ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಗೂಡ್ಸ್ ರೈಲನ್ನು ವೇಗ ನಿಯಂತ್ರಿಸಿದ ಪರಿಣಾಮ ರೈಲು ಅಪಘಡಕ್ಕೀಡಾಗುವುದು ತಪ್ಪಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts