More

    ಅಲ್ಪ ಭೂಮಿಯಲ್ಲಿ ಉತ್ತಮ ಬೆಳೆ

    ಹಳೇಬೀಡು: ಭೂಮಿಯ ಫಲವತ್ತತೆ ಕಾಪಾಡಿಕೊಂಡರೆ ಪಾರಂಪರಿಕ ಕೃಷಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ನಂಬಿರುವ ಹೋಬಳಿಯ ರೈತ ಕೃಷ್ಣೇಗೌಡ, ಅಲ್ಪ ಪ್ರಮಾಣದ ಭೂಮಿಯಲ್ಲಿ ಉತ್ತಮ ಬೆಳೆ ತೆಗೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಹೋಬಳಿಯ ಹುಲಿಕೆರೆ ಗ್ರಾಮದ ರೈತ ಕೃಷ್ಣೇಗೌಡ ತಮ್ಮ ಎರಡು ಎಕರೆ ಜಮೀನಿನಲ್ಲಿ ತೆಂಗು ಬೆಳೆದಿದ್ದು, ಅದರೆ ಜತೆಗೆ ಜೋಳ, ಹತ್ತಿ ಬೆಳೆಯುವುದಲ್ಲದೆ, ಆಗಾಗ್ಗೆ ಸಣ್ಣ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಾರೆ. ಹೋಬಳಿಯ ಬಹಳಷ್ಟು ಕೃಷಿ ಪ್ರದೇಶವು ನೀರಾವರಿಯಿಂದ ವಂಚಿತವಾಗಿರುವುದರಿಂದ ರೈತರು ಮಳೆಯನ್ನೇ ನೆಚ್ಚಿಕೊಂಡು ಬೆಳೆ ಮಾಡಬೇಕಿದೆ. ಕೊಳವೆಬಾವಿ ಸೌಲಭ್ಯದಿಂದ ತರಕಾರಿ ಬೆಳೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾದರೂ ಹಾಕಿದ ಬಂಡವಾಳಕ್ಕೆ ತಕ್ಕ ಲಾಭ ಗಳಿಸುವುದು ಕಷ್ಟಕರವಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ವ್ಯವಸಾಯ ಬಿಡದೆ ಭೂಮಿಯ ಫಲವತ್ತತೆಯನ್ನೂ ಕಾಪಾಡಿಕೊಳ್ಳುವ ಮೂಲಕ ಕೃಷ್ಣೇಗೌಡ ಕೃಷಿಯಲ್ಲಿ ಮುನ್ನಡೆಯುತ್ತಿದ್ದಾರೆ.

    ವರ್ಷಕ್ಕೆರಡು ವಾಣಿಜ್ಯ ಬೆಳೆ: ರೈತ ಕೃಷ್ಣೇಗೌಡ ತಮ್ಮ ಎರಡು ಎಕರೆ ಪ್ರದೇಶದಲ್ಲಿ 70 ತೆಂಗಿನ ಮರ ಬೆಳೆಸಿದ್ದು, ಸದ್ಯ ಉತ್ತಮ ಇಳುವರಿ ನೀಡುತ್ತಿದೆ. ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಮಾದರಿಯಲ್ಲಿ ತೆಂಗನ್ನು ಕಾಪಾಡಿಕೊಂಡು ಬಂದಿದ್ದಾರೆ. ಬಲಿತ ತೆಂಗಿನಕಾಯಿ, ಸೋಗೆ ಮುಂತಾದವು ಆಗಾಗ್ಗೆ ಮರದಿಂದ ಬೀಳುವ ಕಾರಣ ತರಕಾರಿ ಬೆಳೆಗಳು ನಾಶವಾಗುವ ಪರಿಣಾಮ ಅಪರೂಪಕ್ಕೆ ತರಕಾರಿ ಬೆಳೆ ಮಾಡುತ್ತಾರೆ. ಇದರ ಹೊರತಾಗಿ ದ್ವಿದಳ ಧಾನ್ಯಗಳ ಕೃಷಿಗೂ ಆದ್ಯತೆ ನೀಡಿದ್ದಾರೆ.

    ಒಂದೂವರೆ ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಚಪ್ಪರದ ಅವರೆಕಾಯಿ ಕಟಾವಿಗೆ ಬಂದಿದ್ದು ಉತ್ತಮ ಇಳುವರಿ ಹಾಗೂ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಅತಿವೃಷ್ಟಿ-ಅನಾವೃಷ್ಟಿಯಿಂದ ಬೆಳೆ ನಷ್ಟವಾದರೆ, ತೆಂಗಿನಕಾಯಿ, ಕೊಬ್ಬರಿ ಮತ್ತು ಎಳನೀರು ಮಾರಾಟ ಮಾಡಿ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಯಾವುದಾದರೂ ಸರಿ ವರ್ಷಕ್ಕೆರಡು ಬೆಳೆ ತೆಗೆಯುವ ಪದ್ಧತಿ ಅನುಸರಿಸುತ್ತಿದ್ದಾರೆ. ದುಡ್ಡಿನ ಆಸೆಗೆ ಬಿದ್ದು ವಾರ್ಷಿಕವಾಗಿ ಮೂರ‌್ನಾಲ್ಕು ಬೆಳೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಕಮ್ಮಿಯಾಗಿ ಭವಿಷ್ಯದ ಕೃಷಿಗೆ ಮಾರಕವಾಗುವ ಬಗ್ಗೆ ಅರಿವು ಹೊಂದಿರುವುದರಿಂದ ಭೂಮಿಯ ಫಲವತತ್ತೆ ಬಗ್ಗೆ ನಿಗಾ ವಹಿಸುತ್ತಿದ್ದಾರೆ.

    ನೀರಾವರಿ ಸೌಲಭ್ಯ ಬೇಕು: ಹೋಬಳಿಯು ಕೃಷಿ ಪ್ರಧಾನವಾದ ಪ್ರದೇಶವಾಗಿರುವುದರಿಂದ ಮಳೆಯನ್ನೇ ನೆಚ್ಚಿಕೊಂಡು ರೈತರು ವ್ಯವಸಾಯ ಮಾಡುವುದು ದುಸ್ತರವಾಗುತ್ತಿದೆ. ಕೆರೆ-ಕಟ್ಟೆಗಳಲ್ಲಿ ನೀರಿದ್ದರೆ ಕೊಳವೆಬಾವಿ ಓಡುತ್ತದೆ. ಇಲ್ಲವಾದರೆ ಅನ್ನದಾತರ ಬದುಕು ಹೈರಾಣ. ಆಹಾರದಲ್ಲಿ ಅಕ್ಕಿ ಬಳಕೆಯನ್ನು ಇಷ್ಟಪಡದ ಗ್ರಾಮಾಂತರ ಪ್ರದೇಶದ ಸಣ್ಣ ಹಿಡುವಳಿದಾರರು ಇಂದಿಗೂ ವರ್ಷಕ್ಕೆ ಆಗುವಷ್ಟು ರಾಗಿ, ಜೋಳ ಬೆಳೆಯುತ್ತಾರೆ. ಇಂತಹ ಸಂಕಟದ ಸ್ಥಿತಿಯಲ್ಲೂ ಕೃಷ್ಣೇಗೌಡ, ಕಡಿಮೆ ನೀರನ್ನು ಬೇಡುವ ಜೋಳ ಮತ್ತು ಹತ್ತಿಯನ್ನು ಪರ್ಯಾಯ ಕೃಷಿ ಮಾದರಿಯಲ್ಲಿ ಬೆಳೆಯುತ್ತಿದ್ದಾರೆ.

    ಎರಡು ಎಕರೆ ಪ್ರದೇಶದಲ್ಲಿ ಹತ್ತಿ ಬೀಜ ಬಿತ್ತನೆ ಮಾಡಿದರೆ ಇಳುವರಿಗೆ ಒಂದು ವರ್ಷ ಕಾಯಬೇಕು. ಅಲ್ಲಿಯವರೆಗೆ ಯಾವ ಆದಾಯವೂ ಇರುವುದಿಲ್ಲ. ಹಾಗಾಗಿ, ಹೊಲದ ಬದಿಯಲ್ಲಿ ಚೆಂಡು, ಸೇವಂತಿಗೆ ಗಿಡಗಳನ್ನು ಬೆಳೆಸಿ ಪೋಷಿಸಿದ್ದಾರೆ. ಆಗಾಗ್ಗೆ ಇದನ್ನು ಕೊಯ್ದು, ಹಾರ, ಮಾಲಿಕೆ ರೀತಿ ಕಟ್ಟಿ ರಸ್ತೆ ಬದಿಯಲ್ಲಿ ಮಾರಾಟ ಮಾಡಿ ಜೀವನ ಸರಿದೂಗಿಸಿಕೊಳ್ಳುವ ಉಪಾಯವನ್ನು ಕಂಡುಕೊಂಡಿದ್ದಾರೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿರುವುದರಿಂದ ಕೃಷಿ ಕಾಯಕಕ್ಕೆ ಪತ್ನಿ ಮೋಹನಾಕುಮಾರಿ ಸಹಕಾರ ನೀಡುತ್ತಿದ್ದಾರೆ.

    ಧಾನ್ಯಗಳನ್ನು ಬೆಳೆಯುವುದು ಫಲವತ್ತತೆಗೆ ಪೂರಕ: ಹತ್ತಿ ಅಥವಾ ಜೋಳ ಬೆಳೆಯುವಾಗ ಅನ್ಯ ಬೆಳೆಗೆ ಅವಕಾಶ ಇರುವುದಿಲ್ಲ. ಟೊಮ್ಯಾಟೊ, ಬೀನ್ಸ್, ಕೋಸು ಮುಂತಾದ ತರಕಾರಿ ಕೃಷಿಯಲ್ಲಿ ದಿಢೀರ್ ಲಾಭ ಗಳಿಸುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ವಿಪರೀತ ನಷ್ಟವೂ ಆಗುತ್ತದೆ. ಇಂತಹ ಸಂದರ್ಭದಲ್ಲಿ ತರಕಾರಿಗಿಂತಲೂ ಬೇಳೆ ಕಾಳುಗಳನ್ನು ಬೆಳೆದು ಆದಾಯ ಪಡೆದುಕೊಳ್ಳುವ ಮಾರ್ಗವನ್ನು ಕೃಷ್ಣೇಗೌಡ ಅನುಸರಿಸುತ್ತಿದ್ದಾರೆ. ಪ್ರಸ್ತುತ ಜಮೀನಿನಲ್ಲಿ ಬಿತ್ತಿರುವ ಚಪ್ಪರದ ಅವರೆ ನೆಲದಲ್ಲಿ ಹರಡಿಕೊಳ್ಳುವುದರಿಂದ ಅದರ ಬಳ್ಳಿ, ಎಲೆಗಳು ಭೂಮಿಗೆ ಸೇರಿ ಸ್ವಾಭಾವಿಕವಾಗಿ ಪೋಷಕಾಂಶ ಉತ್ಪತ್ತಿಯಾಗುತ್ತದೆ.

    ಅವರೆಕಾಯಿ ಕಟಾವಾದ ಬಳಿಕವೂ ಬಳ್ಳಿಯು ಭೂಮಿಯಲ್ಲೇ ಕರಗುವಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಮುಂದಿನ ಬೆಳೆಗೆ ಗೊಬ್ಬರದ ರೀತಿಯಲ್ಲಿ ಸಹಾಯಕವಾಗುತ್ತಿದೆ. ವಾತಾವರಣ ಹಾಗೂ ಭೂಮಿಯಲ್ಲಿ ತೇವಾಂಶ ಕಡಿಮೆ ಇರುವ ತಿಂಗಳಲ್ಲಿ ಎಳ್ಳು, ಹುರುಳಿ, ಅಲಸಂದೆ ಮತ್ತು ತೊಗರಿಕಾಳು ಬೆಳೆಯುವ ಕೃಷಿಯಿಂದಲೂ ತಕ್ಕ ಮಟ್ಟಿಗೆ ಲಾಭ ಗಳಿಸುತ್ತಿದ್ದಾರೆ.

    ಮುಸುಕಿನ ಜೋಳವನ್ನು ಬಿತ್ತನೆ ಮಾಡಿದ ಬಳಿಕ ಕಟಾವು ಮಾಡಲು ನಾಲ್ಕು ತಿಂಗಳು ಬೇಕು. ಎಕರೆಗೆ 25 ರಿಂದ 30 ಸಾವಿರ ರೂ. ಖರ್ಚಾಗುತ್ತದೆ. ಕನಿಷ್ಠ 25 ಕ್ವಿಂಟಾಲ್ ಇಳುವರಿ ಬಂದರೆ ಈಗಿನ ದರದಂತೆ 50 ಸಾವಿರ ರೂ. ಗಳಿಸಬಹುದು. ದುರಾಸೆಗೆ ಬಿದ್ದು ವರ್ಷಕ್ಕೆ ಮೂರು ಬಾರಿ ಜೋಳ ಬೆಳೆಯುತ್ತೇವೆಂದು ಪ್ರಯತ್ನಿಸಿದರೆ ಇಳುವರಿ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ತಮ್ಮ ಜಮೀನಿನಲ್ಲಿ ತರಕಾರಿ ಬೆಳೆಯುವುದೂ ಕಷ್ಟ ಎನ್ನುತ್ತಾರೆ ಕೃಷ್ಣೇಗೌಡ.

    ಹತ್ತಿ, ಜೋಳದಂತಹ ವಾಣಿಜ್ಯ ಬೆಳೆಯನ್ನು ಕಟಾವು ಮಾಡಿದ ಬಳಿಕ ಕನಿಷ್ಠ ಒಂದು ತಿಂಗಳು ಭೂಮಿಯನ್ನು ಪೋಷಿಸಬೇಕಾಗುತ್ತದೆ. ಈ ವೇಳೆ ಮಳೆ ಬಂದರೆ ಭೂಮಿ ನೀರನ್ನು ಹೀರಿಕೊಳ್ಳಲು ಸಮಯ ಕೊಡಬೇಕು. ಕಳೆನಾಶಕ ಸಿಂಪಡಿಸುವ ಬದಲು ಟ್ರಾೃಕ್ಟರ್‌ನಿಂದ ಬೇಸಾಯ ಮಾಡಿಸಬೇಕು. ಎರಡು ತಿಂಗಳ ಬಳಿಕ ಬಿತ್ತನೆ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂಬ ಸಲಹೆ ಕೃಷ್ಣೇಗೌಡರದ್ದು.

    ವಾರ್ಷಿಕ 2 ಲಕ್ಷ ರೂ. ಆದಾಯವನ್ನು ಕೃಷಿಯಿಂದ ನಿರೀಕ್ಷೆ ಮಾಡುತ್ತೇವೆ. ಆದರೆ ಬಹಳಷ್ಟು ಬಾರಿ ನಷ್ಟವೇ ಆಗಿದೆ. ಬಂಡವಾಳ ಕಳೆದು ವರ್ಷಕ್ಕೆ 50 ಸಾವಿರ ರೂ. ಉಳಿತಾಯ ಮಾಡುವಷ್ಟರಲ್ಲಿ ಸುಸ್ತಾಗಿರುತ್ತೇವೆ. ಕೃಷಿಯಲ್ಲಿ ಆದಾಯವನ್ನು ಗಳಿಸುವುದು ಲಾಟರಿ ಹೊಡೆದಷ್ಟೇ ಅನಿರೀಕ್ಷಿತ. ಭೂಮಿ ತಾಯಿ ಎಂದಿಗೂ ಕೈ ಬಿಡುವುದಿಲ್ಲ ಎಂಬ ನಂಬಿಕೆಯಿಂದ ವ್ಯವಸಾಯ ಮಾಡುತ್ತಿದ್ದೇನೆ.
    ಕೃಷ್ಣೇಗೌಡ ರೈತ, ಹುಲಿಕೆರೆ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts