More

    ಗೋಣಿಕೊಪ್ಪದಲ್ಲಿ ರೈತರ ಪ್ರತಿಭಟನೆ

    ಗೋಣಿಕೊಪ್ಪ: ಸೆಸ್ಕ್ ಅಧಿಕಾರಿಗಳು ವಿದ್ಯುತ್ ನೀಡದೆ, ಬೆಳೆಗಾರರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿ, ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಗೋಣಿಕೊಪ್ಪದಲ್ಲಿ ಗುರುವಾರ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.


    ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ ಹಾಗೂ ಅಮ್ಮತ್ತಿ ಹೋಬಳಿಗಳ ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾಫಿ ಬೆಳೆಗೆ ಪಂಪ್‌ಸೆಟ್ ಮೂಲಕ ನೀರು ಹಾಯಿಸಬೇಕಿದೆ. ಆದರೆ, ಅದಕ್ಕೆ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಸೆಸ್ಕ್ ಅಧಿಕಾರಿಗಳು ಬೆಳೆಗಾರರ ಹಿತಾಸಕ್ತಿ ಕಾಪಾಡುವತ್ತ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಹರಿಶ್ಚಂದ್ರಪುರದಲ್ಲಿರುವ ರೈತ ಸಂಘದ ಕಚೇರಿಯಿಂದ ಸೆಸ್ಕ್ ಕಚೇರಿವರೆಗೆ ಮೆರವಣಿಗೆ ಮೂಲಕ ರೈತರು ಆಗಮಿಸಿದರು. ನಂತರ ಒಂದೂವರೆ ಗಂಟೆ ಕಾಲ ಪೊನ್ನಂಪೇಟೆ-ಗೋಣಿಕೊಪ್ಪ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು.


    ಏಕಬೆಳೆ ಕಾಫಿಯನ್ನು ನಂಬಿ ಜೀವಿಸುತ್ತಿದ್ದೇವೆ. ಕೊಡಗಿನ ಪ್ರತಿಯೊಂದು ಆರ್ಥಿಕ ವ್ಯವಸ್ಥೆ ಬೆಳೆಗಾರರನ್ನು ಅವಲಂಭಿಸಿದೆ. ಆದ್ದರಿಂದ ಸೂಕ್ತ ಪರಿಹಾರದ ಭರವಸೆ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಬಳಿಕ ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.

    ವಿವಿಧ ಆರೋಪ: ಬಾಳೆಲೆ ವ್ಯಾಪ್ತಿಯ ಸೆಸ್ಕ್ ಜೆಇ ಹಣ ನೀಡುವವರ ಕರೆ ಮಾತ್ರ ಸ್ವೀಕರಿಸುತ್ತಾರೆ. ಬೆಳೆಗಾರರ ಸಮಸ್ಯೆ ಅವರಿಗೆ ಬೇಕಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
    ಅಧಿಕಾರಿಗಳು ಬೆಳೆಗಾರರ ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸುತ್ತಿಲ್ಲ. ಗೋಣಿಕೊಪ್ಪ ಎಇಇ ಸಮಸ್ಯೆಗೆ ಹೆಚ್ಚು ಕಾರಣವಾಗುತ್ತಿದ್ದಾರೆ. 32 ವರ್ಷಗಳಿಂದ ಇವರು ಜಿಲ್ಲೆಯಲ್ಲಿಯೇ ಮುಂದುವರಿದಿರುವುದು ತೊಡಕಾಗಿ ಪರಿಣಮಿಸಿದೆ. ಸಂಜೆಯಾಗುತ್ತಲೇ ಲೈನ್‌ಮನ್‌ಗಳ ಜತೆ ಜೆಇ ವರ್ಗದ ಅಧಿಕಾರಿಗಳು ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ, ಸಮಸ್ಯೆ ಆಲಿಸುವವರಿಲ್ಲ. ಬೆಳೆಗಾರರ ಮೊಬೈಲ್ ಕರೆ ಸ್ವೀಕರಿಸುವುದಿಲ್ಲ ಎಂದು ಪ್ರತಿಭಟನಾಕಾರರು ಹಿರಿಯ ಅಧಿಕಾರಿಗಳಿಗೆ ದೂರಿದರು.

    22 ಗಂಟೆ ವಿದ್ಯುತ್ ನೀಡುವ ಭರವಸೆ: ಶುಕ್ರವಾರದಿಂದ ದಿನದ 22 ಗಂಟೆ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಸೆಸ್ಕ್ ಮೈಸೂರು-ಚಾಮರಾಜನಗರ ವಿಭಾಗದ ಮುಖ್ಯ ಇಂಜಿನಿಯರ್ ಜಿ.ಎಲ್. ಚಂದ್ರಶೇಖರ್ ಭರವಸೆ ನೀಡಿದರು.
    24 ಗಂಟೆ ವಿದ್ಯುತ್ ನೀಡಲು ಸಾಧ್ಯವಿಲ್ಲ. 2 ಗಂಟೆ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಅವರು ಪ್ರತಿಭಟನಾಕಾರರಿಗೆ ಸ್ಪಷ್ಟಪಡಿಸಿದರು. ವೋಲ್ಟೇಜ್ ಸಮಸ್ಯೆ ಪರಿಹಾರ ಸದ್ಯಕ್ಕೆ ಕಷ್ಟಸಾಧ್ಯ. ವಿದ್ಯುತ್ ಬಳಕೆ ಹೆಚ್ಚಾದಾಗ ನಿಯಂತ್ರಣದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ನಿಗದಿತ ಮಿತಿಗೆ ಅನುಸಾರವಾಗಿ ವಿದ್ಯುತ್ ಹರಿಯದೆ ಡ್ರಾಪ್ ಆಗುತ್ತಿದೆ. 11 ಕೆ.ವಿ. ವಿದ್ಯುತ್ ಮಾರ್ಗ 9.5 ಕೆ.ವಿ.ಗೆ ಇಳಿಯುತ್ತಿದೆ ಎಂದು ತಿಳಿಸಿದರು.
    ಹುಣಸೂರು 120 ಕೆ.ವಿ. ಘಟಕ ಮೇಲ್ದರ್ಜೆಗೇರಬೇಕಿದೆ. ಇದಕ್ಕೆ ಒಂದಷ್ಟು ವರ್ಷಗಳು ಬೇಕಾಗಬಹುದು. ಅನುದಾನ ಕೊರತೆ ನೀಗಿಸಲು ಸೆಸ್ಕ್ ಎಂ.ಡಿ. ಮೂಲಕ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
    ಗೋಣಿಕೊಪ್ಪ ಉಪ ವಿಭಾಗದ ಎಇಇ ಬದಲಾವಣೆ ಮಾಡುವಂತೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ವಾರದೊಳಗೆ ಸಮಸ್ಯೆ ಪರಿಹಾರ ಕಾಣದಿದ್ದಲ್ಲಿ ಮತ್ತೆ ಬಂದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
    ಸೆಸ್ಕ್ ಮೈಸೂರು-ಚಾಮರಾಜನಗರ ವಿಭಾಗದ ಅಧೀಕ್ಷಕ ಮಹಾದೇವಸ್ವಾಮಿ ಪ್ರಸನ್ನ, ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಸೋಮಶೇಖರ್, ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಮಹಾದೇವ್, ಎಇಇಗಳಾದ ಅಂಕಯ್ಯ, ಸುರೇಶ್ ಹಾಜರಿದ್ದರು.
    ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಶ್, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸುವ ಸಲುವಾಗಿ 10 ನಿಮಿಷ ರಸ್ತೆ ತಡೆ ತೆರವು ಮಾಡಿಕೊಡಬೇಕೆಂಬ ಪೊಲೀಸ್ ಅಧಿಕಾರಿಗಳ ಮನವಿಯನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಪ್ರತಿಭಟನಾಕಾರರ ಗಮನಕ್ಕೆ ತಂದರು. ಆದರೆ, ರೈತರು ಅದಕ್ಕೆ ಒಪ್ಪದೆ ಪ್ರತಿಭಟನೆ ಮುಂದುವರಿಸಿದರು. ಪ್ರತಿಭಟನೆ ಸಂದರ್ಭ ಬಂದ ಆಂಬುಲೆನ್ಸ್‌ಗೆ ಮಾತ್ರ ದಾರಿ ಮಾಡಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts