More

    ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’

    ಬೆಂಗಳೂರು: ಇನ್ನೂ ಎರಡೂ ಮುಕ್ಕಾಲು ತಿಂಗಳು ಕಳೆದರೆ ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗಿ 50ನೇ ವರ್ಷಕ್ಕೆ ಪದಾರ್ಪಣೆಯಾಗಲಿದೆ. ನಾಡು-ನುಡಿ ಅಸ್ಮಿತೆಯ ಪ್ರತೀಕವಾಗಿ ಮೈತಳೆದ ಹೆಸರು ಕನ್ನಡಿಗರಿಗೆ ಅಚ್ಚಹಸುರು. ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ೋಷವಾಕ್ಯದಡಿ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.

    ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ ಬೆಂಗಳೂರು ವಿಭಾಗದ ಪೂರ್ವಭಾವಿ ಸಭೆ ಬುಧವಾರ ನಡೆಯಿತು.
    ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು, ಸಾಧಕರು, ಪ್ರಮುಖರು ಪಾಲ್ಗೊಂಡು ತಮ್ಮದೇ ಆದ ಮೌಖಿಕ, ಲಿಖಿತ ಅಭಿಪ್ರಾಯಗಳನ್ನು ನೀಡಿದ್ದಾರೆ. ಮೈಮನದಲ್ಲಿ ಕನ್ನಡ ಕುಣಿದರೆ ಸಾಲದು, ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗುವುದಕ್ಕೆ ಕಾರ್ಯಕ್ರಮ ಪ್ರೇರಣಾಶಕ್ತಿಯಾಗಬೇಕು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

    ತಿಂಗಳಾಂತ್ಯಕ್ಕೆ ಅಂತಿಮ ಸ್ಪರ್ಶ

    ಸಭೆಯ ನಂತರ ಶಿವರಾಜ್ ತಂಗಡಗಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ವೆಂದು ಮರು ನಾಮಕರಣವಾಗಿ 2023ರ ನವೆಂಬರ್ 1ಕ್ಕೆ 50 ವರ್ಷಗಳಾಗಲಿವೆ. ಈ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಬಜೆಟ್‌ನಲ್ಲಿ ೋಷಿಸಿದಂತೆ ‘ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ೋಷವಾಕ್ಯದಡಿ ರಾಜ್ಯಾದ್ಯಂತ ವರ್ಷಪೂರ್ತಿ ನಾಮಕರಣ ಸುವರ್ಣ ಮಹೋತ್ಸವ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

    ಪೂರ್ವಭಾವಿಯಾಗಿ ಬೆಂಗಳೂರು ವಿಭಾಗದ ಸಾಹಿತಿಗಳು, ಕಲಾವಿದರು, ಗಣ್ಯರು, ಸಾಧಕರ ಸಭೆ ಕರೆದು ಚರ್ಚಿಸಿರುವೆ. ಆ.22ಕ್ಕೆ ಬೆಳಗಾವಿ, 25ಕ್ಕೆ ಮೈಸೂರು ಮತ್ತು 28ಕ್ಕೆ ಕಲಬುರಗಿ ವಿಭಾಗದ ಸಭೆ ಆಯೋಜಿಸಲು ತೀರ್ಮಾನಿಸಿದ್ದು, ಕಾಲಾವಕಾಶ ಕೊರತೆಯ ಕಾರಣಕ್ಕೆ ಲಿಖಿತವಾಗಿ ಅನಿಸಿಕೆ, ಸಲಹೆ-ಸೂಚನೆಗಳನ್ನು ತಿಳಿಸಲು ಕೋರಲಾಗಿದೆ ಎಂದರು.

    ನಾಲ್ಕು ವಿಭಾಗಗಳ ಸಭೆಯ ನಂತರ ಶಿಕ್ಷಣ, ಪ್ರವಾಸೋದ್ಯಮ ಮತ್ತಿತರ ಸಚಿವರೊಂದಿಗೆ ಸಮಾಲೋಚಿಸುವೆ. ಕೊನೆಯದಾಗಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಆಗಸ್ಟ್ ಅಂತ್ಯದೊಳಗೆ ಕಾರ್ಯಕ್ರಮದ ರೂಪರೇಷೆಗೆ ಅಂತಿಮ ಸ್ಪರ್ಶ ನೀಡಲಾಗುವುದು. ಅರ್ಥಪೂರ್ಣ ಕಾರ್ಯಕ್ರಮ ಅಚ್ಚುಕಟ್ಟಾಗಿ ರೂಪಿಸಲೆಂದು ಸಮಿತಿ ರಚಿಸುವ ಉದ್ದೇಶವಿದ್ದು, ಇಲಾಖೆ ಅಧಿಕಾರಿಗಳ ಜತೆಗೆ ವಿವಿಧ ಕ್ಷೇತ್ರಗಳ ಪ್ರಮುಖರು ಈ ಸಮಿತಿಯಲ್ಲಿರಲಿದ್ದಾರೆ ಎಂದು ತಿಳಿಸಿದರು.

    ನಾಡದೇವಿ ಕಂಚಿನ ವಿಗ್ರಹ

    ನಾಡದೇವಿ ಭುವನೇಶ್ವರಿಯ ಕುಳಿತ ಭಂಗಿಯಲ್ಲಿರುವ ಕಂಚಿನ ವಿಗ್ರಹವನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಹತ್ತಿರ ನಾಡದೇವಿ ವಿಗ್ರಹ ಪ್ರತಿಷ್ಠಾಪಿಸಲಾಗುತ್ತಿದೆ. ಕಂಚಿನ ವಿಗ್ರಹ ತಯಾರಿಗೆ ಮೂರು ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಕಾದಿರಿಸಿದ್ದು, ಕನ್ನಡ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುದಾನದ ಕೊರತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts