More

    ಕೃಷ್ಣನಿಗೆ ಸುವರ್ಣ ರಥ, ಸುವರ್ಣ ಸನ್ಯಾಸ ಸ್ಮರಣೆಗಾಗಿ ಕೊಡುಗೆ, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾಹಿತಿ

    ಉಡುಪಿ: ಸುವರ್ಣ ಸನ್ಯಾಸ ಸ್ಮರಣೆಗಾಗಿ ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ದಲ್ಲಿ ಬಂಗಾರದ ರಥ ಸಮರ್ಪಿಸಲು ಉದ್ದೇಶಿಸಲಾಗಿದೆ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾಹಿತಿ ನೀಡಿದರು.
    ರಥಬೀದಿ ಪುತ್ತಿಗೆ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಪರ್ಯಾಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಗುರುಗಳಾದ ವಿದ್ಯಾಮಾನ್ಯ ತೀರ್ಥರು ಸಮರ್ಪಿಸಿದ ಚಿನ್ನದ ರಥ ರಥಬೀದಿಯಲ್ಲಿ ಸಾಗಿದರೆ ಪಾರ್ಥ ಸಾರಥಿಯ ರಥ ಕೃಷ್ಣ ಮಠದೊಳಗೆ ಸಂಚರಿಸಲಿದೆ ಎಂದರು.
    ಮುಂದಿನ ಪರ್ಯಾಯ ವಿಶ್ವ ಗೀತಾ ಪರ್ಯಾಯ. ಜಗತ್ತಿನಾದ್ಯಂತ ಭಕ್ತರು ಭಗವದ್ಗೀತೆ ಬರೆದು ಕೃಷ್ಣನಿಗೆ ಸಮರ್ಪಣೆ ಮಾಡಲಿದ್ದಾರೆ. ಉಡುಪಿ ಕ್ಷೇತ್ರ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಈ ನಿಟ್ಟಿನಲ್ಲಿ ಪರ್ಯಾಯ ಸಂದರ್ಭದಲ್ಲಿ ಬರುವ ಭಕ್ತರಿಗೆ ಸೂಕ್ತವ್ಯವಸ್ಥೆ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಜನರು ಧಾರ್ಮಿಕತೆಯಿಂದ ವಿಮುಖರಾಗುತ್ತಿರುವುದು ಎಲ್ಲ ಅನಾಹುತಗಳಿಗೆ ಮುಖ್ಯ ಕಾರಣವಾಗಿದೆ. ಅರ್ಥಿಕ ಜಾಗತೀಕರಣದ ಜತೆಗೆ ಪಾರಮಾರ್ಥಿಕ ಜಾಗತೀಕರಣವೂ ಆಗಬೇಕು. ಎಲ್ಲರೂ ಅಧ್ಯಾತ್ಮದ ಹಾದಿಯಲ್ಲಿ ಸಾಗಿದರೆ ವಿಶ್ವದಲ್ಲಿ ಶಾಂತಿ, ಸುಖ ನೆಲೆಸಲಿದೆ ಎಂದರು.

    ಪಂಚ ಪ್ರಧಾನ ಯೋಜನೆ:
    ಕೃಷ್ಣನಿಗೆ ಕೋಟಿ ಗೀತಾ ಲೇಖನ ಸಮರ್ಪಣೆ, ಕಲ್ಸಂಕದಲ್ಲಿ ಕೃಷ್ಣನನ್ನು ಹಿಡಿದಿರುವ ಮಧ್ವಾಚಾರ್ಯರ ಪ್ರತಿಮೆ ಸಹಿತ ಸ್ವಾಗತಗೋಪುರ ನಿರ್ಮಾಣ, ಅಂತಾರಾಷ್ಟ್ರಿಯ ಭಗವದ್ಗೀತಾ ಸಮ್ಮೇಳನ, ಪ್ರತಿನಿತ್ಯ ಸೂರ್ಯೋದಯದಿಂದ ಅಸ್ತದವರೆಗೆ ಗೀತಾ ಪಾರಾಯಣ, 200 ಕೊಠಡಿಗಳ ವಸತಿಗೃಹ ನಿರ್ಮಾಣ ಸಹಿತ ಪಂಚ ಪ್ರಧಾನ ಯೋಜನೆ ರೂಪಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.
    ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ, ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಮಾಜಿ ಶಾಸಕ ರಘುಪತಿ ಭಟ್, ಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳವು ಉಪಸ್ಥಿತರಿದ್ದರು. ಪ್ರಸನ್ನ ಆಚಾರ್ಯ ಸ್ವಾಗತಿಸಿದರು. ಗೋಪಾಲಾಚಾರ್ಯ ಪ್ರಸ್ತಾವನೆ ಮಾಡಿದರು. ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಆಚಾರ್ಯ ವಂದಿಸಿದರು.
    ಪರ್ಯಾಯ ಸ್ವಾಗತ ಸಮಿತಿ ಘೋಷಣೆ
    ಶ್ರೀಗಳು ಇದೇ ವೇಳೆ ಜ.18, 2024ಕ್ಕೆ ನಡೆಯುವ ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿ ಘೋಷಿಸಿದರು. ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಅಧ್ಯಕ್ಷರಾಗಿ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಕಾರ್ಯಾಧ್ಯಕ್ಷರಾಗಿ ರಘುಪತಿ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಶೆಟ್ಟಿ ಬೆಳವು ಅವರನ್ನು ಆಯ್ಕೆ ಮಾಡಲಾಗಿದೆ. ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ ಮಾರ್ಗದರ್ಶಕರಾಗಿದ್ದು, ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದ ಸಮಿತಿ ರಚಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts