More

    ಕಲಾವಿದೆ ಬಿ.ಜಯಶ್ರೀ ರಂಗಸ್ಪಂದನಕ್ಕೆ ಸುವರ್ಣ ಸಂಭ್ರಮ

    ಪತಿ ಆನಂದರಾಜು ಅಡಿಪಾಯ | ಕನ್ನಡದ ಮಹತ್ವದ ಕಥಾವಸ್ತುಗಳನ್ನಾಧರಿಸಿ ರಂಗ ಪ್ರಸ್ತುತಿ

    | ಪ್ರಜ್ವಲ್ ಬಿ.ಎಂ.

    ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಿರುವ ಕಂಚಿನ ಕಂಠದ ಗಾಯಕಿ ಎಂದಾಕ್ಷಣ ನೆನಪಾಗುವ ಹೆಸರು ಬಿ. ಜಯಶ್ರೀ ಅವರದ್ದು. ಗುಬ್ಬಿ ವೀರಣ್ಣ ಮೊಮ್ಮಗಳಾದ ಅವರು ನಟಿ, ನಿರ್ದೇಶಕಿ, ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡವರು. ಪ್ರಸ್ತುತ ಸೃಜನಾತ್ಮಕ ನಿರ್ದೇಶಕರಾಗಿ ‘ಸ್ಪಂದನ’ ರಂಗಭೂಮಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜಯಶ್ರೀ ಪತಿ ಆನಂದರಾಜು ಹಾಗೂ ರಾಣಿರಾವ್, ಡಿ.ಆರ್. ಶಶಿಧರ್, ಸತ್ಯಾನಂದ ಅವರಿಂದ ಜನ್ಮ ತಳೆದ ‘ಸ್ಪಂದನ’ ತಂಡಕ್ಕೀಗ ಐವತ್ತರ ಸಡಗರ. ‘ಸ್ಪಂದನ’ಕ್ಕೆ ಆನಂದರಾಜು ಅಡಿಪಾಯ ವಾದರೆ 1976ರಲ್ಲಿ ‘ಸ್ಪಂದನ’ ತಂಡ ಸೇರಿದ ಬಿ. ಜಯಶ್ರೀ ಅದರ ಬೆಳವಣಿಗೆಗೆ ನೀರೆರೆದರು.

    ‘ಸ್ಪಂದನ’ದ ಜನುಮದ ಹಿಂದೆ: ರಂಗ ತಂಡ ಮೊದಲು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಇಂಗ್ಲಿಷ್ ನಾಟಕದ ಮೂಲಕ ಲಗ್ಗೆ ಇಟ್ಟಿತು. ಆದರೆ ಇಲ್ಲಿ ಇಂಗ್ಲಿಷ್ ಥಿಯೇಟರ್ ನಾಟಕ ಸಾಧ್ಯ ವಿಲ್ಲ ಎಂಬುದು ಮನದಟ್ಟಾಯಿತು. ಆಗ ಹುಟ್ಟಿದ್ದೇ ಸ್ಪಂದನ ತಂಡ. ಕನ್ನಡಿಗರ ಮನ ಗೆಲ್ಲಲು ಶ್ರೀರಂಗರ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಕೃತಿಯನ್ನು ಆಯ್ದುಕೊಂಡು ಕನ್ನಡ ನಾಟಕ ಪ್ರದರ್ಶಿಸಲಾಯಿತು.

    nataka

    ಆನಂದ್ ಅವರು ವೃತ್ತಿಯಲ್ಲಿ ಇಂಜಿನಿಯರಾಗಿ ಎನ್​ಜಿಇಎಫ್ ನಿಂದ ನಿವೃತ್ತಿ ಹೊಂದಿದ್ದರು. ಚದುರಂಗ ಅವರ ‘ವ್ಯವಸ್ಥೆ’ ಎಂಬ ನಾಟಕದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಸ್ಪಂದನದ ಎಲ್ಲ ನಾಟಕಗಳಿಗೆ ಬೆಳಕಿನ ತಂತ್ರಜ್ಞರಾಗಿ ಇಂದಿಗೂ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂಡಕ್ಕೆ ಬೆನ್ನೆಲುಬಾಗಿ ಗುರುಮೂರ್ತಿ, ರಮೇಶ್ ಪಂಡಿತ್, ಶ್ರೀನಿವಾಸ್ ಮೇಷ್ಟ್ರು, ಜಿ.ವಿ ಮಾಲತಮ್ಮ, ಸ್ವರ್ಣಮ್ಮ, ಮೀರಾ ಕುಡುವಳ್ಳಿ, ಬಿ.ವಿ. ರಾಜಾರಾಂ, ರೋಹಿಣಿ, ದಯಾನಂದ್, ರಮೇಶ್ ಕೆ. ಸಲಗುಂದಿ, ಸರ್ವೆಶ್ವರ ರಾವ್, ಅರವಿಂದ್, ಲೋಕೇಶ್ ಆಚಾರ್ಯ ಮತ್ತಿತರರು ನಿಂತರು.

    ಲಕ್ಷ್ಮೀಪತಿರಾಜನ ಕಥೆ, ಕರಿಮಾಯಿ, ಅಗ್ನಿಪಥ, ಸಿರಿಸಂಪಿಗೆ- ಮುಂತಾದ ಅತ್ಯುತ್ತಮ ನಿರ್ವಣಗಳ ಮೂಲಕ ‘ಸ್ಪಂದನ’ ಗಳಿಸಿದೆ. ಉರಿಯ ಉಯ್ಯಾಲೆ, ಚಿತ್ರಪಟ, ಗಿರಿಜಾ ಕಲ್ಯಾಣ, ಸದಾರಮೆ- ಮತ್ತಿತರ ಶ್ರೀಮಂತ ಮತ್ತು ವೈವಿಧ್ಯಮಯ ಜನಪದ ಕಲಾಪ್ರಕಾರಗಳ ದಾಖಲೀಕರಣ ಮತ್ತು ಪ್ರಯೋಗಕ್ಕಾಗಿ

    ತಂಡವು ನಡೆಸಿದ ವ್ಯಾಪಕ ಸಂಶೋಧನೆಯು ರಂಗಭೂಮಿ ಕ್ಷೇತ್ರಕ್ಕೆ ಕೊಡುಗೆ ನೀಡಿದೆ. ಕಾದಂಬರಿ, ಸಣ್ಣ ಕಥೆ, ಜಾನಪದ ಕಥೆಗಳು, ರೂಪಾಂತರ ಕಥೆಗಳು, ಇತ್ತೀಚಿನ ಪಾರಿಜಾತ ನಾಟಕ ಮುಂತಾದ ವಿಶಿಷ್ಟ ಪ್ರಯೋಗಗಳನ್ನು ರಂಗದಲ್ಲಿ ಪ್ರಸ್ತುತಪಡಿಸುತ್ತಿರುವ ‘ಸ್ಪಂದನ’, ರಂಗಭೂಮಿ ಪ್ರೇಮಿಗಳು ಮತ್ತು ವಿಮರ್ಶಕರಿಗೆ ಅದರ ಸೌಂದರ್ಯ ಮತ್ತು ನಿರ್ಮಾಣ ಮೌಲ್ಯಗಳನ್ನು ನೆನಪಿಟ್ಟುಕೊಳ್ಳಲು ನಾಟಕಗಳ ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದೆ.

    ನಾಟಕೋತ್ಸವ ಇಂದಿನಿಂದ: ‘ಸ್ಪಂದನ’ದ ಸುವರ್ಣ ಮಹೋತ್ಸವದ ಅಂಗವಾಗಿ ಇದೇ ತಿಂಗಳು 16ರಿಂದ 21ರವರೆಗೆ ಜೆ.ಪಿ. ನಗರ 2ನೇ ಹಂತದಲ್ಲಿರುವ ರಂಗಶಂಕರದಲ್ಲಿ ನಾಟಕೋತ್ಸವ ಆಯೋಜಿಸಿದೆ. 6, 17 ‘ಕರಿಮಾಯಿ’, 18 ಮತ್ತು 19ರಂದು ‘ಪಾರಿಜಾತ’, 20ರಂದು ‘ಸದಾರಮೆ’ (ಮಧ್ಯಾಹ್ನ 3.30ಕ್ಕೂ ಪ್ರದರ್ಶನವಿದೆ) ಹಾಗೂ 21 ‘ಲಕ್ಷಪತಿ ರಾಜನ ಕಥೆ’ ನಾಟಕಗಳನ್ನು ವೇದಿಕೆ ಮೇಲೆ ಪ್ರಸ್ತುತಪಡಿಸಲಾಗುವುದು.

    ಕಲಾವಿದೆ ಬಿ.ಜಯಶ್ರೀ ರಂಗಸ್ಪಂದನಕ್ಕೆ ಸುವರ್ಣ ಸಂಭ್ರಮ ಬಿ. ಜಯಶ್ರೀ ಎಂಬ ಶಕ್ತಿ

    ಬಿ. ಜಯಶ್ರೀ ನಾಲ್ಕು ವರ್ಷದ ಮಗುವಿದ್ದಾಗಲೇ ಬಣ್ಣದ ಲೋಕ ಪ್ರವೇಶಿಸಿದವರು 69 ವರ್ಷಗಳಿಂದ ಸಕ್ರಿಯವಾಗಿದ್ದಾರೆ. 1973ರಲ್ಲಿ ದೆಹಲಿಯ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ (ಎನ್​ಎಸ್​ಡಿ) ಪದವೀಧರರಾಗಿ, ಸುಮಾರು ಹಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿ, ನೂರಾರು ಚಿತ್ರಗಳಲ್ಲಿ ಕಂಠದಾನ ಕಲಾವಿದರಾಗಿದ್ದಾರೆ. ಅವರಿಗೆ ಉತ್ತರ ಪ್ರದೇಶದ ಸಂಗೀತ ನಾಟಕ ಅಕಾಡೆಮಿಯ ಸಪ್ತ ಹಷ್ಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಬಿ. ವಿ. ಕಾರಂತ ಸ್ಮೃತಿ ಪುರಸ್ಕಾರ, 2011ರ ಅಬುಧಾಬಿ ಮಾಹೋತ್ಸವದಲ್ಲಿ ಇವರ ನಟನೆಯ ‘ಸೌತ್ ಆಫ್ರಿಕಾ’ ಚಿತ್ರಕ್ಕೆ ಬ್ಲ್ಯಾಕ್ ಪರ್ಲ್ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಇಡೀ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಈ ಪ್ರಶಸ್ತಿಯನ್ನು ಭಾರತಕ್ಕೆ ತಂದುಕೊಟ್ಟ ಹೆಗ್ಗಳಿಕೆ ಜಯಶ್ರೀ ಅವರದ್ದು. 2009ರಲ್ಲಿ ರಾಜ್ಯ ಮುಕ್ತ ವಿವಿಯಿಂದ ಗೌರವ ಡಾಕ್ಟರೇಟ್​ಗೆ ಭಾಜನರಾದ ಬಿ. ಜಯಶ್ರೀ, 2010ರಲ್ಲಿ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾದರು. 2013ರಲ್ಲಿ ‘ಪದ್ಮಶ್ರೀ’ ಪುರಸ್ಕೃತರಾದರು.

    ನಟ ಶಿವರಾಜ್​ಕುಮಾರ್​ ಆಸ್ತಿ ಮೊತ್ತ ಇಷ್ಟೊಂದಾ? ಸ್ಟಾರ್ ನಟನ ಆಸ್ತಿ ಮೌಲ್ಯ, ಸಾಲದ ಬಗ್ಗೆ ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts