More

    ಭಾರತ್ ಬಂದ್; ಭದ್ರತೆಗೆ ಕೇಂದ್ರ ಸೂಚನೆ, ಧರಣಿ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

    ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಸುಧಾರಣೆ ಕಾನೂನಿನ ವಿರುದ್ಧ ಸಮರ ಸಾರಿರುವ ರೈತ ಸಂಘಟನೆಗಳು ಮಂಗಳವಾರ ಕರೆ ನೀಡಿರುವ ಬಂದ್​ಗೆ ರಾಜಕೀಯ ಪಕ್ಷಗಳು ಮತ್ತು ಕಾರ್ವಿುಕ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಕರೊನಾ ಮಹಾಮಾರಿ ಹರಡದಂತೆ ದೈಹಿಕ ಅಂತರ ಸೇರಿ ಎಲ್ಲಾ ಅಗತ್ಯ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

    ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿ ಭಾಗಗಳಲ್ಲಿ ಕಳೆದ 12 ದಿನಗಳಿಂದ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಐದು ಸುತ್ತಿನ ಮಾತುಕತೆಗಳೂ ಫಲಕೊಟ್ಟಿಲ್ಲ. ಈ ನಿಟ್ಟಿನಲ್ಲಿ ಪ್ರತಿಭಟನೆ ತೀವ್ರಗೊಳಿಸಿರುವ ರೈತ ಸಂಘಟನೆಗಳು 8ರಂದು ಭಾರತ ಬಂದ್ ನಡೆಸುವುದಾಗಿ ತೀರ್ಮಾನ ಕೈಗೊಂಡಿದ್ದವು. ಕಾಂಗ್ರೆಸ್, ಟಿಎಂಸಿ, ಟಿಆರ್​ಎಸ್, ಡಿಎಂಕೆ, ಆರ್​ಜೆಡಿ, ಎಸ್​ಪಿ, ಬಿಎಸ್​ಪಿ, ಎಡಪಕ್ಷಗಳು ಸೇರಿದಂತೆ ಸುಮಾರು 20 ರಾಜಕೀಯ ಪಕ್ಷಗಳು ರೈತ ಸಂಘಟನೆಗಳ ಭಾರತ ಬಂದ್​ಗೆ ಬೆಂಬಲ ಘೊಷಿಸಿದ್ದು, ಈ ಹೋರಾಟ ರಾಜಕೀಯ ತಿರುವನ್ನೂ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಬಂದ್ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ನಡೆಯುವ ಸಾಧ್ಯತೆಯಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಆದರೆ, ನಾವು ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷಗಳ ಮುಖಂಡರನ್ನು ಪ್ರತಿಭಟನೆಯ ವೇದಿಕೆಗೆ ಹತ್ತಿಸುವುದಿಲ್ಲ ಎಂದು ರೈತ ನಾಯಕ ಡಾ. ದರ್ಶನ್ ಪಾಲ್ ಸ್ಪಷ್ಟಪಡಿಸಿದ್ದಾರೆ.

    ಏತನ್ಮಧ್ಯೆ, ಕೇಂದ್ರ ಸರ್ಕಾರಕ್ಕೂ ರೈತ ಪರ ಇಮೇಜ್ ಉಳಿಸಿಕೊಳ್ಳುವ ಅನಿವಾರ್ಯತೆಯಿದ್ದು, ಬಂದ್ ಬಳಿಕದ ಮಾರನೇ ದಿನ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ 6ನೇ ಸುತ್ತಿನ ಮಾತುಕತೆಯಲ್ಲಿ ರೈತರ ಮನವೊಲಿಸಲು ಕೇಂದ್ರ ಸಚಿವರು ಯಶಸ್ವಿಯಾಗುತ್ತಾರಾ ಎಂಬ ಕುತೂಹಲವೂ ಮೂಡಿದೆ. ರೈತರ ಪ್ರತಿಭಟನೆಗೆ ಮೊದಲ ದಿನದಿಂದಲೂ ಬೆಂಬಲಿಸುತ್ತಾ ಬಂದಿರುವ ದೆಹಲಿಯ ಆಮ್ ಆದ್ಮಿ ಪಕ್ಷದ ಮುಖಂಡ, ಸಿಎಂ ಅರವಿಂದ ಕೇಜ್ರಿವಾಲ್ ಸೋಮವಾರ ದೆಹಲಿಯ ಸಿಂಘು ಗಡಿ ಭಾಗಕ್ಕೆ ತೆರಳಿ ರೈತರನ್ನು ಭೇಟಿ ಮಾಡಿದ್ದಾರೆ.

    ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಶಾಂತಿಯುತ ಬಂದ್ ನಡೆಯಲಿದೆ. ಅಂಗಡಿಗಳನ್ನು ಮುಚ್ಚುವಂತೆ ಯಾರಿಗೂ ಬಲವಂತ ಮಾಡುವುದಿಲ್ಲ.

    | ಬಲಬೀರ್ ಸಿಂಗ್ ರಾಜೆವಾಲ್ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ

    ಲಖನೌದಲ್ಲಿ ಅಖಿಲೇಶ್ ಬಂಧನ

    ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಬೆಂಬಲಿಸಿ ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ ಧರಣಿ ಕೂತ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೋಲೀಸರು ಅವರನ್ನು ಸೋಮವಾರ ಬಂಧಿಸಿದ್ದರು. ಲಖನೌದ ವಿಕ್ರಮಾದಿತ್ಯ ಮಾರ್ಗದಿಂದ ಆರಂಭಗೊಂಡು ಪಕ್ಷದ ಪ್ರಧಾನ ಕಚೇರಿವರೆಗೆ 13 ಕಿಲೋಮೀಟರ್ ಉದ್ದದ ಕಿಸಾನ್ ಯಾತ್ರೆಗೆ ಕರೆಕೊಟ್ಟಿದ ಅಖಿಲೇಶ್, ಯಾತ್ರೆ ಆರಂಭಿಸಿದ ವೇಳೆಯೇ ಬಂಧನಕ್ಕೊಳಗಾದರು. ಈ ಯಾತ್ರೆಗೆ ಕನೌಜ್ ಜಿಲ್ಲಾಧಿಕಾರಿ ಅನುಮತಿ ನೀಡಿರಲಿಲ್ಲ.

    ವಿಪಕ್ಷಗಳ ಬಣ್ಣ ಬಯಲು, ಬಿಜೆಪಿ ತಿರುಗೇಟು

    ಕೃಷಿ ಸುಧಾರಣಾ ಕಾನೂನುಗಳು ರದ್ದಾಗಬೇಕು ಎನ್ನುತ್ತಿರುವ ವಿಪಕ್ಷಗಳು, ಈ ಹಿಂದೆ ಎಪಿಎಂಸಿ ಕಾಯ್ದೆ ರದ್ದತಿಗೆ ಸುಧಾರಣಾ ಕಾನೂನು ಜಾರಿ ಮಾಡಬೇಕು ಎಂದಿದ್ದವು. ಅವರ ಮಾತಿನಂತೆಯೇ, ಎನ್​ಡಿಎ ಸರ್ಕಾರ ಹೊಸ ಸುಧಾರಣಾ ಕಾನೂನನ್ನು ಜಾರಿಗೆ ತಂದಿದೆ. ಆದರೆ, ಇದೇ ಪಕ್ಷಗಳು ಈಗ ಕಾನೂನಿನ ವಿರುದ್ಧ ಮಾತನಾಡುತ್ತಿದ್ದು, ಕಾಂಗ್ರೆಸ್, ಎನ್​ಸಿಪಿ ಸೇರಿ ವಿಪಕ್ಷಗಳ ನಿಜ ಬಣ್ಣ ಬಯಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಿಡಿಕಾರಿದರು. ಪ್ರತಿಕಾಗೋಷ್ಠಿಯಲ್ಲಿ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಅವರು, ಸ್ವಹಿತಾಸಕ್ತಿ ಹೊಂದಿರುವ ಕೆಲ ವ್ಯಕ್ತಿಗಳ ಪ್ರಭಾವಕ್ಕೊಳಗಾಗಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ರೈತರನ್ನು ವ್ಯವಸ್ಥಿತವಾಗಿ ದಾರಿತಪ್ಪಿಸಲಾಗುತ್ತಿದೆ. 2019ರ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾನೂನನ್ನ್ನು ಹಿಂಪಡೆಯುವುದಾಗಿ ಘೊಷಿಸಲಾಗಿತ್ತು. ಅಲ್ಲದೆ, ರೈತರು ಕೃಷಿ ಉತ್ಪನ್ನಗಳ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡುವುದಾಗಿಯೂ ತಿಳಿಸಲಾಗಿತ್ತು. 2013ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲ್ಲಾ ರಾಜ್ಯಗಳು ಹಣ್ಣು ಮತ್ತು ತರಕಾರಿಗಳನ್ನು ಎಪಿಎಂಸಿ ಕಾಯ್ದೆ ವ್ಯಾಪ್ತಿಯಿಂದ ತೆಗೆದು, ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು ಎಂದಿದ್ದರು. ಈಗ ನೋಡಿದರೆ ತದ್ವಿರುದ್ಧ ವಾದ ಮುಂದಿಡುತ್ತಿದ್ದಾರೆ. ರೈತರ ಹೋರಾಟವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. 2005ರಲ್ಲಿ ಎನ್​ಸಿಪಿ ಮುಖಂಡ ಶರದ್ ಪವಾರ್ ಟಿವಿ ಸಂದರ್ಶನವೊಂದರಲ್ಲಿ, ಎಪಿಎಂಸಿ ಕಾಯ್ದೆಗಳು 6 ತಿಂಗಳಲ್ಲೇ ರದ್ದಾಗಲಿವೆ. ರಾಜ್ಯ ಸರ್ಕಾರಗಳು ಸಹಕಾರ ನೀಡಿ ಕಾನೂನು ತಿದ್ದುಪಡಿಗೆ ಅವಕಾಶ ನೀಡದಿದ್ದರೆ ಕೇಂದ್ರದಿಂದ ಹಣಕಾಸು ಅನುದಾನ ಬಿಡುಗಡೆ ಮಾಡುವುದು ಕಷ್ಟವಾಗಲಿದೆ ಎಂದಿದ್ದರು. ಹಾಗಾದರೆ ಅಂದು ಆಡಿದ್ದ ಮಾತುಗಳೆಲ್ಲಾ ಸುಳ್ಳಾಗಿದ್ದವೇ ಎಂದು ರವಿಶಂಕರ್ ಪ್ರಶ್ನಿಸಿದರು.

    ವ್ಯಾಪಾರ ಒಕ್ಕೂಟದಿಂದ ಬೆಂಬಲ ಇಲ್ಲ

    ಭಾರತ ಬಂದ್​ಗೆ ನಮ್ಮ ಬೆಂಬಲವಿಲ್ಲ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ), ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ (ಎಐಟಿಡಬ್ಲ್ಯುಎ) ಮಹತ್ವದ ಘೊಷಣೆ ಮಾಡಿವೆ. ದೆಹಲಿ ಸೇರಿದಂತೆ ಎಲ್ಲೆಡೆ ಮಾರುಕಟ್ಟೆಗಳು ತೆರೆದಿರಲಿವೆ ಮತ್ತು ಸಾರಿಗೆ ವ್ಯವಸ್ಥೆಯೂ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಸಿಎಐಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮತ್ತು ಎಐಟಿಡಬ್ಲ್ಯುಎ ಮುಖ್ಯಸ್ಥ ಪ್ರದೀಪ್ ಸಿಂಘಾಲ್ ಹೇಳಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಸಂಘ ಬಂದ್​ನಲ್ಲಿ ಭಾಗವಹಿಸುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts