More

    ನೈಜ-ಸಕಾರಾತ್ಮಕ ಸುದ್ದಿಗಳಿಗೆ ಆದ್ಯತೆ ಸಿಗಲಿ; ಸಚಿವ ಎಂ.ಬಿ. ಪಾಟೀಲ

    ವಿಜಯಪುರ: ನೈಜ, ಸಕಾರಾತ್ಮಕ ಸುದ್ದಿಗಳಿಗೆ ಆದ್ಯತೆ ಕಲ್ಪಿಸುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಬಿ. ಪಾಟೀಲ ಹೇಳಿದರು.

    ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಬ್ರೇಕಿಂಗ್ ನ್ಯೂಸ್ ಭರದಲ್ಲಿ ಕೊಲೆಗಳ ವೈಭವೀಕರಣ ಹಾಗೂ ನಕಾರಾತ್ಮಕ ಸುದ್ದಿಗಳೇ ಹೆಚ್ಚಿನ ಪ್ರಮಾಣದಲ್ಲಿ ಬಿತ್ತರವಾಗುತ್ತಿರುವುದು ಕಳವಳಕಾರಿ ಸಂಗತಿ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಪರಾಧ ಸುದ್ದಿಗಳ ವೈಭವೀಕರಣದಿಂದ ಸಮಾಜಕ್ಕೆ ಯಾವ ಉಪಯೋಗವೂ ಇಲ್ಲ ಎಂದರು.

    ವಿಶೇಷವಾಗಿ ಟಿವಿ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್‌ಗೆ ಆಸ್ಪದ ನೀಡುತ್ತವೆ. ಜನಪರ ಯೋಜನೆ, ಸಮಸ್ಯೆಗಳ ಬಗ್ಗೆ ಸಭೆ ನಡೆಸಿದರೂ ಆ ಸಭೆಯ ಸಾರಾಂಶ ಟಿವಿಯಲ್ಲಿ ಬರದೇ ಇರುವುದು ನೋವಿನ ಸಂಗತಿ. ಬದಲಿಗೆ ಹೊರಗೆ ನೀಡುವ ರಾಜಕೀಯ ಹೇಳಿಕೆಗಳೇ ಪ್ರಧಾನವಾಗಿ ರಾರಾಜಿಸುತ್ತವೆ. ಅದರಲ್ಲೂ ನಕಾರಾತ್ಮಕ ಸುದ್ದಿಗಳೇ ಅಧಿಕ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮೊದಲಾದ ಅಪರಾಧ ಸುದ್ದಿಗಳ ವೈಭವೀಕರಣದಿಂದ ಯಾವ ಪ್ರಯೋಜನವೂ ಇಲ್ಲ. ಜನಪ್ರತಿನಿಧಿಗಳು ತಪ್ಪು ಮಾಡಿದಾಗ ತಿದ್ದಿ ಹೇಳುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದರು.

    ಪತ್ರಕರ್ತರ ಜೀವನ ಸಹ ಸಂಕಷ್ಟದಲ್ಲಿದೆ. ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಪತ್ರಕರ್ತರಿಗಾಗಿ ವಿಶೇಷ ವಿಮಾ ಯೋಜನೆ ಅನುಷ್ಠಾನಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

    ಧೀಮಂತ ಪತ್ರಕರ್ತ ಮೊಹರೆ ಹನುಮಂತರಾಯರು ಪತ್ರಿಕಾ ರಂಗದಲ್ಲಿ ದೊಡ್ಡ ಕೊಡುಗೆ ನೀಡುವ ಮೂಲಕ ಪ್ರತಿಯೊಬ್ಬರು ಹೆಮ್ಮೆ ಪಡುವ ಸೇವೆಯನ್ನು ಈ ನಾಡಿಗೆ ನೀಡಿದ್ದಾರೆ. ಡಾ.ಫ.ಗು. ಹಳಕಟ್ಟಿ ಅವರನ್ನು ವಚನ ಗುಮ್ಮಟ, ವಚನ ಪಿತಾಮಹ ಎಂದು ಉಲ್ಲೇಖಿಸುತ್ತೇವೆ. ಆದರೆ ಅವರು ಪತ್ರಿಕಾ ರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವಲ್ಲಿ ಒಂದು ರೀತಿ ವಿಫಲವಾಗಿದ್ದೇವೆ. ಆರ್ಥಿಕ ಮುಗ್ಗಟ್ಟು ಅನುಭವಿಸಿದ ಸಂದರ್ಭದಲ್ಲಿಯೂ ನವ ಕರ್ನಾಟಕ ಪತ್ರಿಕೆಯನ್ನು ಶ್ರದ್ಧೆಯಿಂದ ಮುನ್ನಡೆಸಿದ್ದನ್ನು ಬಣ್ಣಿಸಿದರು.

    ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಪತ್ರಕರ್ತರ ಸಾಮಾಜಿಕ ಜವಾಬ್ದಾರಿ ಸಾಕಷ್ಟಿದೆ. ಅವರು ಸಮಾಜದ ಅಂಕು-ಡೊಂಕು ತಿದ್ದುವ ಸಮಾಜ ಸುಧಾರಕರಿದ್ದಂತೆ. ಹಾಗಾಗಿ ಪತ್ರಕರ್ತರು ಸತ್ಯವನ್ನೇ ಬರೆಯುವುದನ್ನು ಮೈಗೂಡಿಸಿಕೊಳ್ಳಬೇಕೆಂದರು.
    ಪಾಲಿಕೆ ಆಯುಕ್ತ ಬದ್ರೂದ್ದೀನ್ ಸೌದಾಗರ ಮಾತನಾಡಿದರು. ಹಾಸೀಂಪೀರ ದರ್ಗಾದ ಪೀಠಾಧೀಶ ಸಜ್ಜಾದೆ ನಶೀನ್ ಡಾ.ಸೈಯ್ಯದ್ ಮುರ್ತುಜಾ ಹುಸೇನಿ ಹಾಸ್ಮಿ ಆಶೀರ್ವಚನ ನೀಡಿದರು.

    ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಒ ರಾಹುಲ್ ಶಿಂಧೆ, ಎಸ್‌ಪಿ ಎಚ್.ಡಿ. ಆನಂದಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜು, ಕೆಯುಡಬ್ಲ್ಯೂಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯ ಡಿ.ಬಿ. ವಡವಡಗಿ, ಉಪಾಧ್ಯಕ್ಷ ಇಂದುಶೇಖರ ಮಣೂರ, ಪ್ರಕಾಶ ಬೆಣ್ಣೂರ, ಫಿರೋಜ್ ರೋಜಿಂದಾರ, ಕಾರ್ಯದರ್ಶಿ ಅವಿನಾಶ ಬಿದರಿ, ಶಕೀಲ್ ಬಾಗಮಾರೆ, ಮಲ್ಲು ಕೆಂಭಾವಿ, ಐಎಫ್‌ಡಬ್ಲ್ಯೂಜೆ ಸದಸ್ಯ ಮಹೇಶ ಶೆಟಗಾರ, ರಾಜ್ಯ ಸಮಿತಿ ನಾಮನಿರ್ದೇಶನ ಸದಸ್ಯ ಕೆ.ಕೆ. ಕುಲಕರ್ಣಿ, ಕೌಶಲ್ಯಾ ಪನಾಳಕರ ಮತ್ತಿತರರಿದ್ದರು.

    ಹಿರಿಯ ಪತ್ರಕರ್ತರಾದ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಬಸವರಾಜ ಸಂಪಳ್ಳಿ ಸೇರಿದಂತೆ ಸಾಧಕ ಪತ್ರಕರ್ತರು ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸಚಿವ ಎಂ.ಬಿ. ಪಾಟೀಲ ಗೌರವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts