More

    ಮಕ್ಕಳಿಗೆ ಕಲಿಕಾ ಆಧಾರಿತ ತರಬೇತಿ ನೀಡಿ

    ಬಾಗಲಕೋಟೆ : ಜಿಲ್ಲೆಯ ವಸತಿ ನಿಲಯದ ಮಕ್ಕಳಿಗೆ ವಾರದಲ್ಲಿ ಎರಡು ದಿನ ವಿಜ್ಞಾನ ಮತ್ತು ಗಣಿತ ಚಟುವಟಿಕೆ ಆಧಾರಿತ ಕಲಿಕಾ ಕಾರ್ಯಕ್ರಮವನ್ನು ಆನ್‌ಲೈನ್ ಮುಖಾಂತರ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೂಚಿಸಿದರು.

    ನವನಗರದ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರೊಜೆಕ್ಟ್ ಮಾನಿಟರಿಂಗ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋರ್ ವಿಜ್ಞಾನ ಕೇಂದ್ರದಿಂದ ಹಳ್ಳಿಗಳಲ್ಲಿ ಸಮುದಾಯ ಭೇಟಿ ಮಾಡಬೇಕು. ಸಮುದಾಯ ಭೇಟಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಂದ ಸ್ಥಳಗಳ ಮಾಹಿತಿ ಪಡೆಯಲು ತಿಳಿಸಿದರು.

    ಆಪರೇಷನ್ ವಸಂತ ಕಾರ್ಯಕ್ರಮ ಈಗಾಗಲೇ 5 ಹಳ್ಳಿಗಳಲ್ಲಿ ನಡೆಯುತ್ತಿದ್ದು, ಇನ್ನು 10 ಹಳ್ಳಿಗಳಿಲ್ಲಿ ಈ ಕಾರ್ಯಕ್ರಮ ವಿಸ್ತರಿಸಬೇಕು. ಕೋರ್ ವಿಜ್ಞಾನ ಕೇಂದ್ರಕ್ಕೆ ಪ್ರತಿ ದಿನ ಭೇಟಿ ನೀಡುವ 120 ಮಕ್ಕಳಿಗೆ ಮಧ್ಯಾಹ್ನ ಬಿಸಿಊಟದ ವ್ಯವಸ್ಥೆ ವಾರದೊಳಗೆ ಮಾಡಬೇಕು. ಪ್ರತಿ ಶನಿವಾರ ಬಾಗಲಕೋಟೆ ಜಿಲ್ಲೆಯ ಗಡಿಭಾಗದ ಶಾಲೆ ವಿದ್ಯಾರ್ಥಿಗಳನ್ನು ಬಸ್ ಮೂಲಕ ಭೇಟಿ ಮಾಡಿಸಲು ನಿರ್ಧರಿಸಲಾಯಿತು. ಕೇಂದ್ರಕ್ಕೆ ಸಾವಿರ ಲೀಟರ್ ಸಾಮರ್ಥ್ಯವುಳ್ಳ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.

    ಜಿಲ್ಲೆಯ ಕಡಿಮೆ ಲಿತಾಂಶ ಹೊಂದಿದ ಶಾಲೆಗಳ ಮಕ್ಕಳಿಗೆ ಕೋರ್ ಕೇಂದ್ರದಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಚಟುವಟಿಕೆ ಮೂಲಕ ತರಬೇತಿ ನೀಡಬೇಕು. ಪಠ್ಯಕ್ಕೆ ಅನುಗುಣವಾಗಿ ವಿಜ್ಞಾನ ಮಾದರಿಯ ಪ್ರಯೋಗಗಳ ತಿಳಿಸಿಕೊಡಬೇಕು. ಶಾಲೆಗಳಲ್ಲಿ ವಿಜ್ಞಾನ ಪ್ರಯೋಗ ಸಾಮಗ್ರಿ ಇಲ್ಲದ ಶಾಲೆಯ ಮಕ್ಕಳಿಗೆ ಕೋರ್ ಕೇಂದ್ರದಲ್ಲಿ ತರಬೇತಿ ನೀಡಬೇಕು. ಒಟ್ಟಾರೆಯಾಗಿ ವಿದ್ಯಾರ್ಥಿಗಳ ವಿದ್ಯಾರ್ಜನೆ ಹೆಚ್ಚಿಸುವ ಕೆಲಸವಾಗಬೇಕು ಎಂದರು.

    ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಾಳಪ್ಪ ಬಡಿಗೇರ, ಇಳಕಲ್ಲ ಡಯಟ್ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ, ಶಿಕ್ಷಣಾಧಿಕಾರಿ ಸಿ.ಆರ್.ಓಣಿ, ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಜಾಸ್ಮೀನ್ ಕಿಲ್ಲೇದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸಾವಿತ್ರಿ ಕೊಂಡಗೂಳಿ, ಇಳಕಲ್ಲ ಡಯಟ್ ಉಪನ್ಯಾಸಕ ಜಿ.ಎಚ್.ಮುಂಡೇವಾಡಿ, ವಿಜ್ಞಾನ ವಿಷಯ ಪರಿವೀಕ್ಷಕ ಎಂ.ಎ.ಬಾಳಿಕಾಯಿ, ಗಣಿತ ವಿಷಯ ಪರಿವೀಕ್ಷಕ ಎಸ್.ಎಸ್.ಹಾಲವರ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ.ಗುಡೂರ, ಅಗಸ್ತ್ಯ ಫೌಂಡೇಷನ್ ವ್ಯವಸ್ಥಾಪಕಿ ಗೀತಾ ಪಾಟೀಲ, ಕೋರ್ ವಿಜ್ಞಾನ ಕೇಂದ್ರದ ಸಂಚಾಲಕ ಅನಿಲ ಹಜೇರಿ ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳ ಜತೆ ಡಿಸಿ ಸಂವಾದ 
    ಸಭೆ ನಂತರ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕೋರ್ ವಿಜ್ಞಾನ ಕೇಂದ್ರ ಚಟುವಟಿಕೆ ಆಧಾರಿತ ತರಬೇತಿಯಿಂದ ಅನುಕೂಲವಾಗಿರುವ ಬಗ್ಗೆ ವಿದ್ಯಾರ್ಥಿಗಳನ್ನು ಕೇಳಿದಾಗ, ಇಲ್ಲಿರುವ ಸಾಮಗ್ರಿ ಶಾಲೆಯಲ್ಲಿ ಇಲ್ಲ. ಚಟುವಟಿಕೆ ಆಧಾರಿತ ತರಬೇತಿ ನೀಡುತ್ತಿರುವುದರಿಂದ ತುಂಬಾ ಅನುಕೂಲವಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts