More

    ನಾಡ ನಡುವಿನ ನೋವಿನ ಕೂಗು ಭೂಗರ್ಭದಲ್ಲಿ ಮೌನ: ಶ್ರೀನಿವಾಸ ಪ್ರಸಾದ್‌ಗೆ ಸಿದ್ದಲಿಂಗಯ್ಯ ಕವಿತೆಗಳ ಗೀತನಮನ

    ಮೈಸೂರು: ಕವಿ ಸಿದ್ದಲಿಂಗಯ್ಯ ಅವರ ಕವಿತೆಗಳ ಗಾಯನದ ಮೂಲಕ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಸಂಗೀತ ನಮನ ಸಲ್ಲಿಸಲಾಯಿತು.


    ಸಿದ್ದಲಿಂಗಯ್ಯ ಅವರ ಕವಿತೆಗಳು ಪ್ರಸಾದ್ ಅವರಿಗೆ ಅಚ್ಚುಮೆಚ್ಚಿನಾಗಿದ್ದವು. ಹೀಗಾಗಿ, ಅಂತಿಮ ದರ್ಶನ ಸಂದರ್ಭದಲ್ಲಿ ಗಾಯಕರು ಸಿದ್ದಲಿಂಗಯ್ಯ ಅವರ ಕವಿತೆಗಳನ್ನು ಹಾಡಿ ಶ್ರದ್ಧಾಂಜಲಿ ಅರ್ಪಿಸಿದರು.


    ಗಾಯಕ ಸಿ.ಎಂ. ನರಸಿಂಹಮೂರ್ತಿ, ವಿಶ್ವನಾಥ್ ಮತ್ತು ತಲಕಾಡು ಕೃಷ್ಣಮೂರ್ತಿ ಅವರು ಕ್ರಾಂತಿ ಗೀತೆಗಳನ್ನು ಹಾಡಿದರು. ಪ್ರಸಾದ್ ಅವರ ಬಹುಮೆಚ್ಚಿನ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ’, ‘ಆಕಾಶದ ಅಗಲಕ್ಕೂ ನಿಂತ ಆಲವೇ’ ಮತ್ತು ‘ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು’ ಎಂಬ ಗೀತೆಗಳನ್ನು ಹಾಡಿದರು.


    ‘ಪ್ರಸಾದ್ ಅವರಿಗೆ ನಾಡ ನಡುವಿನಿಂದ ನೋವಿನ ಕೂಗೇ ಹಾಡು ಬಹಳ ಪ್ರಿಯವಾದದ್ದು. ಯಾವಾಗ ಆ ಹಾಡನ್ನು ಕೇಳಿದರೂ ದುಃಖಿತರಾಗಿ ಕಣ್ಣಿರು ಸುರಿಸುತ್ತಿದ್ದರು. ಈ ಬಗ್ಗೆ ಕವಿ ಸಿದ್ದಲಿಂಗಯ್ಯ ಅವರಿಗೆ ತಿಳಿಸಿದ್ದಾಗ ಸಂತೋಷ ಪಟ್ಟಿದ್ದರು ಎಂದು ಗಾಯಕ ಸಿ.ಎಂ. ನರಸಿಂಹಮೂರ್ತಿ ಸ್ಮರಿಸಿಕೊಂಡರು.
    ಭಜನೆ: ಸೋಮವಾರ ಇಡೀ ರಾತ್ರಿ ಭಜನೆ ನಡೆಯಿತು. ಸಾವಿನ ಪದಗಳು ಮತ್ತು ಕ್ರಾಂತಿ ಗೀತೆಗಳನ್ನು ಪ್ರಸ್ತುತಪಡಿಸಿದ ಗಾಯಕರು ಗೀತ ನಮನ ಸಲ್ಲಿಸಿದರು.

    ಗದ್ಗಿತರಾದ ಪ್ರತಾಪ್ ಸಿಂಹ


    ಸಂಸದ ಪ್ರತಾಪ್ ಸಿಂಹ ಅವರು ಮಾಧ್ಯಮದವರೊಂದಿಗೆ ಮಾತಾಡುವ ವೇಳೆ ಪ್ರಸಾದ್ ಅವರೊಂದಿಗಿನ ಒಡನಾಟವನ್ನು ನೆನೆದು ಗದ್ಗಿತರಾದರು.


    ಶ್ರೀನಿವಾಸ ಪ್ರಸಾದ್ ಅವರ ಅಂತಿಮ ದರ್ಶನ ಪಡೆದ ಅವರು, ರಾಜಕಾರಣದಲ್ಲಿ ದ್ವೇಷ ಹಾಗೂ ಅಸೂಯೆ ಇಲ್ಲದ ಏಕಮೇವ ವ್ಯಕ್ತಿತ್ವ ಪ್ರಸಾದ್ ಅವರದ್ದು. ನಾಲ್ಕು ಗೋಡೆ ಮಧ್ಯೆ ಕಿವಿ ಮಾತು ಹೇಳುತ್ತಿದ್ದರೇ ಹೊರತು ಬಹಿರಂಗ ಟೀಕೆ ಮಾಡುತ್ತಿರಲಿಲ್ಲ ಎಂದು ಹೇಳುತ್ತಲೇ ಕಣ್ಣೀರಾದರು.

    70ರ ದಶಕದಿಂದಲೂ ಚಾಮರಾಜನಗರ ಕ್ಷೇತ್ರದ ಸಂಸದರಾಗಿ, ನಂಜನಗೂಡು ಕ್ಷೇತ್ರದಿಂದ ಶಾಸಕರಾಗಿ, ಕಂದಾಯ ಸಚಿವರಾಗಿ ಕೆಲಸ ಮಾಡಿದರು. ರಾಜಕೀಯದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದನ್ನು ಸೂಕ್ಷ್ಮವಾಗಿ ಗಮನಿಸಿ ನಿಷ್ಪಕ್ಷವಾಗಿ ಮಾತನಾಡುತ್ತಿದ್ದರು. ಅವರ ಸಾವು ವೈಯಕ್ತಿಕವಾಗಿ ನೋವು ತಂದಿದೆ. ಸಜ್ಜನ ರಾಜಕಾರಣಿಗಳು ಬೇಗ ಹೋಗುತ್ತಿರುವುದು ಮನಸ್ಸಿಗೆ ದುಃಖವಾಗುತ್ತಿದೆ ಎಂದರು.

    ಜನಪರ, ದಲಿತಪರ ಧ್ವನಿಯಾಗಿದ್ದ ಪ್ರಸಾದ್ ನಿಧನ ಸಮಾಜ ಹಾಗೂ ರಾಜಕಾರಣಕ್ಕೆ ದೊಡ್ಡ ನಷ್ಟ. ಅವರು ಒಂದು ವರ್ಗಕ್ಕೆ ಸೀಮಿತರಾಗದೇ ಎಲ್ಲರ ಹಿತ ಕಾಪಾಡಲು ಶ್ರಮಿಸಿದರು. ಕಳಂಕರಹಿತ ರಾಜಕಾರಣ, ಅಂಬೇಡ್ಕರ್ ಸಿದ್ಧಾಂತ ಬಿಟ್ಟುಕೊಡದೇ ಕೊನೆ ವರೆಗೂ ಅದೇ ದಾರಿಯಲ್ಲಿ ಸಾಗಿದರು.
    ಪಿ.ಎಂ.ನರೇಂದ್ರ ಸ್ವಾಮಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts