More

    ಪೊಲೀಸ್​ ಪೇದೆ ಠಾಣೆಯಲ್ಲಿ ಥಳಿಸಿದನೆಂದು ಆತ್ಮಹತ್ಯೆ ಮಾಡಿಕೊಂಡ ಯುವತಿ

    ಜಾಲೌನ್​: ಪಾಸ್​ಪೋರ್ಟ್​ ಕಳವು ಮಾಡಿದ ಸುಳ್ಳು ಆರೋಪದಲ್ಲಿ ತನ್ನನ್ನು ಠಾಣೆಗೆ ಕರೆದೊಯ್ದ ಪೊಲೀಸ್​ ಪೇದೆ ತನ್ನನ್ನು ಥಳಿಸಿದರು ಎಂಬ ಕಾರಣಕ್ಕಾಗಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಜಾಲೌನ್​ನ ನಯಾ ರಾಮ್​ನಗರ್​ ನಿವಾಸಿ ನಿಶು (22) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಾಕೆ. ಯೋಗೇಶ್​ ಪಾಠಕ್​ ಈಕೆಯ ಮೇಲೆ ಹಲ್ಲೆ ಮಾಡಿದ ಪೇದೆ. ಈಕೆ ಆತ್ಮಹತ್ಯೆ ಮಾಡಿಕೊಂಡ ಸಂಗತಿ ಶನಿವಾರ ಬೆಳಗ್ಗೆ ಗೊತ್ತಾಗುತ್ತಲೇ ಒರೈ ಕೊತ್ವಾಲಿ (ಪೊಲೀಸ್​ ಠಾಣೆ) ಬಳಿ ಜಮಾಯಿಸಿದ ಬಡಾವಣೆಯ ಜನರು ಭಾರಿ ಗದ್ದಲ ಎಬ್ಬಿಸಿದರು. ಅಲ್ಲದೆ, ಯೋಗೇಶ್​ ಪಾಠಕ್​ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

    ವಿಷಯ ತಿಳಿದು ಸ್ಥಳಕ್ಕೆ ಬಂದ ಒರೈ ಕೊತ್ವಾಲಿಯ ಠಾಣಾಧಿಕಾರಿ ರೊಚ್ಚಿಗೆದ್ದಿದ್ದ ಸಾರ್ವಜನಿಕರನ್ನು ಸಮಾಧಾನ ಪಡಿಸಿದ್ದಲ್ಲದೆ, ತಪ್ಪಿತಸ್ಥ ಪೇದೆಯ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆನಂತರದಲ್ಲಿ ಜನರು ಠಾಣೆ ಎದುರಿನಿಂದ ಚದುರಿದರು.

    ನಿಶು ತನ್ನ ಇಬ್ಬರು ಗೆಳತಿಯರೊಂದಿಗೆ ಶುಕ್ರವಾರ ಮಧ್ಯಾಹ್ನ ಮಾರ್ಕೆಟ್​ಗೆ ಹೋಗಿದ್ದಳು. ಬಲ್​ದಾವೋ ವೃತ್ತದ ಬಳಿಯಲ್ಲಿ ಈಕೆ ತೆರಳುತ್ತಿದ್ದಾಗ ಈಕೆಯನ್ನು ತಡೆದಿದ್ದ ಅಂಗಡಿ ಮಾಲೀಕರು, ಪಾಸ್​ಪೋರ್ಟ್​ ಕಳುವು ಮಾಡಿರುವುದಾಗಿ ಆರೋಪಿಸಿದ್ದರು. ಸನಿಹದಲ್ಲೇ ಇದ್ದ ಪೇದೆ ಯೋಗೇಶ್​ ಪಾಠಕ್​ನನ್ನು ಸ್ಥಳಕ್ಕೆ ಕರೆಸಿಕೊಂಡು ಯುವತಿಯರನ್ನು ಆತನ ವಶಕ್ಕೆ ಒಪ್ಪಿಸಿದ್ದರು.

    ಇದನ್ನೂ ಓದಿ: ಆಟವಾಡುತ್ತಿದ್ದ ಮಕ್ಕಳ ಮೇಲೆ ಕುಸಿದ ಮೇಲ್ಛಾವಣಿ; ಓರ್ವ ಬಾಲಕ ಸಾವು, ಮೂವರಿಗೆ ಗಂಭೀರ ಗಾಯ

    ಯುವತಿಯರನ್ನು ಠಾಣೆಗೆ ಕರೆತಂದ ಬಳಿಕ ನಿಶುಳನ್ನು ಪೇದೆ ಯೋಗೇಶ್​ ಪಾಠಕ್ ಥಳಿಸಿದ್ದ ಎನ್ನಲಾಗಿದೆ. ಸ್ವಲ್ಪ ಹೊತ್ತು ವಿಚಾರಣೆ ನಡೆಸಿದ ಬಳಿಕ ಅವರ ಸಂಬಂಧಿಕರನ್ನು ಕರೆಸಿ ಯುವತಿಯರನ್ನು ಬಿಟ್ಟು ಕಳುಹಿಸಲಾಗಿತ್ತು. ಅಲ್ಲದೆ, ಸೋಮವಾರ ಮತ್ತೊಮ್ಮೆ ವಿಚಾರಣೆಗೆ ಬರುವಂತೆ ನಿಶುಗೆ ಹೇಳಲಾಗಿತ್ತು.

    ಠಾಣೆಯಿಂದ ಮನೆಗೆ ಮರಳಿದಾಗಿನಿಂದಲೂ ನಿಶು ಮಂಕಾಗಿದ್ದಳು. ಠಾಣೆಗೆ ಮಹಿಳೆಯರನ್ನು ಕರೆದೊಯ್ಯುವಾಗ ಮಹಿಳಾ ಪೊಲೀಸರನ್ನು ಸ್ಥಳಕ್ಕೆ ಕರೆಸಬೇಕಿತ್ತು. ಆದರೆ, ಯೋಗೇಶ್​ ಪಾಠಕ್​ ಹಾಗೆ ಮಾಡದೆ, ತನ್ನ ಕೈಯನ್ನು ಹಿಡಿದು ಪೊಲೀಸ್​ ಠಾಣೆಗೆ ಕರೆತಂದದ್ದು ನಿಶುಗೆ ಅವಮಾನವಾದಂತೆ ಆಗಿತ್ತು. ಅಲ್ಲದೆ, ಸೋಮವಾರವೂ ವಿಚಾರಣೆಗೆ ಬರುವಂತೆ ಕರೆದಿದ್ದರಿಂದ, ಆಕೆ ಖಿನ್ನತೆಗೆ ಒಳಗಾಗಿದ್ದಳು. ಇದರಿಂದಾಗಿ ಆಕೆ ಶುಕ್ರವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ​ಆತ್ಮಹತ್ಯೆ ಮಾಡಿಕೊಂಡಿದ್ದಳು.

    ಶನಿವಾರ ಬೆಳಗ್ಗೆ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿದ್ದ ನಿಶು ದೇಹವನ್ನು ಕಂಡ ಆಕೆಯ ಸಂಬಂಧಿಕರು ತಕ್ಷಣವೇ ನೇಣಿನ ಕುಣಿಕೆಯಿಂದ ಇಳಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಸತ್ತು ತುಂಬಾ ಹೊತ್ತಾಗಿರುವುದಾಗಿ ಹೇಳಿದರು ಎನ್ನಲಾಗಿದೆ. ಇದರಿಂದ ಕೆರಳಿದ ಜನರು ಠಾಣೆಯ ಬಳಿಕ ಹೋಗಿ ಗದ್ದಲ ಮಾಡಿದರು ಎನ್ನಲಾಗಿದೆ.

    ಬಂದರು ಪ್ರದೇಶದಲ್ಲಿದ್ದ 12 ಸಾವಿರ ಜನರು ಕೊನೆಗೂ ನಿರುಮ್ಮಳ; ಆತಂಕ ದೂರಾಗಿದ್ದಾದರೂ ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts