More

    ಘಟ್ಟ ಪ್ರದೇಶದಲ್ಲಿ ಮುಂದುವರಿದ ಮಳೆ

    ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ 1.30 ಲಕ್ಷ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ಕೃಷ್ಣಾ, ದೂಧಗಂಗಾ ನದಿಗಳ ನೀರಿನ ಮಟ್ಟಕ್ಕಿಂತಲೂ ವೇದಗಂಗಾ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗುತ್ತಿದೆ. ಇದರಿಂದ ನಿಪ್ಪಾಣಿ ತಾಲೂಕಿನಲ್ಲಿ ಸಂಭವನೀಯ ಪ್ರವಾಹ ಎದುರಾಗಿದೆ.

    ಮಹಾರಾಷ್ಟ್ರ ಘಟ್ಟ ಪ್ರದೇಶವಾದ ಕಾಳಮ್ಮವಾಡಿ, ರಾಧಾನಗರಿ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ ಭಾರಿ ಮಳೆ ಸುರಿದಿದೆ. ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲೂಕಿನಲ್ಲಿಯೂ ಮಳೆ ಮುಂದುವರಿದಿದೆ. ಇದರಿಂದ ಮೂರೂ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ರಾಜಾಪೂರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ 1.1 ಲಕ್ಷ ಕ್ಯೂಸೆಕ್, ದೂಧಗಂಗಾ, ವೇದಗಂಗಾ ನದಿಗೆ 30 ಸಾವಿರ ಕ್ಯೂಸೆಕ್ ಹೀಗೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ 1.30 ಲಕ್ಷ ಕ್ಯೂಸೆಕ್ ನೀರು ಹರಿದು ಆಲಮಟ್ಟಿ ಜಲಾಶಯಕ್ಕೆ ಹೋಗುತ್ತಿದೆ. ಇಲ್ಲಿಯವರಿಗೆ ಚಿಕ್ಕೋಡಿ ಉಪವಿಭಾಗದ ಎಂಟು ಸೇತುವೆ ಜಲಾವತಗೊಂಡಿವೆ.

    ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಜತ್ರಾಟ- ಭೀವಸಿ, ಬಾರವಾಡ- ಕುನ್ನೂರ, ಅಕ್ಕೋಳ- ಸಿದ್ನಾಳ, ಭೋಜವಾಡಿ-ಕುನ್ನೂರ, ಮಮದಾಪೂರ- ಹುನ್ನರಗಿ, ದೂಧಗಂಗಾ ನದಿಯ ಕಾರದಾಗ- ಭೋಜ, ಚಿಕ್ಕೋಡಿ ತಾಲೂಕಿನ ಮಲಿಕವಾಡ- ದತ್ತವಾಡ, ಕೃಷ್ಣಾ ನದಿಯ ಮಾಂಜರಿ- ಬಾ.ಸವದತ್ತಿ ಸೇತುವೆ ಮುಳುಗಡೆಯಾಗಿವೆ. ನದಿತೀರ ಪ್ರದೇಶಕ್ಕೆ ಸಾರ್ವಜನಿಕರು ಹೋಗದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಭದ್ರತೆ ಒದಗಿಸಿದೆ. ಮಹಾರಾಷ್ಟ್ರ ಜಲಾನಯನ ಭಾಗವಾದ ಭಾಗದ ನವಜಾ, ಮಹಾಬಲೇಶ್ವರ, ವಾರಣ, ರಾಧಾನಗರಿ, ಕೋಯ್ನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯಲಾರಂಭಿಸಿದೆ.

    ಚಿಕ್ಕೋಡಿ ಉಪವಿಭಾಗದ ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ ಭಾಗದಲ್ಲಿ ಮಳೆ ಸುರಿಯಲಾರಂಬಿಸಿದೆ. ಕೋಯ್ನ ಜಲಾಶಯ ಶೇ. 56 ಭರ್ತಿಯಾಗಿದೆ. ಮಹಾರಾಷ್ಟ್ರದಲ್ಲಿ ಅಬ್ಬರದ ಮಳೆಯಿಂದ ನದಿಗಳ ನೀರಿನ ಮಟ್ಟ ಹೆಚ್ಚುತ್ತದೆ ಹೊರತು ಯಾವುದೇ ಜಲಾಶಯ ನೀರು ಹೊರಗೆ ಬರುತ್ತಿಲ್ಲ. ಹೀಗೆ ಮಳೆ ಮುಂದುವರಿದರೆ ಪ್ರವಾಹ ಎದುರಾಗುವ ಸಾಧ್ಯತೆ ಹೆಚ್ಚಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts