More

    ಹೊಳೆನರಸೀಪುರದಲ್ಲಿ ಹೆಚ್ಚುತ್ತಿದೆ ಕಸದ ರಾಶಿ

    ಹೊಳೆನರಸೀಪುರ: ಪಟ್ಟಣದ ನಾಗರಿಕರು ಕಸ ಹಾಗೂ ಇತರ ತ್ಯಾಜ್ಯವನ್ನು ರಸ್ತೆಯ ಇಕ್ಕೆಲಗಳಲ್ಲಿ ಹಾಕುತ್ತಿದ್ದು, ಇದು ಪರಿಸರ ಹಾಗೂ ಪಟ್ಟಣದ ಸೌಂದರ್ಯವನ್ನು ಹಾಳುಗೆಡುವುತ್ತಿದೆ.

    ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂಬ ದೃಷ್ಟಿಯಿಂದ ಪುರಸಭೆಯ ಆಡಳಿತ ಮಂಡಳಿ ಹಲವು ಮಾನದಂಡಗಳನ್ನು ಅನುಸರಿಸುತ್ತಿದೆಯಾದರೂ ಪ್ರಯೋಜನವಾಗಿಲ್ಲ. ನಿತ್ಯ ಕಸ ಸಂಗ್ರಹಿಸಲು ಮನೆ ಬಳಿ ಬರುವ ಪುರಸಭೆ ವಾಹನಗಳು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ. ಆದರೆ ಪ್ರಯೋಜನವಾಗುತ್ತಿಲ್ಲ. ಇದಕ್ಕೆ ಕಾರಣ ನಾಗರಿಕರು ಸರಿಯಾಗಿ ಸ್ಪಂದಿಸದಿರುವುದು.

    ಪಟ್ಟಣದ ಶ್ರೀ ಲಕ್ಷ್ಮಿ ನರಸಿಂಹ ದೇವಾಲಯದ ದೇವರಾಜ ಬೀದಿ, ಕಾರಂಜಿ ಕಟ್ಟೆ, ಬಿ.ಎಂ., ಎಲ್ಐಸಿ, ಆರ್‌ಬಿ ರಸ್ತೆ, ಹೌಸಿಂಗ್ ಬೋರ್ಡ್ ರಸ್ತೆ, ಅಂಬೇಡ್ಕರ್ ನಗರ, ನರಸಿಂಹ ನಾಯಕ ನಗರದ ಹಲವು ಬೀದಿಗಳಲ್ಲಿ ಘನತ್ಯಾಜ್ಯ ವಸ್ತುಗಳ ರಾಶಿಯೇ ಇದೆ. ಬೇಕಾ ಬಿಟ್ಟಿಯಾಗಿ ರಸ್ತೆ ಬದಿಯಲ್ಲಿ ಬಿಸಾಡುವುದರಿಂದ ಆರೋಗ್ಯಕರ ವಾತಾವರಣ ಹೇಗೆ ಸೃಷ್ಟಿಯಾಗಲಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.

    ಪುರಸಭೆ ಆಡಳಿತ ಪ್ರಮುಖ ಸ್ಥಳಗಳಲ್ಲಿ ಸೂಚನಾಫಲಕ ಹಾಕಿದೆಯಾದರೂ ಪ್ಲಾಸ್ಟಿಕ್ ವಸ್ತುಗಳು, ತ್ಯಾಜ್ಯ ಎಸೆಯುವ ಚಾಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಅಲ್ಲದೆ ಘನತ್ಯಾಜ್ಯ ವಸ್ತು, ಕಸಕಡ್ಡಿಯನ್ನು ಚರಂಡಿಗೆ ಹಾಕಲಾಗುತ್ತಿರುವ ಪರಿಣಾಮ ಹೂಳು ತುಂಬಿಕೊಂಡು, ನೀರು ಹರಿಯದಂತಾಗಿ ಕೆಟ್ಟ ವಾಸನೆ ಬರುತ್ತಿದೆ. ಇದರಿಂದಾಗಿ ಡೆಂೆ, ವೈರಲ್ ಫೀವರ್, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಯಿದ್ದರೂ ಪಟ್ಟಣದ 23 ವಾರ್ಡ್‌ಗಳ ಪುರಸಭಾ ಸದಸ್ಯರು ಕಣ್ಮುಚ್ಚಿ ಕುಳಿತಿದ್ದಾರೆ. ಆಯಾ ವಾರ್ಡ್‌ನಲ್ಲಿ ಅಲ್ಲಿನ ಜನಪ್ರತಿನಿಧಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕೆಲಸವಾಗಲಿ ಅಥವಾ ಇತರ ಕ್ರಮ ಅನುಸರಿಸುತ್ತಿಲ್ಲ ಎಂಬುದು ಹಲವರ ಆರೋಪ.

    ಪಟ್ಟಣದ ನಾಗರಿಕರು ಸ್ವಚ್ಛತೆಗೆ ಕೈಜೋಡಿಸಬೇಕು. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕಬಾರದು. ತಮ್ಮ ಮನೆ ಬಳಿ ಬರುವ ವಾಹನದಲ್ಲೇ ಕಸ ಹಾಕಬೇಕು. ರಸ್ತೆ ಬದಿ, ಚರಂಡಿಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಪಟ್ಟಣವನ್ನು ಸುಂದರವನ್ನಾಗಿಸಲು ನಾಗರಿಕರ ಸಹಭಾಗಿತ್ವ ಮಯಖ್ಯ.
    ಮಹೇಂದ್ರ ಪುರಸಭೆ ಮುಖ್ಯಾಧಿಕಾರಿ, ಹೊಳೆನರಸೀಪುರ

    ಮಾಂಸ, ಮೀನು, ಕೋಳಿ ಅಂಗಡಿ, ಕಸದ ರಾಶಿ ಬಳಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕೆಲವು ರಸ್ತೆಗಳಲ್ಲಿ ರಾತ್ರಿ ಸಮಯದಲ್ಲಿ ಸಂಚರಿಸಲು ಭಯವಾಗುತ್ತದೆ. ಪುರಸಭೆ ಆಡಳಿತ ಕಸ ಹಾಕುವವರ ಮೇಲೆ ನಿಗಾ ವಹಿಸಿ ಕ್ರಮ ಕೈಗೊಳ್ಳಬೇಕು. ಪ್ಲಾಸ್ಟಿಕ್ ಬಳಕೆಗೆ ಕಟ್ಟುನಿಟ್ಟಾಗಿ ನಿಷೇಧ ಹೇರಬೇಕು.
    ಕೆ.ಎಂ.ಶಿವಕುಮಾರ್ ಆರ್‌ಬಿ ರಸ್ತೆ ನಿವಾಸಿ, ಹೊಳೆನರಸೀಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts