More

    ಗಂಗೊಳ್ಳಿ ಗ್ರಾಮ ಪಂಚಾಯಿತಿ ಮೇಲ್ದರ್ಜೆಗೇರಿಸಿ

    ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24*7 ವೈದ್ಯಾಧಿಕಾರಿಗಳ ನೇಮಕ ಮಾಡಬೇಕು, ಗಂಗೊಳ್ಳಿ ಬಂದರಿನ ಬ್ರೇಕ್ ವಾಟರ್ ಕಾಮಗಾರಿ ವಿಸ್ತರಣೆ ಮಾಡಬೇಕು, ಹೂಳೆತ್ತಲು ಕ್ರಮಕೈಗೊಳ್ಳಬೇಕು, ಗಂಗೊಳ್ಳಿ ಬಂದರಿನಲ್ಲಿ ರಕ್ಷಣಾ ಕಾರ್ಯಪಡೆ ತಂಡ ರಚಿಸಬೇಕು ಮುಂತಾದ ಬೇಡಿಕೆಗಳನ್ನು ಗ್ರಾಮಸ್ಥರು ಮಂಡಿಸಿದರು.

    ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆಯಲ್ಲಿ ಗಂಗೊಳ್ಳಿ ಸ.ವಿ.ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಗಂಗೊಳ್ಳಿ ಪಂಚಾಯಿತಿಯ ಪ್ರಥಮ ಸುತ್ತಿನ ಗ್ರಾಮಸಭೆ ನಡೆಯಿತು.
    ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಲತಾ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಆಧಾರ್ ತಿದ್ದುಪಡಿಗೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸಹಿ ಹಾಕುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಯಶವಂತ ಖಾರ್ವಿ ಹೇಳಿದರು.

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು, 24*7 ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿ ನೇಮಕಕ್ಕೆ ಕ್ರಮಕೈಗೊಳ್ಳಬೇಕು. ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಶವಾಗಾರ ನಿರುಪಯುಕ್ತವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು, ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಬೇಕು ಎಂದು ನವೀನ್ ದೊಡ್ಡಹಿತ್ಲು, ಯಶವಂತ ಖಾರ್ವಿ, ರವೀಂದ್ರ ಪಟೇಲ್, ಗೋಪಾಲ ಖಾರ್ವಿ ದಾವನಮನೆ ಮೊದಲಾದವರು ಆಗ್ರಹಿಸಿದರು.

    ಗಂಗೊಳ್ಳಿ ಬಂದರಿನ ತಡೆಗೋಡೆ ವಿಸ್ತರಣೆ ಮಾಡಬೇಕು, ಜೆಟ್ಟಿ ಮತ್ತು ಅಳಿವೆಯಲ್ಲಿ ಹೂಳೆತ್ತಲು ಕ್ರಮಕೈಗೊಳ್ಳಬೇಕು, ಬಂದರಿನಲ್ಲಿ ದಾರಿದೀಪದ ವ್ಯವಸ್ಥೆ ಮಾಡಬೇಕು ಎಂದು ದುರ್ಗರಾಜ್ ಪೂಜಾರಿ ಒತ್ತಾಯಿಸಿದರು. ಬಂದರಿನಲ್ಲಿ ರಕ್ಷಣಾ ಕಾರ್ಯಪಡೆ ತಂಡವನ್ನು ರಚಿಸಬೇಕು ಎಂದು ಯಶವಂತ ಖಾರ್ವಿ ಒತ್ತಾಯಿಸಿದರು.
    ವೈದ್ಯಾಧಿಕಾರಿಗಳು, ಬಂದರು ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಮತ್ತು ಗ್ರಾಮಕರಣಿಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸಭೆಗೆ ಬಾರದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಮೆಸ್ಕಾಂ ಇಲಾಖೆಯ ಪಿ.ರಾಘವೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ರಾಜೇಶ್ವರಿ, ಬಂದರು ಇಲಾಖೆ ಎಸ್.ಎನ್.ಫಢ್ನೇಕರ್, ಶಿಕ್ಷಣ ಇಲಾಖೆಯ ಸಿಆರ್‌ಪಿ ಸೌಪರ್ಣಿಕಾ, ಕಿರಿಯ ಆರೋಗ್ಯ ಸಹಾಯಕಿ ಶ್ರೀದೇವಿ ಇಲಾಖಾ ಮಾಹಿತಿ ನೀಡಿದರು.

    ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗ್ರಾಪಂ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ, ಗ್ರಾಮ ಸಹಾಯಕ ನಾಗೇಂದ್ರ ಉಪಸ್ಥಿತರಿದ್ದರು.
    ಗ್ರಾಪಂ ಕಾರ್ಯದರ್ಶಿ ದಿನೇಶ ಶೇರುಗಾರ್ ಸ್ವಾಗತಿಸಿ, ಪಂಚಾಯಿತಿ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ವರದಿ ವಾಚಿಸಿದರು. ಶೇಖರ ಜಿ.ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts