More

    ಶ್ರೀ ಕವೀಂದ್ರ ತೀರ್ಥರ ಪೂರ್ವಾರಾಧನೆ ಸಂಪನ್ನ

    ಗಂಗವತಿ: ತಾಲೂಕಿನ ಆನೆಗೊಂದಿ ಬಳಿಯ ನವವೃಂದಾವನ ನಡುಗಡ್ಡೆಯಲ್ಲಿ ಶ್ರೀ ಕವೀಂದ್ರ ತೀರ್ಥರ ಪೂರ್ವಾರಾಧನೆ ಶ್ರೀಮದುತ್ತರಾದಿಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರ ಸಾನ್ನಿಧ್ಯದಲ್ಲಿ ಬುಧವಾರ ಸಂಪನ್ನಗೊಂಡಿತು.

    ಬೆಳಗ್ಗೆ ಶ್ರೀಗಳು ಶಿಷ್ಯ ಸಮೂಹಕ್ಕೆ ತಪ್ತ ಮುದ್ರಾಧಾರಣೆ ಅನುಗ್ರಹಿಸಿ, ಶ್ರೀಮನ್ಯಾಯ ಸುಧಾ ಪಾಠ ಬೋಧಿಸಿದರು. ನಂತರ ಶ್ರೀದಿಗ್ವಿಜಯಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು. ನಂತರ ಶ್ರೀ ಕವೀಂದ್ರ ತೀರ್ಥರ ಮೂಲವೃಂದಾವನದ ನಿರ್ಮಾಲ್ಯ ವಿಸರ್ಜನೆ, ಅಭಿಷೇಕ, ವಿಶೇಷ ಪಂಚಾಮೃತ ಅಭಿಷೇಕ, ಹಸ್ತೋದಕ ಸಮರ್ಪಣೆ, ಅಲಂಕಾರ, ಮಹಾಮಂಗಳಾರತಿ ನೆರವೇರಿಸಿದರು.

    ಇದೇ ವೇಳೆ ಕೃಷ್ಟಾಚಾರ್ ಖೇಡ, ರಘೋತ್ತಮಾಚಾರ್ ನಾಗಸಂಪಿಗೆ, ದೇವೇಂದ್ರಾಚಾರ್ ಮತ್ತಿತರ ಪಂಡಿತರು ಶ್ರೀ ಕವೀಂದ್ರ ತೀರ್ಥರು ಮತ್ತು ಶ್ರೀ ಸತ್ಯಧ್ಯಾನ ತೀರ್ಥರ ಬಗ್ಗೆ ಪ್ರವಚನ ನೀಡಿದರು. ಸಭಾ ಕಾರ್ಯಕ್ರಮವನ್ನು ಮುಕ್ಕುಂದಿ ಶ್ರೀಕಾಂತಾಚಾರ್ ನಿರ್ವಹಿಸಿದರು. ಶ್ರೀಮಠದ ದಿವಾನರಾದ ಶಶಿ ಆಚಾರ್, ಮಠಾಧಿಕಾರಿ ವಿದ್ಯಾಧೀಶಾಚಾರ್ ಗುತ್ತಲ್, ರವೀಂದ್ರನ್ ಚೆನ್ನೈ, ರಾಮಾಚಾರ್ ಉಮರ್ಜಿ ಇತರರು ಪಾಲ್ಗೊಂಡಿದ್ದರು.

    ಮಧ್ಯಾರಾದನೆ ಇಂದು: ಗುರುವಾರ ಶ್ರೀ ಕವೀಂದ ತೀರ್ಥರ ಮಧ್ಯಾರಾಧನೆ ನಡೆಯಲಿದ್ದು, ಶ್ರೀ ರಾಮ ನವಮಿ ಇರುವ ಕಾರಣ ಮೂಲರಾಮ, ಮೂಲಸೀತಾ, ಮೂಲದಿಗ್ವಿಜಯರಾಮದೇವರು ಮತ್ತು ವ್ಯಾಸಮುಷ್ಠಿಗಳಿಗೆ ವಿಶೇಷ ಅಭಿಷೇಕ ನಡೆಯಲಿದೆ. ನ್ಯಾಯಾಲಯದ ಆದೇಶದಂತೆ ಮಧ್ಯಾಹ್ನದ ಒಳಗೆ ಪೂಜಾ ಕಾರ್ಯಕ್ರಮ ಮುಗಿಯಲಿವೆ ಎಂದು ಶ್ರೀಮಠದ ದಿವಾನರಾದ ಶಶಿ ಆಚಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts