ಗಂಗಾವತಿ: ಸಮಾಜ ಪರಿವರ್ತನೆಗೆ ಪೂರಕವಾದ ಚುಟುಕುಗಳು ಜನಸಾಮಾನ್ಯರಿಗೂ ಅರ್ಥವಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿವೆ ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಂಡಗಿ ಹೇಳಿದರು.
ನಗರದ ಕಸಾಪ ಭವನದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಭಾನುವಾರ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾವ್ಯಲೋಕ ಸಂಘಟನೆಯ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಡಿಮೆ ಶಬ್ದಗಳಲ್ಲಿ ಹೆಚ್ಚು ಅರ್ಥ ನೀಡುವ ಚುಟುಕುಗಳಿಗೆ ಪ್ರಸ್ತುತ ದಿನಗಳಲ್ಲಿ ಮಾನ್ಯತೆಯಿದೆ. ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದಲ್ಲೂ ಮಾನ್ಯತೆ ನೀಡಲಾಗುತ್ತಿದೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕಿದೆ ಎಂದರು.
ಕರವೇ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಬೇಕಿದೆ ಎಂದರು. ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ, ಶಿಕ್ಷಕ ಸುಂಕಪ್ಪರನ್ನು ಸನ್ಮಾನಿಸಲಾಯಿತು. ಸ್ಥಳದಲ್ಲಿ ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ನಂತರ ನಡೆದ ಕವಿಗೋಷ್ಠಿಯಲ್ಲಿ ರಾಧಾ ಉಮೇಶ, ಮಂಜುಳಾ ಶ್ಯಾವಿ, ಸುಧಾತಾಯಿ ಬಡಿಗೇರ, ಶ್ಯಾಮೀದ್ ಲಾಠಿ, ಭೀಮನಗೌಡ ಕೇಸರಹಟ್ಟಿ, ಅಬ್ದುಲ್‌ವಹಾಬ್ ಮುಲ್ಲಾ, ಯು.ಆರ್.ಶಿವರುದ್ರಪ್ಪ, ಮಹಾದೇವ ಮೋಟಿ, ಸೋಮಪ್ಪ ಜಂಬಗಿ ಕವನ ವಾಚಿಸಿದರು.
ಚುಸಾಪ ತಾಲೂಕಾಧ್ಯಕ್ಷ ಅಶೋಕ ಗುಡಿಕೋಟಿ, ನಿಕಟಪೂರ್ವ ಅಧ್ಯಕ್ಷ ಶರಣಪ್ಪ ಮೆಟ್ರಿ, ಕೇಸರಹಟ್ಟಿ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ ಮುಖ್ಯಶಿಕ್ಷಕ ರಾಘವೇಂದ್ರ ದಂಡಿನ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್, ಕಾವ್ಯ ಲೋಕ ಗೌರವಾಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ್, ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ ಇದ್ದರು.