More

    ಹೆಚ್ಚು ಪ್ರಮಾಣದಲ್ಲಿ ನೀರು ಹರಿಸಲು ಒತ್ತಾಯ, ಭತ್ತ ಬೆಳೆಗಾರರಿಂದ ಆಕ್ರೋಶ, ಕಾಡಾಧ್ಯಕ್ಷರಿಂದ ಸಮಾಧಾನ

    ಗಂಗಾವತಿ: ಕೇಸರಹಟ್ಟಿ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನೀರು ಹರಿಸುವ ಪ್ರಮಾಣ ಹೆಚ್ಚಿಸುವಂತೆ ಒತ್ತಾಯಿಸಿ ವಿತರಣೆ ಕಾಲುವೆ ಮುಂದೆ ರೈತರು ಸೋಮವಾರ ಗದ್ದಲ ನಡೆಸಿದರು.

    21ನೇ ವಿತರಣೆ ಕಾಲುವೆ ವ್ಯಾಪ್ತಿಯ ಉಪಕಾಲುವೆಗೆ ಜಲಸಂಪನ್ಮೂಲ ಇಲಾಖೆಯಿಂದ 40 ತಿರುಣಿಗೆ (ಥ್ರೆಡ್) ನೀರು ಹರಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹರಿಸುವಂತೆ ಒತ್ತಾಯಿಸಿದರು. ಅಧಿಕಾರಿಗಳು ಬಾರದಿದ್ದರಿಂದ ರೈತರೇ 50 ತಿರುಣಿಗೆ ನೀರು ಹರಿಸಿದರು. ಸ್ಥಳಕ್ಕೆ ಬಂದ ಜಲಸಂಪನ್ಮೂಲ ಇಲಾಖೆ ನಂ.2 ವಿಭಾಗದ ಇಇ ಶ್ರೀ ಹರ್ಷಾ ಮತ್ತು ಎಇಇ ರಾಜೇಶವಸದ್, ಹೆಚ್ಚುವರಿ ನೀರು ಹರಿಸಿದ ಬಗ್ಗೆ ಆಕ್ಷೇಪಿಸಿದಾಗ ಕೆಲಕಾಲ ವಾಗ್ವಾದ ನಡೆಯಿತು. ಕಡಿಮೆ ನೀರು ಹರಿಸಿದರೆ ನಾಟಿ ಮಾಡಿದ ಭತ್ತಕ್ಕೆ ನೀರಿನ ಕೊರತೆಯಾಗಲಿದೆ. ಟೇಲೆಂಡ್‌ವರಿಗೂ ನೀರು ಸಿಗಲ್ಲ ಎಂದು ಕೇಸರಹಟ್ಟಿ, ಹೇರೂರು, ಜಂಗಮರಕಲ್ಗುಡಿ, ಮರಕುಂಬಿ ಭಾಗದ ರೈತರು ಆರೋಪಿಸಿದರು. ಸಂಕ್ರಾಂತಿವರಿಗೂ 50 ತಿರುಣಿಗೆ ನೀರು ಹರಿಸುವಂತೆ ಒತ್ತಾಯಿಸಿದರು.

    ಮಾಹಿತಿ ತಿಳಿದು ಕಾಡಾ ಅಧ್ಯಕ್ಷ ಎಚ್.ಎಂ.ತಿಪ್ಪೇರುದ್ರಸ್ವಾಮಿ ಆಗಮಿಸಿ, ಅಧಿಕಾರಿಗಳು-ರೈತರ ನಡುವೆ ಸಂಧಾನ ನಡೆಸಿದರು. ಬೆಳೆಗೆ ತೊಂದರೆ ಆಗದಂತೆ ನೀರು ಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. 50 ತಿರುಣಿಗೆ ನೀರು ಹರಿಸಿ, ಕೆಲದಿನ ನಂತರ ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರಿಂದ ರೈತರು ಸುಮ್ಮನಾದರು. ಈ ಸಂದರ್ಭ ಮಾತನಾಡಿದ ಎಚ್.ಎಂ.ತಿಪ್ಪೇರುದ್ರಸ್ವಾಮಿ, ರೈತರ ಬೇಡಿಕೆಯಂತೆ ಅಧಿಕಾರಿಗಳು ಸಹಕರಿಸಬೇಕೆಂದರು. ಎಇಇ ರಾಜೇಶ ವಸದ್ ಮಾತನಾಡಿ, ನಿಯಮದಂತೆ 35 ತಿರುಣಿಗೆ ನೀರು ಹರಿಸಬೇಕಿದ್ದು, ರೈತರ ಅನುಕೂಲಕ್ಕಾಗಿ 40 ತಿರುಣಿಗೆ ಹರಿಸಲಾಗಿದೆ. ಹೆಚ್ಚು ಕೇಳಿದರೆ ಟೇಲೆಂಡ್ ರೈತರ ಗತಿಯೇನು ಎಂದು ಪ್ರಶ್ನಿಸಿದರು.

    ರೈತರಾದ ಟಿ.ವೇಣುಗೋಪಾಲ, ವೆಂಕಟನಾರಾಯಣ, ಎನ್. ವೆಂಕಟೇಶ್ವರರಾವ್, ಎಂ.ಗಾಂಧಿ, ನಾಗೇಂದ್ರ, ಸೂರ್ಯನಾರಾಯಣರೆಡ್ಡಿ ಇತರರಿದ್ದರು.

    ವಿತರಣೆ ಕಾಲುವೆಗೆ ರೈತರ ಮನವಿಯಂತೆ ನೀರು ಹರಿಸಲಾಗುತ್ತಿದೆ. ಉಪಕಾಲುವೆಗಳಲ್ಲಿ ಆನ್ ಆ್ಯಂಡ್ ಆ್ ಪದ್ಧತಿ ಅನುಸಾರ ನೀರು ಹರಿಸಲಾಗುವುದು. ನೀರು ಮಿತ ಬಳಸಿದಷ್ಟು ಬೇಸಿಗೆ ಅವಧಿಗೆ ನೀರು ಉಳಿಸಲು ಸಾಧ್ಯ.
    | ಎಚ್.ಎಂ.ತಿಪ್ಪೇರುದ್ರಸ್ವಾಮಿ, ತುಂಗಭದ್ರಾ ಕಾಡಾಧ್ಯಕ್ಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts