More

    ಪರೀಕ್ಷಾ ಕೇಂದ್ರದಲ್ಲಿ ಹಬ್ಬದ ವಾತಾವರಣವಿರಲಿ: ಎಕ್ಸಾಂ ಹಾಲ್‌ನ ಮುಖ್ಯಸ್ಥರಿಗೆ ತಹಸೀಲ್ದಾರ್ ನಾಗರಾಜ್ ಸೂಚನೆ

    ಗಂಗಾವತಿ: ಪರೀಕ್ಷಾ ಕೇಂದ್ರದಲ್ಲಿ ಹಬ್ಬದ ವಾತಾವರಣ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ತಹಸೀಲ್ದಾರ್ ಯು. ನಾಗರಾಜ್ ಹೇಳಿದರು. ನಗರದ ತಾಪಂ ಮಂಥನ ಸಭಾಂಗಣದಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

    ಚುನಾವಣೆ ಮತ್ತು ಪರೀಕ್ಷೆ ಕ್ರಮಗಳು ಒಂದೇ ರೀತಿಯಾಗಿದ್ದು, ನಿಭಾಯಿಸುವ ಸಾಮರ್ಥ್ಯವಿದ್ದರೂ ಒತ್ತಡ ಹೆಚ್ಚಾಗಿರುತ್ತದೆ. ಪ್ರತಿ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿರಬೇಕು. ಕೊಠಡಿಗಳನ್ನು ಸ್ಯಾನಿಟೈಸೇಷನ್ ಮಾಡಬೇಕು. ಕೋವಿಡ್ ಬಾಧಿತರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ನಗರ ಪ್ರದೇಶದಲ್ಲಿ ನಗರಸಭೆ, ಗ್ರಾಮೀಣ ಭಾಗದಲ್ಲಿ ಗ್ರಾಪಂ ನೆರವು ಪಡೆಯಬೇಕು. ಇದರ ಜತೆಗೆ ಕಂದಾಯ ಇಲಾಖೆ ಸಿಬ್ಬಂದಿ ಸಾಥ್ ಕೂಡ ಇರುತ್ತದೆ ಎಂದು ತಿಳಿಸಿದರು.

    ಪ್ರಭಾರ ಬಿಇಒ ಹಾಗೂ ಸಮನ್ವಯ ಶಿಕ್ಷಣಾಧಿಕಾರಿ ವಿ.ಬಿ.ಗೊಂಡಬಾಳ್ ಮಾತನಾಡಿ, ಗಂಗಾವತಿ 17, ಕಾರಟಗಿ 8 ಮತ್ತು ಕನಕಗಿರಿ 4 ಸೇರಿ ತ್ರಿವಳಿ ತಾಲೂಕಿನಲ್ಲಿ 29 ಕೇಂದ್ರಗಳಿದ್ದು, 7944 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ. ಇದರಲ್ಲಿ 332 ಖಾಸಗಿ ಶಾಲೆ ವಿದ್ಯಾರ್ಥಿಗಳಿದ್ದಾರೆ. ಮಾ.28ರಂದು ಪರೀಕ್ಷೆ ಆರಂಭವಾಗಲಿದ್ದು, ಮೊದಲ ಹಂತದ ಸಭೆಯಲ್ಲಿ ಪರೀಕ್ಷಾ ಸಾಮಗ್ರಿ ವಿತರಿಸಲಾಗಿದೆ. ಇತರ ಇಲಾಖೆ ನೆರವಿನೊಂದಿಗೆ ಪರೀಕ್ಷೆಗಳನ್ನು ಯಶಸ್ವಿಗೊಳಿಸುವಂತೆ ಸಲಹೆ ನೀಡಿದರು.

    ಕೇಂದ್ರದ ಮುಖ್ಯಸ್ಥರಿಗೆ ಅವರ ಕರ್ತವ್ಯ, ಕೊಠಡಿ ಮೇಲ್ವಿಚಾರಕರ ನಿಯೋಜನೆ, ಪರೀಕ್ಷೆ ನಿಯಮಾವಳಿ ಪಾಲನೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರಟಗಿ ತಹಸೀಲ್ದಾರ್ ರವಿ ಅಂಗಡಿ, ತಾಪಂ ಇಒ ಡಾ.ಡಿ.ಮೋಹನ್, ಶಿಕ್ಷಣ ಸಂಯೋಜಕ ರಾಘವೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts