More

    ಭರವಸೆಯ ಊರುಗೋಲು ಗಾಂಧೀಜಿ

    ಭರವಸೆಯ ಊರುಗೋಲು ಗಾಂಧೀಜಿ| ಡಾ.ಬೆಳವಾಡಿ ಮಂಜುನಾಥ

    ದೇಶ ಹೊಸ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಗಾಂಧೀಜಿ ಒಂದು ಅನುಸರಣೀಯ ಮಾದರಿ. ತತ್ತ್ವಜ್ಞಾನಿಯಾಗಿ ಅಲ್ಲ, ಪ್ರಯೋಗಶೀಲರಾಗಿ ಬದುಕಿಗೆ ಹತ್ತಿರವಾಗುವುದರಿಂದ ಹಿರಿಯ ಸಖನಂತೆ, ಸುಪ್ತಪ್ರಜ್ಞೆಯ ಅನುಭವದಂತೆ ಚೇತೋಹಾರಿಯಾಗಿ ಎದುರಾಗುತ್ತಾರೆ. ಅವರ ಕ್ರಿಯಾಶೀಲತೆ, ಸವೋದಯತತ್ತ್ವ ಮತ್ತು ಪ್ರತಿರೋಧಶಕ್ತಿ ಎಲ್ಲ ಕಾಲದ ಸಮೀಕರಣ. ವಿದೇಶಗಳ ಆಮಿಷದ ಆಧುನಿಕ ಮನಸ್ಸುಗಳಿಗೆ ಕೂಡ ತನ್ನತನದ ಶೋಧಭಾವ, ನೈತಿಕತೆ, ಅಸ್ಮಿತೆಯಪ್ರಜ್ಞೆ ಪುಟಿ ಯುವಂತೆ ಕಾಡುತ್ತಾರೆ ಗಾಂಧಿ. ವಿಶೇಷವಾಗಿ ಕೃಷಿ ಮತ್ತು ಸಾಮಾಜಿಕ ಸಂಬಂಧಗಳ ಪುನರ್ ರಚನೆಗೆ ಅವರ ಚಿಂತನೆಗಳು ಮನಸ್ಸನ್ನು ಆವರಿಸಿದರೂ ಸಂಕೀರ್ಣ ವ್ಯಕ್ತಿತ್ವದಿಂದಾಗಿ ಗಾಂಧಿ ಅಷ್ಟು ಸುಲಭವಾಗಿ ದಕ್ಕುವುದಿಲ್ಲ.

    ಯೋಜನೆಗಳಾಗಿರಲಿ, ಗ್ರಾಮೀಣಾಭಿವೃದ್ಧಿಯಾಗಿರಲಿ, ಜೀವನೋಪಾಯದ ಸಂಕಷ್ಟಗಳಿರಲಿ ಒಂದು ಪ್ರಕ್ರಿಯೆಯಾಗಿ ಒಳಗೊಳ್ಳುವುದಾಗಿದೆ. ಇಂದಿನ ರಾಜಕೀಯ ಮತ್ತು ನೈತಿಕತೆ ನಡುವೆ ಕ್ರಾಂತಿಕಾರಿಯಾಗಿ ಗಾಂಧಿ ಹೆಚ್ಚು ಪ್ರಸ್ತುತ. ಗಾಂಧಿತತ್ತ್ವ ಅಹಿಂಸಾವಾದವೇ ಆದರೂ ಅದರೊಳಗಿನ ಪ್ರತಿರೋಧ ಅಪ್ಪಟ ಕ್ರಾಂತಿಕಾರಕ. ಜಾಗತೀಕರಣ ಮತ್ತು ಕರೊನಾದ ಅನಾಹುತಗಳಿಂದ ತತ್ತರಿಸಿರುವ ಭಾರತದಂಥ ರಾಷ್ಟ್ರಕ್ಕೆ ಗಾಂಧಿವಾದ ಭರವಸೆಯ ಊರುಗೋಲು. ಪ್ರತಿ ಸಮುದಾಯಕ್ಕೂ ಅದರದೇ ಆದ ಸ್ವಾಯತ್ತತೆ ಇರಬೇಕೆಂಬ ಅವರ ಪರಿಕಲ್ಪನೆ ಸ್ವಾವಲಂಬಿ ನೆಲೆಯದು. ಅದು ವಿಶ್ವವನ್ನೇ ಒಳಗೊಳ್ಳುವ ಜಾಗತೀಕರಣ ವ್ಯವಸ್ಥೆಗಿಂತ ಗಟ್ಟಿ ಮತ್ತು ಪರಿಣಾಮಕಾರಿ.

    ಗಾಂಧಿ ಬದುಕನ್ನೇ ಪ್ರಯೋಗಕ್ಕೆ ಒಡ್ಡಿಕೊಂಡವರು. ಜೀವ ಹಾಗೂ ಸಮಾಜದ ಸ್ವಾಸ್ಥ್ಯ ಸಂಬಂಧವನ್ನು ಇಡಿಯಾಗಿ ನಿರೀಕ್ಷಿಸಿದರು. ಸ್ವಚ್ಛತೆ, ಕೃಷಿ, ಪಾನನಿಷೇಧ, ನೈತಿಕತೆ, ಗ್ರಾಮಾಭಿವೃದ್ಧಿ, ಸವೋದಯ ಅವರ ಮಂತ್ರವಾದಂತೆ ವಿಜ್ಞಾನ, ತಂತ್ರಜ್ಞಾನದ ಕಾತರವನ್ನು ಮುಂದೂಡುತ್ತ ಬಂದರು. ದಕ್ಷಿಣ ಆಫ್ರಿಕಾದಲ್ಲಿ 21 ವರ್ಷ ಅಲ್ಲಿನ ಭಾರತೀಯರೊಂದಿಗೆ ಬಾಳಿದರು. ಸೆರೆಮನೆವಾಸವನ್ನೂ ಅನುಭವಿಸಿದರು. ಅದರ ಹಿಂದೆ ಸಮುದಾಯದ ಸಂರಕ್ಷಣೆಯ ಪ್ರಜ್ಞೆ ಸದಾಕ್ರಿಯಾಶೀಲವಾಗಿತ್ತು. ಇಂದು ಅದಕ್ಕೆ ಪರ್ಯಾಯವನ್ನು ಕಂಡುಕೊಳ್ಳಲಾರದ ಸ್ಥಿತಿ ಒದಗಿದೆ. ಸೃಜನಶೀಲ ಮನಸ್ಸು ಸ್ವಾವಲಂಬಿ ಬದುಕಿನ ಬಗ್ಗೆ ಪರೋಕ್ಷವಾಗಿ ತೀವ್ರ ಒತ್ತಡವನ್ನುಂಟು ಮಾಡಿದೆ. ಗ್ರಾಮಗಳ ಸರ್ವತೋಮುಖತ್ವದ ಭವಿಷ್ಯದಲ್ಲೇ ಸ್ವಾವಲಂಬಿ ಜಾಗತೀಕರಣದ ಆತ್ಮವಿಶ್ವಾಸವಿತ್ತು. ಹೊಸಜಾಗತೀಕರಣ ತಂದೊಡ್ಡುವ ಪರಿಣಾಮಗಳ ಅರಿವಿತ್ತು. ಗಾಂಧೀಜಿ ಸರಳ ವ್ಯಕ್ತಿತ್ವದ ಹಿಂದಿದ್ದ ಸಂಕೀರ್ಣತೆ ಯಾರಿಗೂ ಅರ್ಥವಾಗದಂಥದ್ದು. ಆದರೂ ಗಾಂಧಿ ನಿರೀಕ್ಷೆಗೂ ಮೀರಿ ಜನಮಾನಸವನ್ನು ಪ್ರವೇಶಿಸಿದ್ದು ರಹಸ್ಯವಾಗಿಯೇ ಇದೆ. ವಿವಿಧ ನೆಲೆಯಲ್ಲಿ ಗಾಂಧಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ ಅಭಿಪ್ರಾಯ ರೂಪಿಸಿಕೊಂಡವರು ಹಲವರು. ಧರ್ಮವನ್ನೂ ಗಾಂಧಿ ಸಾಮಾಜಿಕ ಸಮಾನತೆಯ ಸಾಮರಸ್ಯದ ಸಾಧನವಾಗಿ ಕಂಡರೇ ವಿನಾ ಮತಕ್ಕೆ ಅನ್ವಯಿಸಲಿಲ್ಲ. ಪರಸ್ಪರಾವಲಂಬನೆ ಅರ್ಥಪೂರ್ಣ ಸಂಯೋಗದಲ್ಲಿ ನೈತಿಕತೆಯೊಂದಿಗೆ ಸಂಪತ್ತು ವೃದ್ಧಿಸುವ ಪ್ರಗತಿಯನ್ನು ಬಯಸಿದರು. ಅವರಲ್ಲಿ ಅಡಗಿದ್ದ ಕೆಚ್ಚೆದೆ, ನಿರ್ಭೀತಿ ಮತ್ತು ಅಪೂರ್ವಸಾಮರ್ಥ್ಯದ ಮೂಲ ಅಧ್ಯಾತ್ಮಶಕ್ತಿಯೇ. ಸ್ವಯಂನಿಯಂತ್ರಣ, ಸ್ವಾವಲೋಕನ, ಸಂಯಮ, ಪಶ್ಚಾತ್ತಾಪ ಎಂಬ ಪರಿಕಲ್ಪನೆಗಳ ಅರ್ಥವ್ಯಾಪ್ತಿಯನ್ನು ವಿಸ್ತರಿಸಿದವರು ಗಾಂಧಿ. ಕನ್ನಡದಲ್ಲಿ ಗಾಂಧಿಸಾಹಿತ್ಯ ಇತರ ಭಾಷೆಗಳಷ್ಟು ವ್ಯಾಪಕವಾಗಿಲ್ಲ. ಕಳೆದೆರಡು ದಶಕಗಳಿಂದ ಗಾಂಧಿ ಬಗೆಗಿನ ಆಧ್ಯಯನ ಹೆಚ್ಚಿದೆ. ಅದರಲ್ಲಿ ರಾಜ್ ಮೋಹನ್ ಗಾಂಧಿಯವರ ‘ಎ ಟ್ರೂ ಸ್ಟೋರಿ ಆಫ್ ಅ ಮ್ಯಾನ್, ಹಿಸ್ ಪೀಪಲ್ ಅಂಡ್ ಆನ್ ಎಂಪೈರ್’, ನಾರಾಯಣ ದೇಸಾಯಿ ಅವರ ‘ಮೈ ಲೈಫ್ ಈಸ್ ಮೈ ಮೇಸೇಜ್’ (4 ಸಂಪುಟಗಳು) ರಾಮಚಂದ್ರ ಗುಹಾ ಅವರ ‘ಗಾಂಧಿ ಬಿಫೋರ್ ಇಂಡಿಯಾ’ ಪ್ರಮುಖ ಜೀವನಚಿತ್ರಗಳಾದರೆ, ಅವರ ಚಿಂತನೆಗಳನ್ನು ಕುರಿತ ಭಿಕುಪಾರೇಖ್ ಅವರ ‘ಗಾಂಧಿ ಎ ವೆರಿ ಶಾರ್ಟ್ ಇಂಟ್ರಡಕ್ಷನ್’, ಅರಂಧತಿ ರಾಯ್ ಅವರ ‘ದ ಅನ್ಹಿಲೇಷನ್ ಆಫ್ ಕಾಸ್ಟ್’ ಪ್ರಮುಖವಾಗಿವೆ.

    ಗ್ರಾಮ, ಖಾದಿ, ಚರಕ, ಅಹಿಂಸೆ, ಚಳವಳಿ, ಭಗವದ್ಗೀತೆ ಹೀಗೆ ಗಾಂಧಿ ತೆರೆದುಕೊಳ್ಳುತ್ತಾರೆ. ಸಾಮಾಜಿಕ ಸಂಬಂಧಗಳು ಮತ್ತು ಆರ್ಥಿಕ ಪ್ರಕ್ರಿಯೆ ನಡುವೆ ನೈತಿಕತೆಯ ಕಂದಕ ದೊಡ್ಡದಾಗುತ್ತಿರುವ ಸಂದರ್ಭದ ಒರೆಗಲ್ಲಾಗಿದ್ದಾರೆ. ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಗಾಂಧಿ ಕಾಯಕದ ಮಹತ್ವ ಮತ್ತು ಸಂತೃಪ್ತ ಬದುಕಿನ ಚಿಂತಕರಾಗಿ ನಿಲ್ಲುತ್ತಾರೆ.

    (ಲೇಖಕರು ಉಪನ್ಯಾಸಕರು)

    ‘ರಾಜ್ಯದಲ್ಲಿ ಶಾಲೆ ಪ್ರಾರಂಭಿಸುವುದೇ ಉತ್ತಮ’ ಎಂದ ಶಿಕ್ಷಣ ತಜ್ಞರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts