More

    ಬೋಳೂರು ವಿದ್ಯುತ್ ಚಿತಾಗಾರದಲ್ಲೇ ಶವಸಂಸ್ಕಾರ

    ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇನ್ನು ಮುಂದೆ ಕರೊನಾದಿಂದ ಸಾವು ಸಂಭವಿಸಿದ್ದಲ್ಲಿ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಬೋಳೂರು ವಿದ್ಯುತ್ ಚಿತಾಗಾರದಲ್ಲಿ ಶವಸಂಸ್ಕಾರ ಮಾಡಬೇಕೆಂದು ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ, ಕಾರ್ಪೋರೇಟರ್ ಜಗದೀಶ ಶೆಟ್ಟಿ ಬೋಳೂರು, ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತ ಮದನ್‌ಮೋಹನ್ ಹಾಗೂ ತಹಸೀಲ್ದಾರ ಗುರುಪ್ರಸಾದ್ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಬೋಳೂರು ಗ್ರಾಮದ ಹಿಂದು ರುದ್ರಭೂಮಿ ವಿದ್ಯುತ್ ಚಿತಾಗಾರವಾಗಿದ್ದು, ಕರೊನಾ ಪ್ರಕರಣಗಳಲ್ಲಿ ಮೃತ್ಯು ಸಂಭವಿಸಿದಾಗ ಆರೋಗ್ಯ ಇಲಾಖೆ ನಿಯಮಾವಳಿಯಂತೆ ಶವಸಂಸ್ಕಾರ ಮಾಡಲು ಯಾವುದೇ ರೀತಿಯ ಅಡಚಣೆ ಉಂಟಾಗಬಾರದು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

    ಸ್ಥಳೀಯರ ಮನವೊಲಿಕೆ: ಶವಸಂಸ್ಕಾರದ ವಿಚಾರವಾಗಿ ಎರಡನೇ ಬಾರಿಗೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಸ್ಥಳೀಯ ಕಾರ್ಪೋರೇಟರ್ ಜಗದೀಶ್ ಶೆಟ್ಟಿ ಬೋಳೂರು ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಮನವೊಲಿಸಲಾಗಿದೆ.

    ಅಂತ್ಯ ಸಂಸ್ಕಾರದ ಬಳಿಕ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಣೆ ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತದೆ. ಶವಸಂಸ್ಕಾರದಿಂದ ಸ್ಮಶಾನ ಪರಿಸರದ ನಿವಾಸಿಗಳಿಗೆ ತೊಂದರೆ ಇಲ್ಲ ಎಂದು ಸ್ಮಶಾನದ ಸುತ್ತ ಮುತ್ತಲಿನ ಸುಮಾರು 50 ಮನೆಗಳಿಗೆ ವೈಜ್ಞಾನಿಕ ಮಾಹಿತಿ ನೀಡಿ ತಪ್ಪು ತಿಳಿವಳಿಕೆ ದೂರ ಮಾಡಲಾಗಿದೆ. ವಾಸ್ತವ ಅರಿತು ಬೋಳೂರು ಪರಿಸರದ ನಿವಾಸಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಲು ಸಮ್ಮತಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

    ಸ್ಥಳೀಯ ಮುಖಂಡರಾದ ರಾಹುಲ್ ಶೆಟ್ಟಿ, ಸಂದೀಪ್, ಉಮಾಶಂಕರ್, ದಿನೇಶ್, ರತ್ನೋಜಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

    ಶವ ಸಂಸ್ಕಾರಕ್ಕೆ ಸಹಕರಿಸಿ: ಶಾಸಕ ಡಾ.ಭರತ್ ಶೆಟ್ಟಿ ಮನವಿ:
    ಮಂಗಳೂರು: ಮುಂದಿನ ದಿನಗಳಲ್ಲಿ ದುರದೃಷ್ಟವಶಾತ್ ಕೊವಿಡ್ 19 ಸೋಂಕಿನಿಂದ ಮೃತಪಟ್ಟ ಘಟನೆ ನಡೆದರೆ ಜನತೆ ಹಾಗೂ ರುದ್ರಭೂಮಿ ಸಮಿತಿಗಳು ಸ್ವಯಂಪ್ರೇರಿತರಾಗಿ ದಹನ ಕ್ರಿಯೆ ನಡೆಸಲು ಎಲ್ಲ ಸಹಕಾರ ನೀಡಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಮನವಿ ಮಾಡಿದ್ದಾರೆ. ವೈಜ್ಞಾನಿಕವಾಗಿ ಸಮಸ್ಯೆ ಇಲ್ಲ ಎಂಬುದನ್ನು ತಜ್ಞರು ಸ್ಪಷ್ಟಪಡಿಸಿದ್ದಾರೆ. ಅಮಾನವೀಯತೆಯ ಹೆಜ್ಜೆಯಿಂದ ಜಿಲ್ಲೆಗೆ ಮಾತ್ರವಲ್ಲ, ಹಿಂದು ಸಮಾಜಕ್ಕೂ ಕಳಂಕ. ಭೀತಿ ಹುಟ್ಟಿಸುವ, ತಪ್ಪು ಗ್ರಹಿಕೆಯ ಸಂದೇಶಗಳು ಬಂದರೆ ನಿರ್ಲಕ್ಷಿಸಬೇಕು ಎಂದು ವಿನಂತಿಸಿದ್ದಾರೆ.

    ಶವ ಸಂಸ್ಕಾರಕ್ಕೆ ಭೂಮಿ ಕೊಡುವೆನೆಂದ ವಜ್ರದೇಹಿ ಶ್ರೀ: ಮಂಗಳೂರು: ಕರೊನಾ ಸೋಂಕಿತ ವ್ಯಕ್ತಿಯ ಮೃತದೇಹ ಸುಟ್ಟರೆ ಆಸುಪಾಸಿನವರಿಗೆ ತೊಂದರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಗೊಂದಲ ಮುಂದುವರಿದರೆ ಅಂತ್ಯಕ್ರಿಯೆಗೆ ನನ್ನ ಭೂಮಿಯಲ್ಲೇ ಅವಕಾಶ ನೀಡುವುದಾಗಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದ್ದಾರೆ. ಷೋಡಶ ಸಂಸ್ಕಾರಗಳಲ್ಲಿ ಶವ ದಹನವೂ ಒಂದಾಗಿದ್ದು, ಅಂತ್ಯಸಂಸ್ಕಾರ ಪುಣ್ಯ ಕಾರ್ಯ. ಹಿಂದು ಧರ್ಮದಲ್ಲಿ ಆರ್ಷೇಯ ಉಕ್ತಿ. ಆ ಸಮಯದಲ್ಲಿ ಹೊರ ಬರುವ ಹೊಗೆಯ ಸೇವನೆಯಿಂದಲೂ ತೊಂದರೆಯಾಗುವುದಿಲ್ಲ. ಬೆಂಕಿಗೆ ಎಲ್ಲವನ್ನೂ ನಾಶಪಡಿಸುವ ಶಕ್ತಿಯಿದೆ. ಈ ವಿಚಾರದಲ್ಲಿ ಸುಳ್ಳಿನ ಕಂತೆಗಳಿಗೆ ಕಿವಿಗೊಟ್ಟು, ಕರೊನಾ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆಗೆ ಅಡ್ಡಿಪಡಿಸಬಾರದು ಎಂದು ಕೋರಿದ್ದಾರೆ.

    ಕಾಟಿಪಳ್ಳ ರುದ್ರಭೂಮಿ ಅವಕಾಶ: ಸುರತ್ಕಲ್: ಕರೊನಾದಿಂದ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೆ ಕೆಲ ಪ್ರದೇಶಗಳಲ್ಲಿ ವಿರೋಧ ವ್ಯಕ್ತವಾಗಿರುವುದು ಖೇದಕರ. ಶವ ಸಂಸ್ಕಾರಕ್ಕೆ ಕಾಟಿಪಳ್ಳ ಗಣೇಶಪುರ ಹಿಂದು ರುದ್ರಭೂಮಿಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಸ್ಮಶಾನ ಅಭಿವೃದ್ಧಿ ಸಮಿತಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts