More

    ಸರ್ಕಾರಿ ಶಾಲೆಗಳಿಗೆ ಅನುದಾನದ್ದೇ ಚಿಂತೆ

    ಎನ್.ಆರ್.ಪುರ: ತಾಲೂಕಿನಲ್ಲಿ ಖಾಸಗಿ ಶಾಲೆಗಳು ಆಂಭವಾಗುವುದಕ್ಕೂ ಮುನ್ನ ಸರ್ಕಾರಿ ಶಾಲೆಗಳಲ್ಲಿ ಇದ್ದ ಸಮಸ್ಯೆಗಳಲ್ಲಿ ಕೆಲವು ಇನ್ನೂ ಹಾಗೇ ಉಳಿದಿವೆ. ಹೀಗಾಗಿ ಶಾಲೆಗಳು ಅಭಿವೃದ್ಧಿ ಹೊಂದದೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ಸರ್ಕಾರ ಶಾಲೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುತ್ತಿಲ್ಲ.

    ಸರ್ಕಾರಿ ಶಾಲೆಗಳ ಪೈಕಿ ಶೇ.30ಕ್ಕೆ ಕಾಂಪೌಂಡ್ ಇಲ್ಲ. ಆದರೆ ಎಲ್ಲ ಶಾಲೆಗಳಿಗೂ ಆಟದ ಮೈದಾನಗಳಿವೆ. ಎಲ್ಲಿಯೂ ನೀರಿನ ಸಮಸ್ಯೆ ಇಲ್ಲ. ಕೆಲವು ಗುಡ್ಡಗಾಡು ಪ್ರದೇಶದ ಶಾಲೆಗಳಲ್ಲಿ ಮಾತ್ರ ಆಗಾಗ ನೀರಿನ ಸಮಸ್ಯೆ ಎದುರಾಗುತ್ತವೆ. ಇದನ್ನು ಸಂಬಂಧಪಟ್ಟ ಗ್ರಾಪಂ ನಿಭಾಯಿಸುತ್ತಿದೆ. ಕೆಲವು ಶಾಲೆಗಳಲ್ಲಿ ದಾನಿಗಳ ಸಹಕಾರದಿಂದ ಕಂಪ್ಯೂಟರ್ ತರಗತಿಗಳನ್ನು ತೆರೆಯಲಾಗಿದೆ.
    ಸರ್ಕಾರ ನೀಡುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಅಧಿಕಾರಿಗಳು ಕಳಿಸುವ ಪ್ರಸ್ತಾವನೆಗೆ ಸಂಪೂರ್ಣ ಹಣ ಬಿಡುಗಡೆಯಾಗುವುದಿಲ್ಲ. ಲಭ್ಯ ಅನುದಾನದಲ್ಲಿಯೇ ಅಧಿಕಾರಿಗಳು ಅಗತ್ಯವಿರುವ ಕೆಲಸ ಮಾಡಿಸುತ್ತಾರೆ. ಅನುದಾನದಿಂದ ಶೌಚಗೃಹಗಳ ದುರಸ್ತಿ, ಛಾವಣಿಗಳ ದುರಸ್ತಿ ಇತರ ಸಣ್ಣ ಪುಟ್ಟ ಕೆಲಸ ಮಾಡಲಾಗಿದೆ. ಚುನಾವಣೆ ಬಂದ ಸಂದರ್ಭದಲ್ಲಿ ಮತಗಟ್ಟೆ ಇರುವ ಶಾಲೆಗಳಿಗೆ ಮಾತ್ರ ತೇಪೆ ಹಚ್ಚುವ ಕಾರ್ಯವಾಗುತ್ತಿದೆ.
    ಕಡಹಿನಬೈಲು ಗ್ರಾಪಂನ ಗುಳ್ಳದಮನೆ ಸರ್ಕಾರಿ ಶಾಲೆ ಛಾವಣಿ ಸೋರುತ್ತಿದೆ. ಗ್ರಾಪಂ ಟಾರ್ಪಾಲ್ ಹೊದಿಸಿದೆ. ಶಾಲೆ ದುರಸ್ತಿ ಮಾಡಬೇಕಿದೆ. ತಾಲೂಕಿನ 54 ಶಾಲೆಗಳು ಅರಣ್ಯ ಇಲಾಖೆ ಜಾಗದ ವ್ಯಾಪ್ತಿಗೆ ಬರುತ್ತವೆ. 9 ಶಾಲೆಗಳಿಗೆ ದಾನಿಗಳು ಜಾಗ ನೀಡಿದ್ದಾರೆ. ಶಾಸಕರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ದಾನ ನೀಡಿರುವ ದಾನಿಗಳಿಂದ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ಜಾಗದಲ್ಲಿರುವ ಶಾಲೆಗಳ ಬಗ್ಗೆ ಎಫ್‌ಎಸ್‌ಒ(ಫಾರೆಸ್ಟ್ ಸೆಟ್ಲ್‌ಮೆಂಟ್ ಆಫೀಸರ್)ಗೆ 4(1) ನೋಟಿಫಿಕೇಷನ್ ಆಗುವ ಮೊದಲೇ ಆಕ್ಷೇಪಣೆ ಸಲ್ಲಿಸಿ ನಂತರ ಅರಣ್ಯ ಇಲಾಖೆಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳೋಣ ಎಂದು ಶಾಸಕರು ಸಭೆಯಲ್ಲಿ ಹೇಳಿದ್ದಾರೆ.
    ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕೊಠಡಿ, ಶೌಚಗೃಹ ಸಮಸ್ಯೆ, ಸ್ಮಾರ್ಟ್‌ಕ್ಲಾಸ್ ಇಲ್ಲ. ಇಂಥ ಶಾಲೆಗಳಿಗೆ ಮಕ್ಕಳು ದಾಖಲಾಗಲು ಮೀನಮೇಷ ಎಣಿಸುವಂತಾಗಿದೆ. ಜನಪ್ರತಿನಿಧಿಗಳು, ಪಾಲಕರು ಒಗ್ಗೂಡಿ ಶ್ರಮಿಸಿದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ.
    ಅಕ್ಷರ ದಾಸೋಹ ವ್ಯವಸ್ಥೆ: ಅಕ್ಷರ ದಾಸೋಹ ಯೋಜನೆಯಡಿ 5,840 ಮಕ್ಕಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. 98 ಶಾಲೆಗಳು ಅಕ್ಷರ ದಾಸೋಹ ವ್ಯಾಪ್ತಿಗೆ ಬರಲಿವೆ. ಈ ಬಾರಿ ಶೆಟ್ಟಿಕೊಪ್ಪ, ಮುತ್ತಿನಪುರ ಶಾಲೆಗಳು ಮುಚ್ಚಿರುವುದರಿಂದ 96 ಶಾಲೆಗಳು ಅಕ್ಷರ ದಾಸೋಹ ಯೋಜನೆಯ ಪ್ರಯೋಜನ ಪಡೆಯುತ್ತಿವೆ. 175 ಅಡುಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
    ಆನೆಯ ದಾರಿಯಲ್ಲಿ ಮಕ್ಕಳ ನಡಿಗೆ: ಮುತ್ತಿನಕೊಪ್ಪ ಗ್ರಾಪಂ ಮರಾಠಿ ಕ್ಯಾಂಪ್, ಆಲ್ದಾರ ಭಾಗದಿಂದ ಶಾಲೆಗೆ ಮಕ್ಕಳು ಬರುತ್ತಾರೆ. ಆದರೆ ಮಕ್ಕಳು ಬರುವ ದಾರಿಗೆ ಅಡ್ಡಲಾಗಿ ಲಕ್ಕವಳ್ಳಿ ವೈಲ್ಡ್‌ಲೈಫ್‌ನಿಂದ ಬೇಲಿ ನಿರ್ಮಿಸಲಾಗಿದೆ. ಇದರಿಂದ ಶಾಲಾ ಮಕ್ಕಳ ಓಡಾಟಕ್ಕೆ ತೊಂದರೆಯಾಗಿದೆ. ಹೀಗಾಗಿ ಕಾಡಿನೊಳಗೆ ಮಕ್ಕಳು ನಡೆದುಕೊಂಡೇ ಬರುತ್ತಾರೆ. ಆ ಭಾಗದಲ್ಲಿ ಆನೆಗಳ ಹಾವಳಿ ಇದೆ. ಆದ್ದರಿಂದ ಮಕ್ಕಳಿಗೆ ತೊಂದರೆಯಾಗಬಾರದೆಂದು ಬೇರೊಂದು ಮಾರ್ಗ ಮಾಡಲಾಗಿದೆ. ಅಲ್ಲಿ ಸ್ಥಳೀಯರೊಬ್ಬರು ದಾರಿ ಬಿಟ್ಟುಕೊಡಲು ಒಪ್ಪುತ್ತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಅಡ್ಡಿಪಡಿಸುವವರು ಎಷ್ಟೇ ಪ್ರಭಾವಿಯಾಗಿದ್ದರೂ ಲೆಕ್ಕಿಸದೆ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಶಾಸಕರು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದಾರೆ. ಈ ಸಮಸ್ಯೆ ಬಗೆಹರಿಸಬೇಕಿದೆ.
    ದಾಖಲಾತಿ ಹೆಚ್ಚಳಕ್ಕೆ ಆಂದೋಲನ: ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ದಾಖಲಾತಿ ಆಂದೋಲನ ನಡೆಸಲಾಗುತ್ತಿದೆ. ಶಾಲೆ ಇರುವ ಗ್ರಾಮದ ಅಂಗನವಾಡಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಪಾಲಕರ ಮನವೊಲಿಸಲಾಗುತ್ತಿದೆ. ಈ ಸಂಬಂಧ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಶಾಲೆ ಬಿಟ್ಟ ಮಕ್ಕಳನ್ನು ವಾಪಸ್ ಕರೆತರಲು ಆಕರ್ಷಕ ಕೊಡುಗೆಗಳ ಭರವಸೆ ನೀಡುವುದು, ಸಮುದಾಯದವರ ಸಹಕಾರದಿಂದ ಮಕ್ಕಳಿಗೆ ಕ್ರೀಡಾ ಸಾಮಗ್ರಿ ಒದಗಿಸಲಾಗುತ್ತಿದೆ. ಶಿಕ್ಷಣ ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ.
    ಮುತ್ತಿನಕೊಪ್ಪಕ್ಕೆ ಒಲಿಯದ ಕೆಪಿಎಸ್ ಭಾಗ್ಯ: ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ವರ್ಷಗಳಿಂದ ಎಲ್ಲರ ಸಹಕಾರದಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲು ಶಾಲಾಭಿವೃದ್ಧಿ ಸಮಿತಿ ಶ್ರಮಿಸುತ್ತಿದೆ. 1 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಮಕ್ಕಳ ದಾಖಲಾತಿ ಕಡಿಮೆ ಆಗಿದ್ದು, ಸರ್ಕಾರದ ಧೋರಣೆಯೇ ಕಾರಣವಾಗಿದೆ. ಶಿಕ್ಷಕರನ್ನು ನೇಮಿಸಿ ಕೆಪಿಎಸ್ ಆರಂಭಿಸಿದರೆ ಮಕ್ಕಳ ದಾಖಲಾತಿ ಹೆಚ್ಚಾಗುತ್ತದೆ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಮನೋಹರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts