More

    ಕೃಷಿ ಉತ್ಪನ್ನಗಳ ಮಾರಾಟಕ್ಕೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ

    ಶಿಕಾರಿಪುರ: ನಮ್ಮ ರೈತರು ಕೃಷಿಯ ಜತೆಗೆ ಮಾರುಕಟ್ಟೆಗಳಿಗೆ ಪೂರಕವಾಗಿ ನಿಮ್ಮದೇ ಆದ ಕೃಷಿ ಉತ್ಪಾದನೆಗಳನ್ನು ತಯಾರಿಸಬೇಕು. ಕೇಂದ್ರ ಸರ್ಕಾರ ನಿಮಗೆ ಬೆಂಬಲವಾಗಿ ಪುಣ್ಯಭೂಮಿ ಅಮೃತ್ ರೈತ ಉತ್ಪಾದಕರ ಕಂಪನಿಗೆ ಸಹಕಾರ ನೀಡುತ್ತದೆ. ಇದರ ಮೂಲಕ ರೈತರು ವ್ಯವಹರಿಸಿ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ತಾಲೂಕಿನ ಅರಿಶಿಣಗೆರೆಯಲ್ಲಿ ಕೃಷಿ ಮತ್ತು ಜಲಾನಯನ ಇಲಾಖೆ ಶನಿವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆ ರಾಜ್ಯದಲ್ಲಿ 57 ತಾಲೂಕಿನಲ್ಲಿದೆ. ಶಿಕಾರಿಪುರ ತಾಲೂಕಿನ ಅಂಜನಾಪುರ ಹೋಬಳಿಯ ಹಿತ್ಲ, ಅರಿಶಿಣಗೆರೆ, ಸಾಲೂರು, ಕಲ್ಮನೆ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 5000 ಹೆಕ್ಟೇರ್ ಪ್ರದೇಶದಲ್ಲಿ 2021-22ರಿಂದ ಪ್ರಾರಂಭವಾಗಿದೆ. ಈ ಯೋಜನೆಯು ಒಟ್ಟು ಮೂರು ಹಂತಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳುತ್ತದೆ ಎಂದು ವಿವರಿಸಿದರು.
    ಮೊದಲ ಹಂತದಲ್ಲಿ ಜನಜಾಗೃತಿ ಮೂಡಿಸಲು ಸಭೆ, ಬೀದಿನಾಟಕ ಪ್ರದರ್ಶನ, ಸ್ತಬ್ಧಚಿತ್ರ, ಕರಪತ್ರ, ಗ್ರಾಮಸಭೆ, ಮಹಿಳಾ ಸ್ವಸಹಾಯ ಸಂಘಗಳಿಗೆ ತರಬೇತಿ, ಬಳಕೆದಾರರಿಗೆ ಶಿಬಿರಗಳನ್ನು ಏರ್ಪಡಿಸಲಾಗುವುದು. ರೈತರು ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರೆ ಅನುಕೂಲವಾಗಲಿದೆ ಎಂದು ಹೇಳಿದರು.
    ಯೋಜನೆಯ ಅನುಷ್ಠಾನದ ಹಂತದಲ್ಲಿ 18000 ತೆಂಗು, 1000 ಮಾವು, 3000 ನಿಂಬೆ, 1000 ಸೀಬೆ, 2500 ಸಪೋಟ, 8000 ನುಗ್ಗೆ ಸಸಿಗಳನ್ನು ನೀಡಲಾಗುತ್ತದೆ. ಅರಣ್ಯೀಕರಣಕ್ಕೆ ಪೂರಕವಾಗಿ 4 ಹೆಕ್ಟೇರ್ ಕಿರು ಅರಣ್ಯ ಸ್ಥಾಪಿಸುವುದಲ್ಲದೆ, ರೈತರಿಗೆ ವೈಯಕ್ತಿಕ ಜಮೀನುಗಳಿಗೆ ಶ್ರೀಗಂಧ, ಸಾಗುವಾನಿ, ಕರಿಮತ್ತಿ ಸೇರಿದಂತೆ ಇತರೆ ಜಾತಿಗಳ 50000 ಸಸಿಗಳನ್ನು 149 ಹೆಕ್ಟೇರ್ ಪ್ರದೇಶದಲ್ಲಿ ನೆಡಲಾಗುವುದು. 34 ಅಮೃತ ಸರೋವರಗಳು, 8 ಪಶು ಚಿಕಿತ್ಸಾ ಶಿಬಿರಗಳು, 4 ಕೃಷಿ ಹೊಂಡಗಳು, 4 ನೀರುಗಾಲುವೆಗಳನ್ನು ಮಾಡಲಾಗುವುದು ಎಂದು ಮಾಹಿತಿ ನೀಡಿದರು.
    ಉತ್ಪಾದನಾ ಘಟಕದ ಅನುಷ್ಠಾನ ಯೋಜನೆ ಅಡಿಯಲ್ಲಿ 296 ಜೇನು ಪೆಟ್ಟಿಗೆ ವಿತರಣೆ, 64 ಚಾಪ್ ಕಾಟಲ್, 900 ಹಸುಗಳ ನೆಲಹಾಸು, 8 ಪಶುಚಿಕಿತ್ಸಾ ಶಿಬಿರ, 4752 ತರಕಾರಿ ಕಿಟ್, 2250 ಮೇವಿನ ಬೀಜದ ಕಿಟ್, ಮಹಿಳಾ ಸ್ವಸಹಾಯ ಸಂಘಗಳಿಗೆ 20 ರೊಟ್ಟಿ ಮಾಡುವ ಯಂತ್ರ, 17 ಪಲ್ವರೈಸರ್, 10 ಅಡಕೆ ದೋಟಿ, 9 ಎಣ್ಣೆಗಾಣ, 4 ಹಿಟ್ಟಿನ ಗಿರಣಿ, 1 ಶ್ಯಾಮಿಯಾನ ಸೆಟ್ ನೀಡಲಾಗುವುದು ಎಂದು ವಿವರಿಸಿದರು.
    ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಪುಣ್ಯಭೂಮಿ ಅಮೃತ್ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಅರಿಷಿಣಗೆರೆ ಗ್ರಾಪಂ ಅಧ್ಯಕ್ಷ ಗೋಪಾಲ್, ಕಲ್ಮನೆ ಗ್ರಾಪಂ ಅಧ್ಯಕ್ಷೆ ಸವಿತಾ ಕಾಳಿಂಗಪ್ಪ, ಹಿತ್ಲ ಗ್ರಾಪಂ ಅಧ್ಯಕ್ಷೆ ಕಮಲಮ್ಮ, ಸಾಲೂರು ಗ್ರಾಪಂ ಅಧ್ಯಕ್ಷ ಹನುಮಂತ ನಾಯ್ಕ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ, ಸಹಾಯಕ ನಿರ್ದೇಶಕ ಕಿರಣ್ ಕುಮಾರ್ ಹರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts