More

    ಮೇ ಸಾಹಿತ್ಯ ಮೇಳದ ನಿರ್ಣಯ ಈಡೇರಿಸಿ

    ವಿಜಯಪುರ: ಮೇ ಸಾಹಿತ್ಯ ಮೇಳದ ನಿರ್ಣಯಗಳಾಗಿದ್ದ ಎಂಟು ಅಂಶಗಳನ್ನು ಈಡೇರಿಕೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಲಡಾಯಿ ಪ್ರಕಾಶನ, ಕವಿ ಪ್ರಕಾಶನ, ಚಿತ್ತಾರ ಕಲಾಬಳಗ, ಮೇ ಸಾಹಿತ್ಯ ಮೇಳ ಬಳಗ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಮೇ ಸಾಹಿತ್ಯ ಮೇಳದ ನಿರ್ಣಯಗಳ ಈಡೇರಿಕೆಗೆ ಒತ್ತಾಯಿಸಿದರು.

    ನಗರದಲ್ಲಿ ಮೇ 27 ಮತ್ತು 28ರಂದು ವಿಜಯಪುರದಲ್ಲಿ ನಡೆದ ಮೇ ಸಾಹಿತ್ಯ ಮೇಳದಲ್ಲಿ ದೇಶದ ಮತ್ತು ರಾಜ್ಯದ ಸಾವಿರಾರು ಚಿಂತಕರು, ಸಾಹಿತಿಗಳು, ಸಂಘಟಿಕರು ಪಾಲ್ಗೊಂಡಿದ್ದರು. ಮೇಳದ ಸಮಾರೋಪ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ನೆಲ, ಜಲ, ಜನಗಳ ಹಿತವನ್ನು ಗಮನಿಸಿ ಎಂಟು ನಿರ್ಣಯಗಳನ್ನು ಸಮ್ಮತದಿಂದ ಅಂಗೀಕಾರ ಮಾಡಿದೆ. ಆ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ತಾವು ಮುಂದಾಗಬೇಕು. ಇದರಿಂದ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುವುದು ಎಂದು ಮನವರಿಕೆ ಮಾಡಿದರು.

    ವಿಜಯಪುರ ಜಿಲ್ಲೆ ಪಂಚನದಿಗಳ ಬೀಡು, ಉತ್ಕೃಷ್ಟ ಮಣ್ಣಿನ ಗುಣಧರ್ಮ ಹೊಂದಿದ, ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಹೆಸರುವಾಸಿ. ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯವನ್ನು ಸ್ವತಂತ್ರವಾದ ಕೃಷಿ ವಿಶ್ವವಿದ್ಯಾಲಯವನ್ನಾಗಿಸಬೇಕು. ಈಗಾಗಲೇ ಹಿಟ್ನಳ್ಳಿಯಲ್ಲಿ ಆರಂಭಿಸಲಾಗಿದ್ದ ಬಿ.ಟೆಕ್ (ಕೃಷಿ) ಮಹಾವಿದ್ಯಾಲಯ ಮತ್ತು ಆಲಮೇಲದಲ್ಲಿ ಮಂಜೂರಾದ ತೋಟಗಾರಿಕೆ ಮಹಾವಿದ್ಯಾಲಯಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸುವ ತಪ್ಪು ಮಾಡಲಾಗಿದ್ದು, ಅದನ್ನು ಸರಿಪಡಿಸಲು ಜಿಲ್ಲೆಯಲ್ಲಿ ಆ ಎರಡೂ ಮಹಾವಿದ್ಯಾಲಯಗಳನ್ನು ಪುನರಾರಂಭಿಸಬೇಕು ಎಂದು ಮನವಿ ಮಾಡಿದರು.

    ರೈತರು ಬೆಳೆದ ಬೆಳೆಗಳಿಗೆ ಸೂಕ್ತ ನ್ಯಾಯಯುತ ಬೆಂಬಲ ಬೆಲೆ ಘೋಷಿಸಬೇಕು. ಸರ್ಕಾರ ಶೀಥಲಗೃಹಗಳನ್ನು ಸ್ಥಾಪಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮಂಜೂರಾಗಿರುವ ವಿವಿಧ ಏತನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಭೀಮಾ ನದಿಯ ನೀರಿನ ಸಂಪೂರ್ಣ ಸದ್ಬಳಕೆಯಾಗಬೇಕು. ಡೋಣಿ ನದಿ ಪುನರುಜ್ಜೀವನಗೊಳಿಸಬೇಕು. ಗುಳೆ ತಪ್ಪಿಸಲು ಕೈಗಾರಿಕೆ ಸ್ಥಾಪಿಸಬೇಕು. ಬಡ ಕೃಷಿ ಕಾರ್ಮಿಕರು, ಭೂಹೀನರಿಗೆ ಕನಿಷ್ಟ 2 ಎಕರೆ ಜಮೀನು ಹಂಚಿಕೆ ಮಾಡಬೇಕು. ಸರ್ಕಾರಿ ವೈದ್ಯಕೀಯ ಕಾಲೇಜ್ ಮತ್ತು ಇಂಜಿನಿಯರಿಂಗ್ ಕಾಲೇಜ್ ಸ್ಥಾಪಿಸಬೇಕು. ವಿಜಯಪುರ ನಗರದಲ್ಲಿ ಎರಡು ಸರ್ಕಾರಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ವಸತಿ ಹೀನ ಬಡಜನರ ಕುಟುಂಬಗಳಿದ್ದು ಇವರೆಲ್ಲರಿಗೂ ನಿವೇಶನ ಹಂಚುವ ಹಾಗೂ ಮನೆ ಕಟ್ಟಿಸಿಕೊಡುವ ಕೆಲಸವಾಗಬೇಕು ಎಂದರು.

    ಜಿಲ್ಲೆಯ ಜನಗಳಿಗೆ ಪಡಿತರ ವ್ಯವಸ್ಥೆಯಲ್ಲಿ ಹತ್ತು ಕೆಜಿ ಅಕ್ಕಿ ನೀಡುವ ಬದಲಾಗಿ 5 ಕೆಜಿ ಅಕ್ಕಿ ಕೊಟ್ಟು ಇನ್ನೈದು ಕೆಜಿ ಬಿಳಿಜೋಳ ಅಥವಾ ಗೋಧಿ ಕೊಡುವ ಕೆಲಸವಾಗಬೇಕು. ಈ ಎಂಟು ನಿರ್ಣಯಗಳನ್ನು ಸರ್ಕಾರ ತುರ್ತಿನ ಅಗತ್ಯಕ್ಕೆಂದು ಪರಿಗಣಿಸಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು. ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಚಂದ್ರಶೇಖರ ಘಂಟೆಪ್ಪಗೋಳ, ಫಯಾಜ್ ಕಲಾದಗಿ, ಅಕ್ರಂ ಮಾಶಾಳಕರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts