ಬೆಳಗಾವಿ: ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಮಂಗಳವಾರ ಸಂಜೆ ಪೊಲೀಸ್ ಅಧಿಕಾರಿಗಳು ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ನಗರದ ಕೆಲ ಪೊಲೀಸ್ ಅಧಿಕಾರಿಗಳು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಾಯಣ್ಣನ ಅಭಿಮಾನಿಗಳೊಂದಿಗೆ ಸಭೆ ಆಯೋಜಿಸಿದ್ದರು.
ಪೀರನವಾಡಿ ಗ್ರಾಮದಲ್ಲಿ ಗ್ರಾಪಂ ವತಿಯಿಂದ 5 ಗುಂಟೆ ಜಾಗ ಕೊಡುತ್ತೇವೆ. ಆ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಸುತ್ತಲೂ ಉದ್ಯಾನ ನಿರ್ಮಿಸಿಕೊಳ್ಳಿ ಎಂದು ಪೊಲೀಸ್ ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರು. ಇದಕ್ಕೆ ಒಪ್ಪದ ರಾಯಣ್ಣನ ಅಭಿಮಾನಿಗಳು, ಹಲವಾರು ವರ್ಷಗಳಿಂದ ನಾವು ಪೀರನವಾಡಿ ವೃತ್ತದಲ್ಲೇ ಮೂರ್ತಿ ಪ್ರತಿಷ್ಠಾಪನೆಗೆ ಹೋರಾಟ ಮಾಡುತ್ತ ಬಂದಿದ್ದೇವೆ. ಅಲ್ಲಿಯೇ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ. ನಮಗೆ ಅನುಮತಿ ಕೊಡಿ ಎಂದು ಪಟ್ಟು ಹಿಡಿದರು ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಟ್ವೀಟ್: ಪೀರನವಾಡಿಯ ಮೂರ್ತಿ ವಿವಾದದ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿ, ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ತಿಳಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ರಾಯಣ್ಣನ ಅಭಿಮಾನಿಗಳ ಜತೆ ಪ್ರಥಮ ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ, ರಾಯಣ್ಣನ ಅಭಿಮಾನಿಗಳು ಗ್ರಾಮದ ವೃತ್ತದಲ್ಲೇ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಪಟ್ಟು ಹಿಡಿದಿದ್ದಾರೆ.
ರಾಯಣ್ಣನ ಮೂರ್ತಿ ವಿವಾದದ ಕುರಿತು ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ಹೋರಾಟ ಆರಂಭಿಸಿವೆ. ಕೆಲ ಸಂಘಟನೆಗಳು ಬೆಂಗಳೂರಿನಿಂದ ಬೆಳಗಾವಿಗೆ ಬಂದು ಹೋರಾಟ ಮಾಡುವ ತಯಾರಿ ನಡೆಸಿದ್ದು, ಈ ವಿವಾದ ಈಗ ರಾಜ್ಯದ ಗಮನ ಸೆಳೆಯುತ್ತಿದೆ.