More

    ಕ್ರೀಡೆಯಿಂದ ಕೆಲಸದ ಒತ್ತಡ ನಿವಾರಣೆ

    ಬೆಳಗಾವಿ: ಕಚೇರಿಗಳಲ್ಲಿನ ಕೆಲಸದ ಒತ್ತಡ ನಡುವೆಯೂ ಮನಸ್ಸಿಗೆ ಮುದ ನೀಡಬಲ್ಲ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತಿಯನ್ನು ನೌಕರರು ಬೆಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಲಹೆ ನೀಡಿದರು.

    ನೆಹರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಶುಕ್ರವಾರ ಆಯೋಜಿಸಿದ್ದ ಬೆಳಗಾವಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಎರಡು ದಿನದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್-19ನಂತಹ ಒತ್ತಡದ ದಿನಗಳಲ್ಲೂ ನೌಕರರು ಉತ್ತಮವಾಗಿ ತಮ್ಮ ಕೆಲಸಗಳ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಇದೀಗ ಕೋವಿಡ್-19 ಸೋಂಕು ನಿಯಂತ್ರಣದಲ್ಲಿದೆ. ಈ ಸಂದರ್ಭದಲ್ಲಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಿರುವುದು ಸಂತಸದ ವಿಷಯ. ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಎಲ್ಲ ಇಲಾಖೆಗಳ ನೌಕರರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡಾಭಿಮಾನ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಂಘಕ್ಕೆ ಜಮೀನು ಭರವಸೆ: ನೌಕರರ ಸಂಘದ ಪ್ರಮುಖ ಬೇಡಿಕೆಯಾಗಿರುವ ಎರಡು ಎಕರೆ ಜಮೀನು ಮಂಜೂರು ಮಾಡುವ ಕುರಿತು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಭರವಸೆ ನೀಡಿದರು.

    ಆರೋಗ್ಯ ವೃದ್ಧಿ: ಜಿಪಂ ಸಿಇಒ ದರ್ಶನ ಎಚ್.ವಿ. ಮಾತನಾಡಿ, ನೌಕರರು ಹಾಗೂ ಸಿಬ್ಬಂದಿ ವರ್ಗ ಕೆಲಸದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆ ಮತ್ತು ಮನರಂಜನೆ ಮೂಲಕ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಕೋವಿಡ್-19 ಕಡಿಮೆಯಾಗಿದೆ. ಆದರೆ, ಎಲ್ಲರೂ ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯವಾಗಿದೆ. ದೈಹಿಕ ಸಾಮರ್ಥ್ಯ, ಮಾನಸಿಕ ಆರೋಗ್ಯ ಇಲ್ಲದಿದ್ದರೆ ಯಾವ ಕೆಲಸಗಳೂ ಸುಸೂತ್ರವಾಗಿ ಆಗುವುದಿಲ್ಲ. ಹೀಗಾಗಿ ಇಂತಹ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

    ಬಿಮ್ಸ್ ನಿರ್ದೇಶಕಿ ಭಾನು ಬಳ್ಳಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗೌರಿಶಂಕರ ಕಡೇಚೂರ, ಡಿಡಿಪಿಐ ಡಾ. ಎ.ಬಿ. ಪುಂಡಲೀಕ, ಚಂದ್ರಶೇಖರ ಕೋಲಕಾರ, ಶ್ರವಣ ರಾಣವ್ವಗೋಳ, ಎಂ.ಎಸ್. ಕಲ್ಮಠ ಇತರರು ಇದ್ದರು.

    ಎನ್‌ಪಿಎಸ್ ರದ್ದು ಮಾಡಲು ಒತ್ತಾಯ

    ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಗದೀಶಗೌಡ ಪಾಟೀಲ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳ ನೌಕರರು ಒತ್ತಡದ ಕೆಲಸಗಳ ಮಧ್ಯೆಯೂ ಜನರಿಗಿರುವ ಸಮಸ್ಯೆ ನಿವಾರಿಸುವತ್ತ ಸ್ಪಂದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವು ನೌಕರರ ಬೇಡಿಕೆಯಂತೆ ಎನ್‌ಪಿಎಸ್ ರದ್ದು ಪಡಿಸಬೇಕು. ಅಲ್ಲದೆ, ಕೇಂದ್ರ ಸರ್ಕಾರಿ ನೌಕರರಿಗೆ ಸಿಗುತ್ತಿರುವ ವೇತನ ಸೌಲಭ್ಯಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಈಗಾಗಲೇ ರಾಜ್ಯ ಸರ್ಕಾರವು ಗಳಿಕೆ ರಜೆ ನಗದೀಕರಣ, ಶವ ಸಂಸ್ಕಾರಕ್ಕೆ ವೆಚ್ಚ, ಡಯಾಲಿಸೀಸ್ ಚಿಕಿತ್ಸೆಗೆ ರಜೆ, 10 ದಿನಗಳ ಸಿಎಲ್ಅನ್ನು 15 ದಿನಕ್ಕೆ ಹೆಚ್ಚಿಸುವುದು, ನೌಕರರ ಚಿಕಿತ್ಸೆಗೆ ಆರೋಗ್ಯ ಸಿರಿ ಯೋಜನೆ ಹೀಗೆ ಹಲವು ಬೇಡಿಕೆ ಈಡೇರಿಸಿರುವುದಕ್ಕೆ ಅಭಿನಂದನೆಗಳು. ಇದರಂತೆ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಬೇಕು ಎಂದು ವಿನಂತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts