More

    ಬಡವರ ಜಮೀನು ಬಿಡಿಸಿಕೊಡಿ

    ಮೂಡಿಗೆರೆ: ಶ್ರೀಮಂತರು ಕೆರೆ, ಗೋಮಾಳ ಜಾಗ, ಸ್ಮಶಾನಭೂಮಿ, ಹಿಡುವಳಿ ಜಾಗವನ್ನು ಒತ್ತುವರಿ ಮಾಡಿದ್ದನ್ನು ಖುಲ್ಲಾಗೊಳಿಸಿ. ಪಹಣಿ, ಸಾಗುವಳಿ ಚೀಟಿ, ಕಂದಾಯ ರಸೀದಿ ಇದ್ದರೂ ನಮ್ಮ ಜಾಗ ಕಾಣೆಯಾಗಿದೆ. ಅದನ್ನು ಹುಡುಕಿ ಕೊಡಿ. ನಮ್ಮ ಜಾಗದ ಪಕ್ಕಪೋಡಿ ಮಾಡಿಕೊಡಿ. ಫಾರ್ಮ್ ನಂ57ರಲ್ಲಿ ಜಾಗ ಮಂಜೂರು ಮಾಡಿ ಕೊಡಿ. 94ಸಿ ಯಲ್ಲಿ ಹಕ್ಕುಪತ್ರ ಒದಗಿಸಿ ಕೊಡಿ…

    ಹೀಗೆ ಹತ್ತಾರು ಬೇಡಿಕೆಗಳನ್ನು ಶುಕ್ರವಾರ ಗೋಣಿಬೀಡಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜನತಾದರ್ಶನದಲ್ಲಿ ಶಾಸಕಿ ನಯನಾ ಮೋಟಮ್ಮ ಅವರ ಮುಂದೆ ಜನ ಇರಿಸಿದರು.
    ಸಾಲುಮರ ಗ್ರಾಮದ ಎರಡು ರಸ್ತೆಗಳನ್ನು ದುರಸ್ತಿಪಡಿಸಿ. 60 ಕುಟುಂಬ ವಾಸವಿರುವ ಗ್ರಾಮದಲ್ಲಿ ಯಾರೊಬ್ಬರಿಗೂ ಹಕ್ಕುಪತ್ರ ನೀಡಿಲ್ಲ. ಗುಡಿಸಲಿನಲ್ಲಿದ್ದರೂ ಮನೆ ನೀಡಿಲ್ಲ. ಅಂಗನವಾಡಿ ಕಟ್ಟಡಕ್ಕೆ ಅನುದಾನ ಮಂಜೂರಾಗಿದ್ದರೂ ಜಾಗದ ಸಮಸ್ಯೆಯಿಂದ ಕಟ್ಟಡ ನಿರ್ಮಿಸದೆ ಸಮುದಾಯ ಭವನದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್ ನಿಲ್ಲಿಸಬೇಕು ಎಂದು ಸಾಲುಮರ ಗ್ರಾಮಸ್ಥರು ಅಹವಾಲು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ನಯನಾ ಮೋಟಮ್ಮ, ತ್ವರಿತ ಗತಿಯಲ್ಲಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಗೋಣಿಬೀಡು ಹೋಬಳಿಯಲ್ಲಿ ಸಂಜೆ 6.30 ರಿಂದ ರಾತ್ರಿ 9ರವರೆಗೆ ವಿದ್ಯುರ್ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ. ಕಾಡಾನೆ ಹಾವಳಿಯಿಂದ ಜನ ಭಯಭೀತರಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದಾಗ, ಜನ್ನಾಪುರದಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ ಎಂದು ಶಾಸಕಿ ತಿಳಿಸಿದರು.
    ಜನ್ನಾಪುರ ಸರ್ಕಾರಿ ಶಾಲೆಯಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿ 15 ದಿನ ಶಾಲೆ ಮಕ್ಕಳಿಗೆ ತೊಂದರೆ ನೀಡಲಾಗಿದೆ. ಗಣಪತಿ ಸಮಿತಿ ಪ್ರತಿಷ್ಠಾಪಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಶಂಕರಾಚಾರ್ಯ ಸಭೆಯ ಗಮನಕ್ಕೆ ತಂದರು.
    ಗೋಣಿಬೀಡು ಗ್ರಾಪಂ ಮಾಜಿ ಅಧ್ಯಕ್ಷೆ ರಾಧಾ ಮಿತ್ರೇಶ್ ಮಾತನಾಡಿ, ತಾಲೂಕಿನ ನ್ಯಾಯಬೆಲೆ ಅಂಗಡಿಯಿಂದ ಸೀಮೆಎಣ್ಣೆ ಒದಗಿಸಿ ಕೊಡಿ ಎಂದು ಒತ್ತಾಯಿಸಿದರು.
    ಗೋಣಿಬೀಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 3 ವೈದ್ಯರಿದ್ದಾರೆ. 9 ಸಿಬ್ಬಂದಿ ಹುದ್ದೆ ಇದ್ದು, ಇಬ್ಬರನ್ನು ಮಾತ್ರ ನೇಮಿಸಲಾಗಿದೆ. ಬೆಳಗ್ಗೆ 9.30ರಿಂದ ಸಂಜೆ 4.30 ರವರೆಗೆ ಮಾತ್ರ ಕರ್ತವ್ಯ ನಿರ್ವಹಿಸಿ ಬಾಗಿಲು ಮುಚ್ಚಿ ಹೋಗುತ್ತಾರೆ. ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು.
    ನನ್ನ ಜಮೀನಿನ ದಾರಿಯನ್ನು ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದಾರೆ. ನನಗೆ ದಾರಿ ಮಾಡಿಕೊಡಿ ಎಂದು ಜೇನುಬೈಲ್ ಗ್ರಾಮದ ಕೆಂಚಯ್ಯ ಮನವಿ ಮಾಡಿದರು. ಖಾದಿ ಗ್ರಾಮೋದ್ಯೋಗ ಮಂಡಳಿಯಿಂದ ಪಡೆದ ಸಾಲಕ್ಕೆ ಜಾಮೀನು ನೀಡಿದ್ದರಿಂದ ಅಧಿಕಾರಿಗಳು ನನ್ನ ಜಮೀನಿನ ಖಾತೆ ಮಾಡಿಕೊಡುತ್ತಿಲ್ಲ, ಖಾತೆ ಮಾಡಿಸಿಕೊಡಿ ಎಂದು ಅಣಜೂರು ಗ್ರಾಮದ ಸ್ಫೂರ್ತಿ ಕೋರಿದರು. ಗೋಣಿಬೀಡು ಗ್ರಾಪಂ ಸದಸ್ಯ ರಘು ಮಾತನಾಡಿ, ನನ್ನ ಜಮೀನಿನ ಸಾಲ ಮರುಪಾವತಿ ಮಾಡಿದ್ದೇನೆ. ಕೇವಲ 10 ಸಾವಿರ ರೂ. ಬಾಕಿ ಇದೆ, ಜಮೀನು ಹರಾಜಿಗೆ ಬಂದಿದೆ ಎಂದು ಸಭೆಯ ಗಮನಕ್ಕೆ ತಂದರು. ಚಿನ್ನಿಗ ಗ್ರಾಮದ 8 ಕುಟುಂಬದವರ ಜಮೀನು ಹರಾಜಿಗೆ ಬಂದಿದೆ ಎಂದು ಉಗ್ಗೆಹಳ್ಳಿ ಸುರೇಂದ್ರ ತಿಳಿಸಿದರು.
    ಒಟ್ಟು 121 ಅರ್ಜಿ ಸಲ್ಲಿಕೆಯಾದವು. 42 ಅರ್ಜಿ ಜಾಗಕ್ಕೆ ಸಂಬಂಧಿಸಿದ್ದು, 38 ನಿವೇಶನಕ್ಕೆ, 23 ವಿವಿಧ ಕುಂದು ಕೊರತೆಗೆ ಸಂಬಂಧಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts