More

    ಉಚಿತ ಮರಳು ನೀತಿ ಜಾರಿ ಅಂತಿಮ, ಸಚಿವ ಮುರುಗೇಶ್ ನಿರಾಣಿ ಮಾಹಿತಿ

    ಮಂಗಳೂರು: ರಾಜ್ಯದಲ್ಲಿ ಗಣಿ ನಿಯಮಾವಳಿ ಸರಳೀಕರಣಕ್ಕಾಗಿ ಹೊಸ ಗಣಿ ನೀತಿ ತರುವುದು ಹಾಗೂ ಅದರೊಂದಿಗೆ ಉಚಿತ ಮರಳು ನೀತಿಯನ್ನೂ ಜಾರಿಗೊಳಿಸುವ ನಿರ್ಧಾರ ಅಂತಿಮಗೊಳಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

    ಕರಾವಳಿಯಲ್ಲಿ ಪ್ರತ್ಯೇಕ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಪ್ರತ್ಯೇಕ ನೀತಿ ರೂಪಿಸಲಾಗುತ್ತಿದ್ದು, ಕರಡು ಈಗಾಗಲೇ ಸಿದ್ಧಗೊಂಡಿದೆ, ಈ ಭಾಗದ ಶಾಸಕರು, ಸಂಸದರೊಂದಿಗೂ ಚರ್ಚಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಜನರಿಗೆ ಹೊರೆಯಾಗಬಾರದು ಎನ್ನುವ ಕಾರಣಕ್ಕೆ ಉಚಿತ ಮರಳು ವಿತರಣೆಗೆ ನೀತಿ ಜಾರಿಗೆ ತರಲಾಗುತ್ತಿದೆ. 10 ಲಕ್ಷ ರೂ. ಒಳಗಿನ ಒಟ್ಟು ವೆಚ್ಚದ ಮನೆ ನಿರ್ಮಿಸುವವರಿಗೆ ಟನ್‌ಗೆ ಕನಿಷ್ಠ ದರ 100ರಿಂದ 200 ರೂ. ಒಳಗೆ ವಿಧಿಸಲಾಗುವುದು. ಸಾಗಾಟ ಶುಲ್ಕವನ್ನಷ್ಟೇ ಅವರು ತೆರಬೇಕಾಗುತ್ತದೆ. ಅದಕ್ಕಿಂತ ಜಾಸ್ತಿ ಇರುವವರಿಂದ ಸರ್ಕಾರ ನಿಗದಿ ಪಡಿಸಿದ ರಾಜಸ್ವವನ್ನು ವಸೂಲಿಬೇಕಾಗುತ್ತದೆ. ಸರ್ಕಾರದ ಕಾಮಗಾರಿಗಳನ್ನು ಗುತ್ತಿಗೆದಾರರು ನಿರ್ವಹಿಸಿದ್ದಲ್ಲಿ ರಾಜಸ್ವದ ಮೊತ್ತವನ್ನು ಅದರಿಂದಲೇ ತುಂಡರಿಸಿಕೊಂಡು ಬಿಲ್ ಮೊತ್ತ ಪಾವತಿಸಲಾಗುವುದು. ಈ ಎಲ್ಲ ವಿಚಾರಗಳೂ ಗಣಿ ನೀತಿಯಲ್ಲಿ ಇರಲಿವೆ ಎಂದು ವಿವರಿಸಿದರು.
    ಎಲ್ಲೆಲ್ಲಿ ಮರಳು ತೆಗೆಯಬಹುದು ಎನ್ನುವ ಅಂಶ ಇದರಲ್ಲಿ ಇರಲಿದೆ. ರಾಜ್ಯಾದ್ಯಂತ ಸೆಂಟ್ರಲೈಸ್ಡ್ ಜಿಪಿಎಸ್ ವ್ಯವಸ್ಥೆ ಮೂಲಕ ಮರಳು ವಿತರಣೆಯ ಟ್ರಾೃಕಿಂಗ್ ಮಾಡುವುದು ಕೂಡ ಇರಲಿದೆ, ಒಟ್ಟಿನಲ್ಲಿ ಹೊಸ ನೀತಿಯಿಂದಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ಜತೆಯಲ್ಲೇ ರಾಜಸ್ವ ಸಂಗ್ರಹವೂ ಹೆಚ್ಚಲಿದೆ ಎಂದರು.

    ಏಕಗವಾಕ್ಷಿ ಕ್ಲಿಯರೆನ್ಸ್: ಆಯಾ ಕಂದಾಯ ವಿಭಾಗವಾರು ಗಣಿ ಅದಾಲತ್‌ಗಳನ್ನು ನಡೆಸಿ, ಗಣಿಗಳ ಸಮಸ್ಯೆ, ಅವುಗಳಿಂದಾಗಿ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಚರ್ಚಿಸಿ ಇತ್ಯರ್ಥಗೊಳಿಸಲಾಗುವುದು. ಏ.30ರಂದು ಬೆಂಗಳೂರಿನಲ್ಲಿ ಅದಾಲತ್ ಶುರುವಾಗಲಿದ್ದು, ಅದರಲ್ಲೇ ಗಣಿ ನೀತಿ ಅನಾವರಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು. ಸದ್ಯ ಗಣಿಗಾರಿಕೆಗೆ ಏಳರಿಂದ ಎಂಟರಷ್ಟು ಇಲಾಖೆಗಳಿಂದ ಅನುಮೋದನೆ ಪಡೆಯಬೇಕಾಗಿದ್ದು, ಇದಕ್ಕೆ ಸಾಕಷ್ಟು ಸಮಯ ತಗಲುತ್ತದೆ. ಹಾಗಾಗಿ ಏಕ ಗವಾಕ್ಷಿ ಪದ್ಧತಿ ಮೂಲಕ ಕ್ಲಿಯರೆನ್ಸ್ ನೀಡುವುದಕ್ಕೆ ನಿರ್ಧರಿಸಲಾಗಿದ್ದು, ಸಮಯ ಉಳಿತಾಯವಾಗಲಿದೆ ಎಂದರು.

    ಇಲಾಖೆ ಸಿಬ್ಬಂದಿಗೆ ಸಮವಸ್ತ್ರ: ಗಣಿ ಇಲಾಖೆ ಸಿಬ್ಬಂದಿ ಕೆಲವೆಡೆ ರೇಡ್‌ಗೆ ಹೋದಾಗ ಅವರನ್ನು ಗುರುತಿಸದೆ ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ಅವರಿಗೆ ಪೊಲೀಸ್, ಅರಣ್ಯ ಇಲಾಖೆಯಂತೆ ರ‌್ಯಾಂಕ್ ಆಧರಿಸಿ ಸಮವಸ್ತ್ರ ನೀಡುವುದು, ಸೆಂಟ್ರಲೈಸ್ಡ್ ಜಿಪಿಎಸ್, ವಾಕಿಟಾಕಿ ನೀಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

    ಕರಾವಳಿ ಗಣಿಗಳು ನಿರಾಳ: ದ.ಕ, ಉಡುಪಿ ಜಿಲ್ಲೆಯಲ್ಲಿ ಕಲ್ಲು ಗಣಿಗಳು ಬಹುತೇಕ 2 ಎಕರೆಗಿಂತ ಕಡಿಮೆ ಪ್ರದೇಶದಲ್ಲಿರುವ ಕಾರಣ ಅಂತಹ ಕಡೆಗೆ ಸ್ಫೋಟಕ ಲೈಸೆನ್ಸ್ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಹಾಗಾಗಿ ಜಲ್ಲಿಕಲ್ಲು ಸಮಸ್ಯೆ ಉಂಟಾಗದು ಎಂದು ಸಚಿವ ನಿರಾಣಿ ತಿಳಿಸಿದರು. ರಾಜ್ಯದಲ್ಲಿ ಜೆಲಟಿನ್ ಸ್ಫೋಟ ಉಂಟಾದ ಕಾರಣ ದೊಡ್ಡ ಗಣಿಗಳು ಕಡ್ಡಾಯವಾಗಿ ಡಿಜಿಎಂಎಸ್ ಲೈಸೆನ್ಸ್ ಪಡೆದುಕೊಳ್ಳಬೇಕೆಂದು ಸೂಚಿಸಲಾಗಿದೆ. ಅದರಲ್ಲಿ 2 ಎಕರೆ ಕೆಳಗಿನ ಗಣಿಗಳಿಗೆ ವಿನಾಯಿತಿ ಇದೆ. ಇತರರು 90 ದಿನದೊಳಗೆ ಲೈಸೆನ್ಸ್ ಪಡೆದುಕೊಳ್ಳಬೇಕಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts