More

    ಉಪಾಹಾರ ಕೊಟ್ಟಿದ್ದ ದಲಿತರ ಮಕ್ಕಳಿಗೆ ಉಚಿತ ಶಿಕ್ಷಣ: ಗ್ರಾಮವಾಸ್ತವ್ಯದಲ್ಲಿ ಭೇಟಿ ನೀಡಿದ್ದ ಮನೆಯ ವಿದ್ಯಾರ್ಥಿಗಳಿಗೆ ಸೌಲಭ್ಯ; ಸಚಿವ ಅಶೋಕ್ ನಿರ್ಧಾರ

    | ರುದ್ರಣ್ಣ ಹರ್ತಿಕೋಟೆ ಬೆಳಗಾವಿ

    ಹಳ್ಳಿಗರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತೆಗೆದುಕೊಂಡು ಹೋಗುವ ಕಾರ್ಯಕ್ರಮವಾದ ‘ಗ್ರಾಮವಾಸ್ತವ್ಯ’ ಸಂದರ್ಭದಲ್ಲಿ ಉಪಾಹಾರಕ್ಕೆ ಹೋಗುವ ದಲಿತರ ಮನೆಯ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

    ಕಂದಾಯ ಸಚಿವ ಆರ್. ಅಶೋಕ್ ವಿಶಿಷ್ಟವಾದ ಗ್ರಾಮವಾಸ್ತವ್ಯದ ಮೂಲಕ ಇಲಾಖೆಯ ಆಡಳಿತವನ್ನು ಚುರುಕು ಗೊಳಿಸುವುದರೊಂದಿಗೆ ಕ್ರಾಂತಿಕಾರಕ ಬದಲಾವಣೆಗಳಿಗೆ ಮುನ್ನುಡಿ ಬರೆದಿದ್ದಾರೆ. ಅದರಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಶಿಕ್ಷಣಕ್ಕೂ ಆದ್ಯತೆ ನೀಡಲಾಗುತ್ತಿದೆ.

    ಅಶೋಕ್ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ದಲಿತರೊಬ್ಬರ ಮನೆಯಲ್ಲಿ ಉಪಾಹಾರಕ್ಕೆ ತೆರಳುವ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಅಶೋಕ್ ಕಂಡುಕೊಂಡಂತೆ ಅನೇಕರಿಗೆ ಪ್ರಾಥಮಿಕ ಶಿಕ್ಷಣವೂ ಮರೀಚಿಕೆ ಆಗಿದೆ. ಆದ್ದರಿಂದ ಉಪಾಹಾರಕ್ಕೆ ತೆರಳುವ ಮನೆಗಳ ಮಕ್ಕಳಿಗೆ ಹತ್ತನೇ ತರಗತಿ ತನಕ ಶಿಕ್ಷಣದ ಜವಾಬ್ದಾರಿ ಹೊರಲು ನಿರ್ಧರಿಸಿದ್ದಾರೆ. ಹತ್ತನೇ ತರಗತಿ ತನಕ ಆ ಮಕ್ಕಳ ಶಿಕ್ಷಣದ ಶುಲ್ಕ, ಯೂನಿಫಾಮ್ರ್, ಪುಸ್ತಕ, ಪೆನ್ನುಗಳಿಗೆ ಎಷ್ಟು ವೆಚ್ಚ ತಗಲುತ್ತದೆಯೋ ಅದನ್ನು ಅಶೋಕ್ ಅವರೇ ಭರಿಸಲಿದ್ದಾರೆ. ಒಮ್ಮೆಗೆ ಅಷ್ಟೂ ಮೊತ್ತವನ್ನು ಆ ಕುಟುಂಬಕ್ಕೆ ನೀಡಲಾಗುತ್ತದೆ. ಮಕ್ಕಳ ಶೈಕ್ಷಣಿಕ ವೆಚ್ಚಕ್ಕಲ್ಲದೆ ಬೇರೆ ಯಾವುದಕ್ಕೂ ಬಳಸದಂತೆ ಗಮನ ಹರಿಸಲಾಗುತ್ತದೆ.

    ಹಬ್ಬದ ವಾತಾವರಣ ಸಹಪಂಕ್ತಿ ಭೋಜನ: ಸಚಿವ ಅಶೋಕ್ ದಲಿತರ ಕೇರಿಯಲ್ಲಿ ಒಬ್ಬರ ಮನೆಯಲ್ಲಿ ಮಾತ್ರ ಉಪಾಹಾರ ಸೇವಿಸುತ್ತಾರೆ. ಆ ಮನೆಯಲ್ಲಿ ಮಾತ್ರ ಹಬ್ಬದ ವಾತಾವರಣ ಇರುತ್ತದೆ. ಉಳಿದಂತೆ ಇತರರ ಮನೆಗಳಲ್ಲಿ ನೀರಸ ವಾತಾವರಣ ಇರುತ್ತದೆ. ಆದ್ದರಿಂದ ದಲಿತ ಕೇರಿಯ ಎಲ್ಲರ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿಸಬೇಕು ಎಂಬ ಚಿಂತನೆ ನಡೆಸಲಾಗಿದೆ. ಕಂದಾಯ ಇಲಾಖೆಯ ಮೂಲಕವೇ ನೆರವು ನೀಡಿ ಎಲ್ಲರ ಮನೆಯಲ್ಲಿಯೂ ಹಬ್ಬದ ಅಡುಗೆ ಮಾಡಬೇಕು. ಅದನ್ನು ಎಲ್ಲರೂ ತಂದು ಒಂದೆಡೆ ಕೂತು ಸಹಪಂಕ್ತಿಯಲ್ಲಿ ಸೇವಿಸುವ ಮೂಲಕ ಸಾಮರಸ್ಯ ಮೂಡಿಸುವಂತೆ ಮಾಡಲಾಗುತ್ತದೆ. ಮುಂದಿನ ಗ್ರಾಮವಾಸ್ತವ್ಯ ಸಂದರ್ಭದಲ್ಲಿ ಇಂತಹ ಕ್ರಮವನ್ನು ಕೈಗೊಳ್ಳಲಾಗುತ್ತದೆ.

    2,700 ಗ್ರಾಮವಾಸ್ತವ್ಯ: ಅಶೋಕ್ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಜಾರಿಗೆ ತಂದ ನಂತರ ಅವರು 13 ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿದ್ದಾರೆ. ಆದರೆ, ಜಿಲ್ಲಾಧಿಕಾರಿಗಳಿಂದ ಕೆಳಹಂತದ ತನಕ ಅಧಿಕಾರಿಗಳು ಮಾಡಿರುವ ವಾಸ್ತವ್ಯ ಸೇರಿ ಒಟ್ಟಾರೆ 2,700 ಹಳ್ಳಿಗಳಲ್ಲಿ ಅಧಿಕಾರಿಗಳು ವಾಸ್ತವ್ಯ ಮಾಡಿದ್ದಾರೆ. ವಿವಿಧ ಇಲಾಖೆಗಳಿಂದ ಒಟ್ಟಾರೆ 3.60 ಲಕ್ಷ ಕುಟುಂಬಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಣೆ ಮಾಡಲಾಗಿದೆ.

    ಗ್ರಾಮವಾಸ್ತವ್ಯದಿಂದ ಕಂದಾಯ ಇಲಾಖೆಯ ಆಡಳಿತದಲ್ಲಿ ಅನೇಕ ಬದಲಾವಣೆ ತರಲು ಸಾಧ್ಯವಾಗಿದೆ. ಇನ್ನಷ್ಟು ಸುಧಾರಿಸುವ ಬಗ್ಗೆಯೂ ಆಲೋಚನೆ ಮಾಡಲಾಗುತ್ತಿದೆ. ಅದರ ಭಾಗವಾಗಿ ದಲಿತರ ಕೇರಿಯ ಕುಟುಂಬದ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಸೇರಿದೆ. ಎಲ್ಲ ಸಚಿವರು ಕೊನೆಯದಿನ ಕಡ್ಡಾಯವಾಗಿ ಹಳ್ಳಿಗಳಲ್ಲಿ ವಾಸ್ತವ್ಯ ಮಾಡುವಂತೆ ನೋಡಿಕೊಳ್ಳುತ್ತೇವೆ. ಇದರಿಂದ ಹೆಚ್ಚಿನ ಹಳ್ಳಿಗಳನ್ನು ತಲುಪಲು ಸಾಧ್ಯವಾಗುತ್ತದೆ.

    | ಆರ್. ಅಶೋಕ್ ಕಂದಾಯ ಸಚಿವ

    ತಿಂಗಳಿಗೆ ಎರಡು ವಾಸ್ತವ್ಯ: ವಿಧಾನಸಭೆ ಚುನಾವಣೆಯ ತನಕ ಸಿಗುವ ಅವಕಾಶ ಮೂರು ತಿಂಗಳು ಮಾತ್ರ. ಮೂರು ಹಳ್ಳಿಗಳಲ್ಲಿ ಮಾತ್ರ ವಾಸ್ತವ್ಯ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಮೂರು ತಿಂಗಳು ಕಾಲ ತಿಂಗಳಿಗೆ ಎರಡು ಗ್ರಾಮವಾಸ್ತವ್ಯ ಮಾಡಲು ಸಚಿವ ಅಶೋಕ್ ನಿರ್ಧರಿಸಿದ್ದಾರೆ. ಸಚಿವರು ಹಾಗೂ ಶಾಸಕರಿಂದ ಹೆಚ್ಚಿನ ಬೇಡಿಕೆ ಇದೆ. ಅದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಕೊನೆಯ ತಿಂಗಳಾದ ಮಾರ್ಚ್​ನಲ್ಲಿ ನಡೆಯಲಿರುವ ಗ್ರಾಮವಾಸ್ತವ್ಯದಲ್ಲಿ ಎಲ್ಲ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಯ ಒಂದು ಹಳ್ಳಿಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಲೇ ಆದೇಶ ಕೊಡಿಸಲು ಅಶೋಕ್ ನಿರ್ಧರಿಸಿದ್ದಾರೆ. ಎರಡು ಗ್ರಾಮ ವಾಸ್ತವ್ಯ ನಡೆಯುವುದರಿಂದ ಒಟ್ಟಾರೆ ಒಂದೇ ತಿಂಗಳಿನಲ್ಲಿ ಸಚಿವರು 56 ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿ ಸೌಲಭ್ಯಗಳನ್ನು ವಿತರಿಸಲು ಸಾಧ್ಯವಾಗುತ್ತದೆ. ಇದರಿಂದ ಹೆಚ್ಚಿನ ಜನರ ಮನೆ ಬಾಗಿಲಿಗೆ ಸರ್ಕಾರ ತಲುಪಲಿದೆ.

    ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸಿದ್ರೆ ಕಾನೂನುಕ್ರಮ; ಹೊರಬಿತ್ತು ಹೊಸ ಸುತ್ತೋಲೆ

    ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts